Advertisement

‘ಶಿವಮ್ಮ’ ಎಂಟ್ರಿಗೆ ಡೇಟ್‌ ಫಿಕ್ಸ್‌!

06:44 PM Jun 06, 2024 | Team Udayavani |

“ಶಿವಮ್ಮ’- ಹೀಗೊಂದು ಸಿನಿಮಾದ ಹೆಸರು ಆಗಾಗ ಕೇಳಿಬರುತ್ತಿತ್ತು. ಅದು ಚಿತ್ರೋತ್ಸವಗಳಿಗೆ ಆಯ್ಕೆಯಾದ, ಪ್ರಶಸ್ತಿ ಗೆದ್ದ ವಿಚಾರದಲ್ಲಿ. ಈಗ ಈ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಚಿತ್ರದ ನಿರ್ಮಾಪಕರಾದ ರಿಷಭ್‌ ಶೆಟ್ಟಿ ಮನಸ್ಸು ಮಾಡಿದ್ದಾರೆ. ಚಿತ್ರ ಜೂನ್‌ 14ರಂದು ತೆರೆಗೆ ಬರಲಿದೆ. ಜೈ ಶಂಕರ್‌ ಈ ಚಿತ್ರದ ನಿರ್ದೇಶಕರು.

Advertisement

“ನಿರ್ದೇಶಕ ಜೈಶಂಕರ್‌ ಆರ್ಯ ಅವರು ನಮ್ಮ ಕಥಾ ಸಂಗಮ ಚಿತ್ರದ ನಿರ್ದೇಶಕರಲ್ಲಿ ಅವರು ಒಬ್ಬರಾಗಿದ್ದರು. ಆನಂತರ ಜೈಶಂಕರ್‌ ಅವರು ಶಿವಮ್ಮ ಚಿತ್ರದ ಕಥೆ ಕುರಿತಾಗಿ ಹೇಳಿದರು. ಕಥೆ ಇಷ್ಟವಾಯಿತು. ನಿರ್ಮಾಣ ಆರಂಭಿಸಿದ್ದೆವು. ಕೋವಿಡ್‌ಗೂ ಮುನ್ನ ಆರಂಭವಾದ ಚಿತ್ರವಿದು. ಉತ್ತರ ಕರ್ನಾಟಕದ ಯರೇಹಂಚಿನಾಳ ನಿರ್ದೇಶಕರ ಊರು. ಈ ಚಿತ್ರದಲ್ಲಿ ನಟಿಸಿರುವ ಶಿವಮ್ಮ ಪಾತ್ರಧಾರಿ ಶರಣಮ್ಮ ಚಟ್ಟಿ ಅವರ ಊರು ಕೂಡ ಅದೇ ಊರಿನವರು. ಆ ಊರಿನ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ. ಈವರೆಗೂ ಹದಿನೇಳು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಶಿವಮ್ಮ ಪ್ರದರ್ಶನವಾಗಿ ಪ್ರಶಂಸೆ ಪಡೆದು ಕೊಂಡಿದೆ. ಜನರಿಗೂ ಈ ಚಿತ್ರ ಇಷ್ಟವಾಗಲಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಶಿವಮ್ಮ ಎಂಬ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯ ಮಾಡುತ್ತಿದ್ದೇವೆ’ ಎಂದರು ನಿರ್ಮಾಪಕ ರಿಷಭ್‌ ಶೆಟ್ಟಿ.

ನಿರ್ದೇಶಕ ಜೈ ಶಂಕರ್‌ ಮಾತನಾಡಿ, “ನಾನು ಮೂಲತಃ ಐಟಿ ಉದ್ಯೋಗಿ. ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ ಯರೇಹಂಚಿನಾಳ ನನ್ನ ತಂದೆಯ ಊರು. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ನನ್ನ ಊರಿನ ಬಗ್ಗೆ ಸಿನಿಮಾ ಮಾಡುವ ಆಸೆಯಾಯಿತು. ಹಾಗಾಗಿ ನಮ್ಮ ಊರಿಗೆ ಹೋದೆ. ಕೋವಿಡ್‌ನಿಂದಾಗಿ ಒಂದು ವರ್ಷ ಅಲ್ಲೇ ಇರಬೇಕಾಯಿತು. ಅದು ನನಗೆ ಅನುಕೂಲವಾಯಿತು. ಅಲ್ಲಿನ ಜನರ ಹಾಗೂ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಸಿಕ್ಕಿತ್ತು. ರಿಷಭ್‌ ಶೆಟ್ಟಿ ಅವರು ನಿರ್ಮಾಣಕ್ಕೆ ಮುಂದಾದರು’ ಎಂದು ವಿವರ ನೀಡಿದರು.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಶರಣ ಚಟ್ಟಿ, ತಮಗೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಾಹಿತಿ ಹಂಚಿಕೊಂಡರು. ಚಿತ್ರದಲ್ಲಿ ನಟಿಸಿರುವ ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ಶೃತಿ ಕೊಂಡೇನಹಳ್ಳಿ ತಮ್ಮ ಪಾತ್ರದ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next