Advertisement

ಪರರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ಶಿವಳ್ಳಿ

10:46 AM Mar 21, 2022 | Team Udayavani |

ಕುಂದಗೋಳ: ಮನುಷ್ಯನ ದೇಹ ಹೋದ ಮೇಲೂ ಅವರ ಹೆಸರು ಜನರ ಬಾಯಲ್ಲಿ ಇದ್ದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಆ ದಾರಿಯಲ್ಲಿ ನಿಮ್ಮ ನಾಯಕ ಸಿ.ಎಸ್‌. ಶಿವಳ್ಳಿಯವರು ಬದುಕಿ ತೋರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಎಸ್‌.ಸಿದ್ದರಾಮಯ್ಯ ಹೇಳಿದರು.

Advertisement

ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ರವಿವಾರ ಮಾಜಿ ಸಚಿವ ದಿ| ಸಿ.ಎಸ್‌. ಶಿವಳ್ಳಿಯವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಮನುಷ್ಯರಲ್ಲಿ ಎರಡು ವಿಧ. ಒಂದು ಅವರಿಗೋಸ್ಕರ ಬದುಕುವ ಜನ, ಇನ್ನೊಂದು ಪರರಿಗೋಸ್ಕರ ಬದುಕುವ ಜನ. ಶಿವಳ್ಳಿಯವರು ಬದುಕಿನುದ್ದಕ್ಕೂ ಪರರಿಗೋಸ್ಕರ ಜೀವನ ಮುಡುಪಾಗಿಟ್ಟಿದ್ದರು.ಇಂದು ನೆರೆದ ಜನರೆ ಇದಕ್ಕೆ ಸಾಕ್ಷಿ ಎಂದರು.

ಬಸವಣ್ಣ ಸೇರಿದಂತೆ ಅನೇಕ ಮಹಾತ್ಮರು ಜಾತಿಯನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಆದರಿಂದು ಜಾತಿ ಗಟ್ಟಿಯಾಗಿದ್ದು, ಕೆಳವರ್ಗದ ಜನರು ಇನ್ನೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾರೂ ಸಹ ಹುಟ್ಟುವಾಗ ಇಂತಹ ಜಾತಿ ಬೇಕೆಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗಿದ್ದರೆ ನಾನು ಸಹ ಮೇಲ್ಜಾತಿಯಲ್ಲಿ ಹುಟ್ಟಲು ಅರ್ಜಿ ಹಾಕುತ್ತಿದ್ದೆ. ನಾವೆಲ್ಲ ಮನುಷ್ಯರೇ ಆಗಿದ್ದು, ಎಲ್ಲರೂ ಕೂಡಿ ಬಾಳಬೇಕು. ಶಿಕ್ಷಣ ಪಡೆದು ಸ್ವಾಭಿಮಾನ ಬದುಕು ಸಾಗಿಸಬೇಕು ಎಂದರು.

ರಾಜಕೀಯ ಜೀವನದಲ್ಲಿ ಪ್ರಾಮಾಣಿಕರು ಸಿಗುವುದು ಅಪರೂಪ. ಅಂದು ಕೈ-ಬಾಯಿ ಸ್ವಚ್ಛವಿಟ್ಟುಕೊಂಡ ಶಿವಳ್ಳಿಯವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಅವರಲ್ಲಿ ಎಳ್ಳಷ್ಟು ಅಹಂಕಾರ ಇರಲಿಲ್ಲ, ಆದರೆ ಕೆಲವರು ಶಾಸಕರಾದರೆ ಸಾಕು ಅಹಂಕಾರ ತುಂಬಿ ತುಳುಕುತ್ತಿರುತ್ತದೆ. ಆದರೆ ಶಿವಳ್ಳಿ ಅವರ ಹಾದಿಯನ್ನೇ ದೀಪವಾಗಿಸಿಕೊಂಡ ಕುಸುಮಾವತಿ ಅವರು ಸಹ ಸರಳತೆಯಿಂದ ಬಡಜನರ ಕೆಲಸ ಮಾಡುತ್ತಿದ್ದಾರೆ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬದುಕಿದರೆ ಶಿವಳ್ಳಿಯವರ ಹಾಗೆ ಬದುಕಬೇಕು. ಅಂದಾಗ ಮಾತ್ರ ಭೂಮಿಯ ಮೇಲಿನ ಹುಟ್ಟು ಸ್ವಾರ್ಥಕವಾದಂತೆ. ಕುಸುಮಾವತಿ ಶಿವಳ್ಳಿಯವರು ಮಹಿಳೆಯಾದರೂ ತಾಲೂಕಿನಲ್ಲಿ ಓಡಾಡಿಕೊಂಡು ಉತ್ತಮ ಶಾಸಕತ್ವ ನಿರ್ವಹಿಸುತ್ತಿದ್ದಾರೆ ಎಂದರು.

Advertisement

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ನಾನು ರಾಜಕೀಯ ಕುಟುಂಬದಿಂದ ಬಂದಿಲ್ಲ, ರಾಜಕಾರಣ ಕಂಡಿಲ್ಲ, ಆದರೆ ನಿಮ್ಮೆಲ್ಲರ ಪ್ರೀತಿಯಿಂದ ಶಾಸಕಿಯಾಗಿದ್ದೇನೆ. ನನ್ನ ಪತಿದೇವರ ಹಾದಿಯಲ್ಲಿಯೇ ಸಾಗುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ-ವಿಶ್ವಾಸ ನಮ್ಮ ಪತಿಯ ಮೇಲಿದ್ದು ಅದಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಶಾಸಕರಾದ ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ಸಲೀಂ ಅಹ್ಮದ, ಮಾಜಿ ಶಾಸಕ ಎನ್‌.ಎಚ್‌ ಕೋನರಡ್ಡಿ, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಮಾಜಿ ಶಾಸಕ ಎಮ್‌. ಎಸ್‌. ಅಕ್ಕಿ ಮಾತನಾಡಿ, ಶಿವಳ್ಳಿಯವರ ಆದರ್ಶಗಳು ನಮ್ಮ ರಾಜಕೀಯ ಜೀವನಕ್ಕೆ ದಾರಿ ದೀಪವಾಗಿದ್ದು, ಅವರ ಬದುಕು ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.

ಮುಕ್ತಿಮಂದಿರದ ಶ್ರೀ ವಿಮಲರೇಣುಕ ಮುಕ್ತಿಮನಿ ಸ್ವಾಮೀಜಿ, ಕಲ್ಯಾಣಪುರ ಶ್ರೀ ಬಸವಣ್ಣಜ್ಜನವರು, ಬೆಳಗಾವಿಯ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ, ಮನಸೂರ ಶ್ರೀ ಬಸವರಾಜ ದೇವರು ಆರ್ಶೀವಚನ ನೀಡಿದರು.

ಮುಖಂಡರಾದ ಅಡಿವೆಪ್ಪ ಶಿವಳ್ಳಿ, ಷಣ್ಮುಖ ಶಿವಳ್ಳಿ, ಮುತ್ತು ಶಿವಳ್ಳಿ, ಅಮರಶಿವಾ ಶಿವಳ್ಳಿ, ಬಾಬಣ್ಣ ಬೆಟಗೇರಿ, ಅರವಿಂದ ಕಟಗಿ, ವಿಜಯಕುಮಾರ ಹಾಲಿ, ಸಕ್ರಪ್ಪ ಲಮಾಣಿ, ದಯಾನಂದ ಕುನ್ನೂರ, ಜಗದೀಶ ಉಪ್ಪಿನ, ಸುರೇಶ ಗಂಗಾಯಿ, ಚಂದ್ರಶೇಖರ ಜುಟ್ಟಲ, ಉಮೇಶ ಹೆಬಸೂರ, ಎಚ್‌.ಎಸ್‌. ಲಕ್ಷ್ಮೇಶ್ವರ, ಗುರು ಚಲವಾದಿ, ಬಸವರಾಜ ಸಿರಸಂಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next