ಬೀದರ: ಮನುಷ್ಯ ಶಿವನ ಕೃಪೆಗೆ ಪಾತ್ರನಾಗಲು ಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳನ್ನು ನಿವಾರಿಸಬೇಕಾಗಿದೆ ಎಂದು ಬ್ರಹ್ಮಕುಮಾರಿ ಪಾವನಧಾಮದ ಸಂಚಾಲಕಿ ಪ್ರತಿಮಾ ಸಹೋದರಿ ಕರೆ ನೀಡಿದರು.
ನಗರದ ಜನವಾಡ ರಸ್ತೆಯ ಬ್ರಹ್ಮಕುಮಾರಿ ಪಾವನಧಾಮ ಕೇಂದ್ರದಲ್ಲಿ ಗುರುವಾರ ನಡೆದ 82ನೇ ಶಿವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕ್ರೋಧ ಮನುಷ್ಯನ ಪಾಲಿಗೆ ಒಂದು ಭೂತವಿದ್ದಂತೆ. ಅದು ಇಡೀ ಜೀವನದ ಉದ್ದೇಶ ಹಾಳು ಮಾಡುತ್ತದೆ.
ನಮ್ಮ ಮಾನಸಿಕ ಸಂತುಲನ ಕೆಟ್ಟು ಕೆಲ ಕ್ಷಣದ ವರೆಗೆ ಬುದ್ಧಿಮಾಂದ್ಯಕ್ಕೆ ಒಳಗಾಗುತ್ತೇವೆ. ಆದ್ದರಿಂದ ನಮ್ಮ ಬದುಕು ಸುಂದರವಾಗಲು ಶಿವನ ನೆತ್ತಿಯ ಮೇಲೆ ಬಿಲ್ವಪತ್ರಿ ಏರಿಸುವ ಬದಲು ನಮ್ಮಲ್ಲಿನ ಅವಗುಣಗಳನ್ನು ಶಿವನಿಗೆ ಅರ್ಪಿಸುವಂತೆ ಅವರು ಕರೆ ನೀಡಿದರು.
ಶಿವನು ಈ ಭೂಮಿಗೆ ಬಂದು 82 ವರ್ಷಗಳು ಗತಿಸಿವೆ. ಜಗತ್ತಿನಲ್ಲಿ ಅಂಧಕಾರದ ಕೂಪ ಹೆಚ್ಚಾಗತೊಡಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಸಂಗಮಯುಗ ಆರಂಭವಾಗಲಿದ್ದು, ಅಲ್ಲಿ ಪ್ರತಿಯೊಂದು ಆತ್ಮಗಳು ಪವಿತ್ರವಾಗಬೇಕಿದೆ ಎಂದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಈ ದೇಶದಲ್ಲಿ ಶಿಕ್ಷಕ, ಪೋಲಿಸ್ ಹಾಗೂ ವೈದ್ಯರು ಸಂಪೂರ್ಣ ಸಮಾಜಮುಖೀಯಾದಲ್ಲಿ ಈ ದೇಶದಲ್ಲಿ ಶಾಂತಿ ಹಾಗೂ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಸಧ್ಯವಿದೆ ಎಂದರು.
ಬ್ರಹ್ಮಕುಮಾರಿ ಪಾವನಧಾಮದ ಪ್ರವರ್ತಕ ಬಿ.ಕೆ. ಪ್ರಭಾಕರ ಕೋರವಾರ ಮಾತನಾಡಿ, ಮನುಷ್ಯನಲ್ಲಿ ಅಧ್ಯಾತ್ಮಿಕ ಗುಣಗಳು ಸಮ್ಮಿಲನಗೊಂಡರೆ ಅಂತಹ ಆತ್ಮಗಳು ಪವಿತ್ರವೂ ಹಾಗೂ ಪ್ರಾಮಾಣಿಕ, ಅಷ್ಟೇ ನಿಸ್ವಾರ್ಥ ಆತ್ಮಗಳಾಗಿ ಹೊರಹೊಮ್ಮುತ್ತವೆ ಎಂದರು. ಡಾ| ಹಣಮಶೆಟ್ಟಿ ಹಾಗೂ ಡಾ| ವೈಜಿನಾಥ ತುಗಾಂವೆ ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ 82ನೇ ಶಿವ ಜಯಂತಿ ಅಂಗವಾಗಿ ಶಿವಧ್ವಜ ಕಾರ್ಯಕ್ರಮ ನೆರವೇರಿತು. ಪವನ ನಾಟೇಕರ್ ಶಿವ ತಾಂಡವ ನೃತ್ಯಗೈದರು. ಜ್ಯೋತಿ ಸಹೋದರಿ ಕಾರ್ಯಕ್ರಮ ನಿರ್ವಹಿಸಿದರು