Advertisement

500ರ ಗಡಿ ದಾಟಿದ ತುಳುವಿನ ವಿಭಿನ್ನ ನಾಟಕ: ಚಾರಿತ್ರಿಕ ದಾಖಲೆ ಸೃಷಿಸಿದ “ಶಿವದೂತೆ ಗುಳಿಗೆ’

11:20 PM Jan 03, 2024 | Team Udayavani |

ಮಂಗಳೂರು: “ರೂಪೊಡು ಕರ್ಗಂಡ ಕರಿಯೆ… ಧರ್ಮೊನು ದಂಟ್‌ಂಡ ಕೆರ್‌ವೆ.. ಮುಕ್ಕಣ್ಣ ಮೆಯಿಜತ್ತಿ ಬೆಗರ್‌.. ಉಂಡಾಂಡ್‌ ಸತ್ಯೊದ ತುಡರ್‌.. ಬೆಮ್ಮೆರೆ ಸೃಷ್ಟಿ ಗುಳಿಗನ ದಿಟ್ಟಿ ಮಾಮಲ್ಲ ಶಕ್ತಿ… ಶಿವದೂತೆ ಗುಳಿಗೆ..’

Advertisement

ತುಳು ರಂಗಭೂಮಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರದರ್ಶನ ಹಾಗೂ ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿ ಚಾರಿತ್ರಿಕ ದಾಖಲೆ ನಿರ್ಮಿಸಿದ “ಶಿವದೂತೆ ಗುಳಿಗೆ’ ನಾಟಕ 555ನೇ ಸಂಭ್ರಮದತ್ತ ಮುನ್ನುಗ್ಗುತ್ತಿದೆ.
ತುಳು ರಂಗಭೂಮಿ ಹಾಗೂ ಸಿನೆಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ವಿಜಯ್‌ ಕುಮಾರ್‌ ಕೊಡಿಯಾಲಬೈಲ್‌ ನಿರ್ದೇಶನದಲ್ಲಿ “ಶಿವದೂತೆ ಗುಳಿಗೆ’ ಕರಾವಳಿಯ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
2020 ಜ. 2ರಂದು “ಶಿವದೂತೆ ಗುಳಿಗೆ’ ಮೊದಲ ಪ್ರದರ್ಶನ ಕಂಡಿತ್ತು. ದ.ಕ., ಉಡುಪಿ, ಕೇರಳ, ದುಬಾೖ, ಮಸ್ಕತ್‌, ಬಹ್ರೈನ್‌, ಮುಂಬಯಿ, ಪುಣೆ, ನಾಸಿಕ್‌, ಗುಜರಾತ್‌, ಬರೋಡ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮಡಿಕೇರಿ, ಘಟ್ಟ ಪ್ರದೇಶ ಹಾಗೂ ಕರ್ನಾಟಕದಾದ್ಯಂತ ಪ್ರದರ್ಶನಗೊಂಡು 2025ರ ವರೆಗೂ ಅನೇಕ ರಾಜ್ಯ-ವಿದೇಶಗಳಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ತುಳು ಹಾಗೂ ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಂಡ ನಾಟಕ ಕೆಲವೇ ಸಮಯದಲ್ಲಿ ಮಲಯಾಳದಲ್ಲೂ ಪ್ರದರ್ಶನಕ್ಕೆ ಅಣಿಯಾಗಿದೆ.

15 ಲಕ್ಷ ಮಂದಿ ವೀಕ್ಷಣೆ
ಇಲ್ಲಿಯವರೆಗೆ ಸುಮಾರು 15 ಲಕ್ಷ ಮಂದಿ ಈ ನಾಟಕವನ್ನು ವೀಕ್ಷಿಸಿದ್ದಾರೆ. ಕೆಲವು ಪ್ರದರ್ಶನವನ್ನು 5ರಿಂದ 8 ಸಾವಿರ ಮಂದಿ ವೀಕ್ಷಿಸಿದ್ದೂ ಇದೆ. 2025ರ ಡಿಸೆಂಬರ್‌ನ ಪ್ರದರ್ಶನ ಕೂಡ ಈಗಲೇ ಬುಕ್ಕಿಂಗ್‌ ಆಗಿರುವುದು ವಿಶೇಷ.

ರಂಗ ವೇದಿಕೆಯಲ್ಲಿ “ಗುಳಿಗ’ನ ದೃಷ್ಟಿ!
ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಹುಟ್ಟು-ಬದುಕು ಹಾಗೂ ಶಕ್ತಿಯ ನೆಲೆಯನ್ನು ತುಳುರಂಗಭೂಮಿಯ ಪರಿಧಿಯಲ್ಲಿ ನಿರೀಕ್ಷೆಗೂ ಮೀರಿದ ಸ್ವರೂಪದಲ್ಲಿ ಪ್ರದರ್ಶಿಸಲಾಗಿದೆ. “ಗುಳಿಗ’ನಾಗಿ ಅಭಿನಯಿಸಿದ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ಸಹಿತ ಇತರ ಕಲಾವಿದರ ನಟನೆಯೂ ನಾಟಕದ ಚೆಲುವು ಹೆಚ್ಚಿಸಿದೆ.

ತುಳುರಂಗಭೂಮಿಯಲ್ಲಿ ಚರಿತ್ರೆ ಬರೆಯುವ ಸಾಹಸವನ್ನು ಶಿವದೂತೆ ಗುಳಿಗೆ ಮಾಡುತ್ತಿದೆ. ಬೇರೆ ಜಿಲ್ಲೆ, ರಾಜ್ಯ, ವಿದೇಶದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 555ನೇ ಪ್ರದರ್ಶನದ ಸಂಭ್ರಮ ಜ. 11ರಂದು ಸಂಜೆ 5 ಗಂಟೆಗೆ ಅಡ್ಯಾರ್‌ ಗಾರ್ಡನ್‌ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ತುಳು ರಂಗಭೂಮಿಯಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ. ಶೀಘ್ರದಲ್ಲಿ 1 ಸಾವಿರದ ಪ್ರದರ್ಶನವನ್ನೂ ಶಿವದೂತೆ
ಗುಳಿಗೆ ಕಾಣಲಿದೆ.
– ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲು
ನಿರ್ದೇಶಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next