Advertisement

ಶಿವಕುಮಾರ ಸ್ವಾಮೀಜಿ ಯುಗ ಪುರುಷ

02:34 PM Apr 02, 2022 | Team Udayavani |

ಬೀದರ: ಬಸವಣ್ಣನವರ ನಂತರದ ಎರಡನೇ ಯುಗ ಪುರುಷ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಬಣ್ಣಿಸಿದರು.

Advertisement

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಶಿವನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಡಾ| ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳ ಕಾಲವು ಎರಡನೇ ಬಸವ ಯುಗ ಆಗಿತ್ತು. 900 ವರ್ಷಗಳ ನಂತರ ಕಾಯಕ, ದಾಸೋಹ ಸೇರಿದಂತೆ ಬಸವಾದಿ ಶರಣರ ತತ್ವಗಳನ್ನು ಮತ್ತೆ ಚಾಚೂತಪ್ಪದೇ ಆಚರಣೆಗೆ ತಂದ ಶ್ರೇಯ ಅವರದ್ದಾಗಿತ್ತು ಎಂದು ಹೇಳಿದರು.

ಲಿಂಗ ಪೂಜೆ, ಜಂಗಮ ದಾಸೋಹವೇ ಅವರಿಗೆ ಸಂಭ್ರಮವಾಗಿತ್ತು. ಭಕ್ತರು ಕೊಟ್ಟ ಧನ, ಧಾನ್ಯದಿಂದ ನಿರಂತರ ಆಶ್ರಯ, ಅನ್ನ, ಅಕ್ಷರ ದಾಸೋಹ ಮಾಡಿ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಬದುಕು ಹಸನಾಗಿಸಿದ್ದರು. ಅವರ ದಾಸೋಹ ತತ್ವವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕಿದೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಾಬು ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಸಿದ್ಧಗಂಗಾ ಶ್ರೀ ಈ ಭೂವಿಗೆ ಬಂದ ದೇವರಾಗಿದ್ದರು. ಅವರ ಸಮಾಜೋಧಾರ್ಮಿಕ ಕಾರ್ಯಗಳನ್ನು ವರ್ಣಿಸಲು ಪದಗಳೇ ಸಾಲವು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಆದರ್ಶ ತತ್ವಗಳನ್ನು ಎಲ್ಲರೂ ನಿಜ ಜೀವನದಲ್ಲಿ ಆಚರಣೆಗೆ ತರಬೇಕು ಎಂದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ಮಚ್ಚೆ ಮಾತನಾಡಿದರು. ಸಾಹಿತಿ ಮೇನಕಾ ಪಾಟೀಲ ಅವರು ಡಾ| ಶಿವಕುಮಾರ ಸ್ವಾಮೀಜಿ ಕುರಿತು ಉಪನ್ಯಾಸ ನೀಡಿದರು.

Advertisement

ಲಿಂಗಾಯತ ಮಹಾಮಠದ ಪ್ರಭುದೇವರು ಸಮ್ಮುಖ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪೂರ, ಪ್ರಮುಖರಾದ ಸಿದ್ಧಾರೆಡ್ಡಿ ನಾಗೂರಾ, ನಾಗಭೂಷಣ ಹುಗ್ಗೆ, ಡಾ| ಸಿ. ಆನಂದರಾವ್‌, ನಾಗಶೆಟ್ಟಿ ಧರಂಪೂರ, ಶಿವಪುತ್ರ ಪಟಪಳ್ಳಿ, ಬಾಲಾಜಿ ಬಿರಾದಾರ, ಸಂಜುಕುಮಾರ ಜಮಾದಾರ್‌, ವಿನೋದ ಪಾಟೀಲ ಚಾಂಬೋಳ, ಸಂಜುಕುಮಾರ ಹುಣಜಿ, ಸಾಯಿಕುಮಾರ ಅಷ್ಟೂರು ಇದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next