Advertisement

Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ

01:12 PM Dec 31, 2024 | Team Udayavani |

ಉಪ್ಪಿನಂಗಡಿ: ಗ್ರಾಮಸ್ಥರು ಸರಿಯಾಗಿ ತ್ಯಾಜ್ಯ ವಿಂಗಡಿಸಿ ಕೊಡದೆ ಇದ್ದರೆ ಪಂಚಾಯತ್‌ ಗಮನಕ್ಕೆ ತರುವಂತೆ ತ್ಯಾಜ್ಯ ವಿಲೇವಾರಿ ತಂಡಕ್ಕೆ ತಣ್ಣೀರುಪಂತ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಲಹೆ ನೀಡಿದರಲ್ಲದೆ ಅಂತಹವರ ಮೇಲೆ ಕಠಿನ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ತಣ್ಣೀರುಪಂತ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಹೇಳಿದರು.

Advertisement

ಸಭೆಯು ಕಲ್ಲೇರಿಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಪಂಚಾಯತ್‌ ಅಧ್ಯಕ್ಷೆ ಹೇಮಾವತಿ ಅಧ್ಯಕ್ಷತೆಯಲ್ಲಿ ಜರಗಿತು.

ಪಿ.ಡಿ.ಒ. ಶ್ರವಣಕುಮಾರ್‌ ಲೆಕ್ಕಪತ್ರ ಮಂಡಿಸಿ ವರದಿಗೆ ಮಂಜೂರಾತಿ ಪಡೆದರು.

ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವ್ಯಾಪಕ ದೂರು ಬರುತ್ತಿದೆ ಎಂದು ಸದಸ್ಯರು ಹೇಳಿದಾಗ ಪಿ.ಡಿ.ಒ. ಮಾತನಾಡಿ ತ್ಯಾಜ್ಯ ಸಂಗ್ರಾಹಕರನ್ನು ಸಭೆಗೆ ಕರೆಸಲಾಯಿತು. ಕೆಲವು ಮನೆಯವರು ಹಸಿ ಕಸ ಮತ್ತು ಒಣಕಸ ಒಂದೇ ಬಕೆಟ್‌ ಹಾಕಿ ಕೊಟ್ಟು ನಿಂದಿಸುವ ವಿಚಾರವನ್ನು ಅವರು ಸಭೆಯ ಗಮನಕ್ಕೆ ತಂದರು. ಇಂತಹ ಪ್ರಕರಣವನ್ನು ಪಂಚಾಯತ್‌ ಗಂಭೀರವಾಗಿ ಪರಿಗಣಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು. ಇನ್ನು ಮುಂದಕ್ಕೆ ಅಂತಹ ಪ್ರಕರಣ ನಡೆದರೆ ಪಂಚಾಯತ್‌ನಿಂದ ಕಠಿನ ಕ್ರಮ ಕೈಗೊಳ್ಳಿ ಎಂದರು.

ಸರಕಾರದ ಹೊಸ ಕಾನೂನು ಪ್ರಕಾರ ಗ್ರಾಮದ ಯಾವುದೇ ಮನೆ, ಅಂಗಡಿಗಳ ತೆರಿಗೆ ವಿಧಿಸುವಲ್ಲಿ ಭೂ ಪರಿವರ್ತನೆ ಆಗದೇ ಇದ್ದ ಭೂಮಿಗೆ ದುಪ್ಪಟ್ಟು ತೆರಿಗೆಗೆ ಆದೇಶಿಸಿದೆ ಎಂದು ಪಿಡಿಒ ತಿಳಿಸಿದರು.

Advertisement

ಸಂತೆ ಮಾರುಕಟ್ಟೆ ಜಾಗದಲ್ಲಿ ನಾಲ್ಕು ಅಂಗಡಿ ಮಳಿಗೆಯನ್ನು ಪಂಚಾಯತ್‌ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಯಾಕೆ ಎಂದು ನಿಸಾರ್‌ ಕೇಳಿದಾಗ ಪ್ರಕರಣ ಮತ್ತೆ ನ್ಯಾಯಾಲಯಕ್ಕೆ ಹೋಗಿದೆ. ಅಲ್ಲಿನ ತೀರ್ಪಿಗೆ ಕಾಯಲಾಗುತ್ತಿದೆ ಎಂದು ಪಿಡಿಒ ಉತ್ತರಿಸಿದರು.

ಜಲಜೀವನ್‌ ಯೋಜನೆ ಗ್ರಾಮದಲ್ಲಿ ಅನುಷ್ಠಾನಕ್ಕೆ ಮುನ್ನ ಪಂಚಾಯತ್‌ ಗಮನಕ್ಕೆ ತಾರದೆ ಗುತ್ತಿಗೆದಾರರು ರಸ್ತೆ ಮಾರ್ಜಿನ್‌ನಲ್ಲಿ ತಮಗೆ ಮನ ಬಂದಂತೆ ಕಾಮಗಾರಿ ನಡೆಸಿ ಬಳಿಕ ಹಸ್ತಾಂತರಕ್ಕೆ ಒತ್ತಡ ಹೇರುತ್ತಿರುವ ವಿಚಾರ ಸಭೆಯಲ್ಲಿ ಪ್ರಸ್ತಾವವಾಯಿತು.

ಉಪ್ಪಿನಂಗಡಿ -ಗುರುವಾಯನಕೆರೆ ರಾಜ್ಯ ಹೆದ್ದಾರಿ ಬದಿ ರಾತ್ರಿ ಬೆಳಗಾಗುವುದರಲ್ಲಿ ಹಲವು ಗೂಡಂಗಡಿಗಳು ಪ್ರತ್ಯಕ್ಷವಾಗುತ್ತಿದ್ದು, ತತ್‌ಕ್ಷಣ ಲೋಕೋಪಯೋಗಿ ಇಲಾಖೆ ಕ್ರಮಕೈಗೊಳ್ಳಲು ಆಗ್ರಹಿಸಿದರು. ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯವಿಕ್ರಮ್‌ ಕಲ್ಲಾಪು, ತಾಜುದ್ದೀನ್‌, ನವೀನ್‌, ಕೇಶವ ನಾಯ್ಕ, ಅಯೂಬ್‌ ಡಿ.ಕೆ. ಅನಿಲ್‌, ಸುಧಾ, ಮಹಮ್ಮದ್‌, ಅಶ್ರಫ್, ದಿವ್ಯ ,ಸಂಬ್ರಿದಾ, ಫಾತಿಮಾ, ಲೀಲಾವತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಆನಂದ ವಂದಿಸಿದರು.

ತುರ್ಕಳಿಕೆ ಮನೆ ನಿವೇಶನ ಸಮಸ್ಯೆಬಗೆಹರಿಸಿ
ತುರ್ಕಳಿಕೆ ಮನೆ ನಿವೇಶನ ಅದಲು ಬದಲಿನ ಕುರಿತು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಗೊಂದಲ ಎಬ್ಬಿಸಲು ಅವಕಾಶ ಕೊಡದಿರಿ ಎಂದು ಸದಸ್ಯರು ಹೇಳಿದಾಗ ಪಿ.ಡಿ.ಒ. ಮಾತನಾಡಿ, ಈಗಾಗಲೇ ಅಲ್ಲಿಯ ನಿವೇಶನದಾರರ ಸಭೆ ಕರೆದಾಗ ಬೆರಳೆಣಿಕೆಯವರು ಬಂದಿದ್ದು ಸಮಸ್ಯೆ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ ಎಂದರು. ಇನ್ನೊಂದು ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿದರು. ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ ಮಾತನಾಡಿ ದಾರಿ ದೀಪ ಅವ್ಯವಸ್ಥೆ ಸರಿ ಪಡಿಸಿ ಎಂದು ಹೇಳಿದರು.

ಒಂದೊಂದು ಕಾನೂನು ಮಾಡಬೇಡಿ
ವ್ಯಕ್ತಿಯೋರ್ವರು ಕಟ್ಟಡಗಳ ವ್ಯಾಪಾರ ಪರವಾನಿಗೆ ನವೀಕರಿಸಲು ಸಮರ್ಪಕ ದಾಖಲೆ ಒದಗಿಸದೆ ಇದ್ದ ಕಾರಣ ದುಪ್ಪಟ್ಟು ತೆರಿಗೆ ವಿಧಿಸಿ ನವೀಕರಿಸಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಮರ್ಶೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಪಿಡಿಒ ಸಭೆಯ ಗಮನಕ್ಕೆ ತಂದಾಗ ಮಹಮ್ಮದ್‌ ನಿಸಾರ್‌ ಮಾತನಾಡಿ, ಶ್ರೀಮಂತರಿಗೆ ಹಾಗೂ ಬಡವರಿಗೆ ಬೇರೆ ಬೇರೆ ಕಾನೂನು ಮಾಡಬೇಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next