ಬೆಂಗಳೂರು: ಅಫ್ಗಾನಿಸ್ತಾನ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಲ್ ರೌಂಡರ್ ಶಿವಂ ದುಬೆ ಅವರ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶಿವಂ ದುಬೆ ಅವರು ಒಬ್ಬ ಸುಧಾರಿತ ಆಟಗಾರನಾಗಿ ಬಂದಿದ್ದಾರೆ ಎಂದಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯವನ್ನು ಎರಡನೇ ಸೂಪರ್ ಓವರ್ ನಲ್ಲಿ ಗೆದ್ದ ಭಾರತ ತಂಡವು ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಕೂಟದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಶಿವಂ ದುಬೆ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮೂರು ಪಂದ್ಯಗಳಿಂದ ಅವರು 124 ರನ್ ಗಳಿಸಿದ್ದು, ಎರಡು ವಿಕೆಟ್ ಕೂಡಾ ಪಡೆದಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ಬಹಳ ಸಮಯದ ಬಳಿಕ ಆತ ಕಮ್ ಬ್ಯಾಕ್ ಮಾಡಿರುವುದು ನನಗೆ ಸಂತಸ ತಂದಿದೆ. ಅವನು (ದುಬೆ) ನಿಜವಾಗಿಯೂ ಸುಧಾರಣೆಗೊಂದು ಬಂದಿದ್ದಾನೆ. ಆತನಲ್ಲಿ ಉತ್ತಮ ಪ್ರತಿಭೆಯಿದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸರಣಿಯಲ್ಲಿ ಆತ ಆಡಿದ ರೀತಿಯ ಬಗ್ಗೆ ಸಂತಸವಿದೆ. ಇದು ಆತನಿಗೆ ಉತ್ತಮ ಆತ್ಮವಿಶ್ವಾಸ ನೀಡಬಲ್ಲದು. ನೀವು ಕಮ್ ಬ್ಯಾಕ್ ಮಾಡಿ ಸರಣಿಯಲ್ಲಿ ಪ್ಲೇಯರ್ ಆಫ್ ದಿ ಸಿರೀಸ್ ಆಗುವುದು ನಿಜಕ್ಕೂ ಗ್ರೇಟ್” ಎಂದರು.
ಶಿವಂ ದುಬೆ ಅವರು 2019ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದರು. ಬಳಿಕ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿದ್ದರು. 2023ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಭಾರತ ತಂಡಕ್ಕೆ ಬಂದಿದ್ದಾರೆ.