Advertisement

Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!

04:30 PM Dec 29, 2024 | Team Udayavani |

ಕುಂದಾಪುರ: ಸಿದ್ದಾಪುರ ಸರಕಾರಿ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಕೃಷ್ಣ ಪಾಟೀಲ ಅವರುಜ.3ರಿಂದ ಭೋಪಾಲದಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಶೌಚಾಲಯದಲ್ಲಿ ತಂತಾನೇ ನೀರು ಹಾಕಿ ಶುಚಿಯಾಗುವ ವಿಜ್ಞಾನ ಮಾದರಿ ರಾಜ್ಯಮಟ್ಟದಲ್ಲಿ ಬಹುಮಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

Advertisement

ದೇವಾಲಯಗಳಲ್ಲಿ ಮೆಟ್ಟಿಲುಗಳಲ್ಲಿ ನೀರು ಹರಿದು ಕಾಲು ಶುಚಿಯಾಗುವ ತಂತ್ರವನ್ನು ಗಮನದಲ್ಲಿಟ್ಟುಕೊಂಡು ಶೌಚಾಲಯಕ್ಕೆ ತೆರಳುವಾಗ ಮೆಟ್ಟಿಲಿಗೆ ಕಾಲಿಟ್ಟ ಕೂಡಲೇ ನೀರು ಶೌಚಾಲಯಕ್ಕೆ ಬೀಳುವ ಮಾದರಿಯನ್ನು ಕೃಷ್ಣ ಪಾಟೀಲ ರಚಿಸಿದ್ದಾರೆ. ಬಹುತೇಕರು ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡುವುದಿಲ್ಲ. ಇದರಿಂದ ಉಳಿದವರಿಗೆ ಕಷ್ಟವಾಗುತ್ತದೆ. ಸ್ವಚ್ಛತೆರಹಿತ ಶೌಚಾಲಯ ಬಳಸಿದರೆ ಮಹಿಳೆಯರಿಗೆ ಚರ್ಮದ ಸಮಸ್ಯೆ, ಇತರ ತೊಂದರೆಗಳು ಕಾಣಿಸಿಕೊಳ್ಳುವ ಅಪಾಯವಿದೆ.

ಕೆಲಸ ಹುಡುಕಿ ಸಿದ್ದಾಪುರಕ್ಕೆ ಬಂದರು!
ಕೃಷ್ಣ ಪಾಟೀಲ್‌ ಅವರ ತಂದೆ ಗೋವಿಂದರಾಯ ಬಳ್ಳಾರಿಯಲ್ಲಿ ಎಲೆಕ್ಟ್ರಿಕ್‌ ವೃತ್ತಿ ನಡೆಸುತ್ತಿದ್ದಾರೆ. ತಾಯಿ ಅಶ್ವಿ‌ನಿ ಹೋಟೆಲ್‌ ಕೆಲಸ ಮಾಡುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಹೀಗೆ ಕೆಲಸ ಹುಡುಕುತ್ತಿದ್ದಾಗ ಶಂಕರನಾರಾಯಣದ ಹೋಟೆಲ್‌ ಒಂದರಲ್ಲಿ ಕೆಲಸ ಸಿಕ್ಕಿತ್ತು. ತಾಯಿ ಅತ್ತ ಹೋಟೆಲ್‌ ನಲ್ಲಿ ಕೆಲಸ ಮಾಡುತ್ತಿದ್ದರೆ ಮಗ ಸಿದ್ದಾಪುರಕ್ಕೆ ಹೈಸ್ಕೂಲ್‌ಗೆ ಹೋಗುತ್ತಾನೆ. ತರಗತಿಯ ವಿಜ್ಞಾನ ಶಿಕ್ಷಕಿ ಪೂರ್ಣಿಮಾ ವಿ. ಭಟ್‌ ಅವರ ಪ್ರೇರಣೆ, ಮಾರ್ಗದರ್ಶನದಲ್ಲಿ ಈ ಮಾದರಿ ತಯಾರಿಸಿದ್ದಾನೆ. ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು 2ನೇ ವರ್ಷ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ 30 ತಂಡಗಳು ಪ್ರತಿನಿಧಿಸಲಿದ್ದು ಉಡುಪಿ ಜಿಲ್ಲೆಯಿಂದ ಬ್ರಹ್ಮಾವರದ ಎಸ್‌ಎಂಎಸ್‌ ಶಾಲೆಯ ವಿದ್ಯಾರ್ಥಿ ಕೂಡ ಭಾಗವಹಿಸಲಿದ್ದಾರೆ.

ತಂತಾನೆ ಸ್ವತ್ಛ
ಈ ನಿಟ್ಟಿನಲ್ಲಿ ಕೃಷ್ಣ ಪಾಟೀಲ ಮಾಡಿದ ಮಾದರಿ ಗಮನ ಸೆಳೆದಿದೆ. ಶೌಚಾಲಯದ ಮೆಟ್ಟಿಲುಗಳನ್ನು ಏರುತ್ತಾ ಹೋದಂತೆ ನಿರ್ದಿಷ್ಟ ಮೆಟ್ಟಿಲು ತುಳಿದಾಗ ಶೌಚಾಲಯಕ್ಕೆ ನೀರು ಬೀಳುತ್ತದೆ. ಇದರಿಂದ ಈ ಮೊದಲು ಅಶುಚಿಯಾಗಿ ಯಾರಾದರೂ ಬಿಟ್ಟು ಹೋದರೂ ಅದು ಸ್ವತ್ಛವಾಗುತ್ತದೆ. ಮರಳಿ ಬರುವಾಗಲೂ ತಂತಾನೇ ಆ ಮೆಟ್ಟಿಲಿಗೆ ಕಾಲಿಟ್ಟಾಗ ನೀರು ಬಿದ್ದು ಶುಚಿಯಾಗುತ್ತದೆ. ಕೃಷ್ಣನ ಜತೆಗೆ ಸಹಪಾಠಿ ವಿದ್ಯಾರ್ಥಿ ಅಭಿಷೇಕ್‌ ವಡೆಯರ್‌ ಮಾದರಿ ತಯಾರಿಯಲ್ಲಿ ಸಹಕರಿಸಿದ್ದಾರೆ.

ಭೋಪಾಲದಲ್ಲಿ ಪ್ರದರ್ಶನ, ಸ್ಪರ್ಧೆ
2024ರ ಜನವರಿಯಲ್ಲಿ ಕಲಬುರಗಿಯಲ್ಲಿ ನಡೆದ 31ನೇ ಅಖೀಲ ಕರ್ನಾಟಕ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೃಷ್ಣ ಪಾಟೀಲ್‌ ಮಾದರಿ ಪ್ರಥಮ ಬಹುಮಾನ ಪಡೆದು ಬಾಲವಿಜ್ಞಾನಿ ಎಂಬ ಪುರಸ್ಕಾರ ಸಿಕ್ಕಿತ್ತು. ರಾಷ್ಟ್ರ ಮಟ್ಟದ ಸ್ಪರ್ಧೆ ಜ.3ರಿಂದ 6ರವರೆಗೆ ಮಧ್ಯದೇಶದ ಭೋಪಾಲದಲ್ಲಿ ನಡೆಯಲಿದೆ.

Advertisement

ಮಾದರಿ ತಯಾರಿಸಿದೆ
ಶಿಕ್ಷಕಿ ಪೂರ್ಣಿಮಾ ಮೇಡಂ ಅವರ ಮಾರ್ಗ ದರ್ಶನ ದಿಂದ ಇದು ಸಾಧ್ಯವಾಗಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ತೆರಳುತ್ತಿರುವುದು ಸಂತಸವಾಗುತ್ತಿದೆ. ಶಾಲೆಯ ಎಲ್ಲರ ಪ್ರೇರಣೆ ಹಾಗೂ ಅಮ್ಮನ ಪ್ರೋತ್ಸಾಹಕ್ಕೆ ಸದಾ ಋಣಿ.
-ಕೃಷ್ಣ ಪಾಟೀಲ, ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next