Advertisement

ವಿವಿಸಾಗರಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಿ

12:15 PM Jun 14, 2019 | Team Udayavani |

ಶಿವಮೊಗ್ಗ: ಭದ್ರಾ ಮೇಲ್ದಂಡೆ ಮೂಲಕ ಈ ಬಾರಿ ವಿವಿಸಾಗರಕ್ಕೆ ನೀರು ಹರಿಯಲು ಸೂಕ್ತ ಕ್ರಮ ಕೈಗೊಳ್ಳಿ. ಇದಕ್ಕೆ ಬೇಕಾದ ಸಹಕಾರ ಕೊಡಲು ನಾನು ಸಿದ್ಧ ಎಂದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಎಂಜಿನಿಯರಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಲ್ಲಿನ ಬಿಆರ್‌ ಪ್ರಾಜೆಕ್ಟ್‌ನಲ್ಲಿರುವ ತುಂಗಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಚಿತ್ರದುರ್ಗ ಕಾಲುವೆಗೆ ನೀರು ಹರಿಯಲು ಇನ್ನೂ ಎಷ್ಟು ವರ್ಷ ಬೇಕು ಎಂಬ ಪ್ರಶ್ನೆಗೆ ಮಾಹಿತಿ ಪಡೆದ ಅವರು, ಕೊನೆ ಪಕ್ಷ ವಿವಿ ಸಾಗರಕ್ಕಾದರೂ ನೀರು ಹರಿಯಬೇಕು. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಿ ಎಂದರು. ಅಜ್ಜಂಪುರ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ ಕೆಲಸವಿದ್ದು ಇದನ್ನು ಪೂರ್ಣಗೊಳಿಸಲು ರೈಲ್ವೆ ಇಲಾಖೆ ಅನುಮತಿ ಬೇಕು. ಮೇ ತಿಂಗಳೊಳಗೆ ಮಾಡುವುದಾಗಿ ತಿಳಿಸಿದ್ದರೂ ಆದರೂ ಇನ್ನೂ ಆಗಿಲ್ಲ. ಇದು ಪೂರ್ಣಗೊಂಡರೆ ನೀರು ಮುಂದೆ ಹರಿಯಲಿದೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದರು. ಪ್ರತಿ 1 ಮೀಟರ್‌ ಡೆಕ್‌ ನಿರ್ಮಾಣ ಮಾಡಿದರೂ ಕನಿಷ್ಠ 20 ದಿನ ಬೇಕು. ಮಳೆ ಶುರುವಾದರೆ ಯಾವ ಕೆಲಸವೂ ಆಗುವುದಿಲ್ಲ. ತಗಡಿನ ಶೆಡ್‌ ಹಾಕಿಕೊಂಡಾದರೂ ಕೆಲಸ ಮಾಡಿ. ಅದಕ್ಕೆ ಬೇಕಾದ ಹಣವನ್ನು ವೈಯಕ್ತಿಕವಾಗಿ ಕೊಡುವೆ ಎಂದರು. ರೈಲ್ವೆ ಇಲಾಖೆ ಅಧಿಕಾರಿಗಳು ಚಿತ್ರದುರ್ಗದಲ್ಲೇ ಇದ್ದಾರೆ. ಅಲ್ಲಿಯೇ ಅವರ ಬಳಿ ಮಾತನಾಡಬಹುದು ಎಂದು ಎಂಜಿನಿಯರ್‌ಗಳು ಸಲಹೆ ನೀಡಿದರು.

ಈ ಬಾರಿಯೂ ಡೌಟ್
ಸಭೆ ಆರಂಭದಿಂದಲೂ ಮುಖ್ಯ ವಿಷಯಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ವಿವಿ ಸಾಗರಕ್ಕೆ ನೀರು ಹರಿಯಲು ಏನೇನು ತೊಡಕುಗಳಿವೆ ತಿಳಿಸಿ ಎಂದರು. ಅಬ್ಬಿನಹೊಳೆ ಬಳಿ ಕಾಲುವೆ ಕಾಮಗಾರಿ ಬಾಕಿ ಇದ್ದು ಇಲ್ಲಿ ಭೂಮಿ ಬಿಟ್ಟುಕೊಡಲು ಅಲ್ಲಿನ ರೈತರು ಒಪ್ಪುತ್ತಿಲ್ಲ. 22 ಜನರಿಂದ 44 ಎಕರೆ ಬೇಕಾಗಿದೆ. ನಾವು ಎಕರೆಗೆ 20 ಲಕ್ಷ ಕೊಡಲು ಸಿದ್ಧರಿದ್ದೇವೆ. ಆದರೆ ಅವರು 80 ಲಕ್ಷ ಕೇಳುತ್ತಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸಿದರೆ ವಿವಿ ಸಾಗರಕ್ಕೆ ನೀರು ಹರಿಯುವ ಕಾಲುವೆ ಪೂರ್ಣಗೊಳ್ಳಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಾರಾಯಣಸ್ವಾಮಿ, ಮುಂದಿನ ಶನಿವಾರ ಸಭೆ ಫಿಕ್ಸ್‌ ಮಾಡುವಂತೆ ತಿಳಿಸಿದರು. ರೈತರು ಪೂರ್ಣ ಭೂಮಿ ಬಿಟ್ಟುಕೊಡದಿದ್ದರೂ 100 ಮೀಟರ್‌ ಕಾಲುವೆ ಮಾಡಿದರೆ ಸಾಕು. ಹಳ್ಳದ ಮೂಲಕ ವಿವಿ ಸಾಗರಕ್ಕೆ ನೀರು ಹರಿಸಬಹುದು. ಈ 100 ಮೀಟರ್‌ ವ್ಯಾಪ್ತಿಯಲ್ಲಿರುವ ಭೂಮಿ ಮಾಲೀಕನೇ ಹೋರಾಟದ ಮುಂದಾಳತ್ವ ವಹಿಸಿಕೊಂಡಿದ್ದಾನೆ ಎಂದು ಸಭೆಯ ಗಮನಕ್ಕೆ ತಂದರು. ಸರಕಾರವೇ ಅಲ್ಲಿ ಕೆಲಸ ಮಾಡುತ್ತಿದೆ. ಆದರೂ ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ಹೇಗೆ? ಜೂ. 18ರಂದು ಜಿಲ್ಲಾಧಿಕಾರಿ, ಎಸ್‌ಪಿ, ಇತರೆ ಅಧಿಕಾರಿಗಳ ಸಭೆ ಕರೆಯಿರಿ. ಚರ್ಚೆ ಮಾಡೋಣ ಎಂದರು.

ಚಿತ್ರದುರ್ಗಕ್ಕೆ 134 ಕಿಮೀ ಕಾಲುವೆ ಹಾಗೂ ಹನಿ ನೀರಾವರಿಗೆ 1592 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಒಟ್ಟು 12 ಪ್ಯಾಕೇಜ್‌ ಮಾಡಲಾಗಿದೆ. 367 ಕೆರೆ ಭರ್ತಿ ಮಾಡುವ ಜತೆಗೆ ಹನಿ ನೀರಾವರಿ ಕೈಗೊಳ್ಳಲಾಗುವುದು. ಇವೆಲ್ಲ ಯೋಜನೆಗಳು ಇನ್ನಷ್ಟೇ ಚಾಲನೆಗೊಳ್ಳಬೇಕಿದೆ ಎಂದರು.

Advertisement

ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ಶಿವಕುಮಾರ್‌, ಶಿವಮೊಗ್ಗ ವೃತ್ತದ ಅಧಿಧೀಕ್ಷಕ ಎಂಜಿನಿಯರ್‌ ವೇಣುಗೋಪಾಲ್, ಚಿತ್ರದುರ್ಗ ವೃತ್ತದ ಅಧಿಧೀಕ್ಷಕ ಎಂಜಿನಿಯರ್‌ ಎಸ್‌.ಎಸ್‌. ಪಾಳೇಗಾರ್‌ ಮತ್ತಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next