Advertisement

ಕಾಂಗ್ರೆಸ್‌-ಎನ್‌ಸಿಪಿ ಜತೆ ಸೇರುತ್ತಾ ಶಿವಸೇನೆ?

11:12 AM Oct 05, 2017 | Team Udayavani |

ಮುಂಬಯಿ: ನಾರಾಯಣ ರಾಣೆ ಕಾಂಗ್ರೆಸ್‌ ತೊರೆದ ಬಳಿಕ ರಾಜ್ಯದ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್‌ಗೆ ಗುಡ್‌ಬೈ ಹೇಳುವಾಗ ರಾಣೆ ವಿಧಾನ ಪರಿಷತ್‌ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಇದೀಗ ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷ ಎಂಬ ತನ್ನದೇ ಆದ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿರುವ ರಾಣೆ ಬಿಜೆಪಿಯ ಬೆಂಬಲದೊಂದಿಗೆ ಮರಳಿ ವಿಧಾನ ಪರಿಷತ್‌ ಪ್ರವೇಶಿಸಲು ಇಚ್ಛಿಸಿದ್ದಾರೆ. ಆದರೆ  ಈ ಪ್ರಯತ್ನವನ್ನು ತಡೆಯಲು ಶಿವಸೇನೆ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಮುಂಬಯಿ ಮಿರರ್‌ ವರದಿಯ ಪ್ರಕಾರ ರಾಣೆಯನ್ನು ತಡೆಯುವ ಸಲುವಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೆ ಕೈಜೋಡಿಸುವ ಸಾಧ್ಯತೆಯನ್ನೂ ಶಿವಸೇನೆ ಪರಿಶೀಲಿಸುತ್ತಿದೆ. 

Advertisement

ಅಂತೆಯೇ ಎನ್‌ಡಿಎ ಕೂಟಕ್ಕೆ ರಾಣೆ ಸೇರುವುದು ಕೂಡ ಶಿವಸೇನೆಗೆ ಇಷ್ಟವಿಲ್ಲ. ಒಂದು ವೇಳೆ ತನ್ನ ವಿರೋಧವನ್ನು ಲೆಕ್ಕಿಸದೆ ಬಿಜೆಪಿ ರಾಣೆಯನ್ನು ಎನ್‌ಡಿಎ ತೆಕ್ಕೆಗೆ ತರಲು ಮುಂದಾದರೆ ಎನ್‌ಡಿಎ ಕೂಟದಿಂದ ಮತ್ತು ಸರಕಾರದಿಂದ ಹೊರಬರಲು ಶಿವಸೇನೆ ನಾಯಕರು ಚಿಂತನ-ಮಂಥನ ನಡೆಸಿದ್ದಾರೆ. 

ರಾಣೆಯ ಹೊಸ ನಡೆಯ ಕುರಿತು ಚರ್ಚಿಸುವ ಸಲುವಾಗಿ ಮಾತೋಶ್ರೀಯಲ್ಲಿ ಶಿವಸೇನೆಯ ಹಿರಿಯ ನಾಯಕರ ಸಭೆ ನಡೆದಿದೆ. ಇದರಲ್ಲಿ ಸಂಸದರಾದ ಸಂಜಯ್‌ ರಾವುತ್‌, ಅನಿಲ್‌ ದೇಸಾಯಿ, ಎಂಎಲ್‌ಸಿ ಅನಿಲ್‌ ಪರಬ್‌ , ಸಚಿವ ಸುಭಾಷ್‌ ದೇಸಾಯಿ ಭಾಗವಹಿಸಿದ್ದಾರೆ. ರಾಣೆ ಎನ್‌ಡಿಎ ಸೇರ್ಪಡೆಯನ್ನು ವಿರೋಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರೊಂದಿಗೆ ರಾಣೆ ಬಿಜೆಪಿ ಬೆಂಬಲದಿಂದ ಮರಳಿ ವಿಧಾನ ಪರಿಷತ್‌ಗೆ ಪ್ರವೇಶಿಸಲು ಪ್ರಯತ್ನಿಸಿದರೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆ ಸೇರಿಕೊಂಡು ಅದನ್ನು ತಡೆಯುವ ಸಾಧ್ಯತೆಯನ್ನು ಚರ್ಚಿಸಲಾಗಿದೆ. 

ಹೇಗಾದರೂ ಮಾಡಿ ರಾಜ್ಯ ರಾಜಕೀಯದಲ್ಲಿ ರಾಣೆಯ ಪ್ರಭಾವವನ್ನು ತಗ್ಗಿಸಬೇಕೆನ್ನುವುದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆಯ ಗುರಿ. ಇದಕ್ಕಾಗಿ ಅವರು ಒಂದು ಕಾಲದ ಬದ್ಧ ಶತ್ರುಗಳಾಗಿದ್ದ ಕಾಂಗ್ರೆಸ್‌ ಮತ್ತು ಎನ್‌ಸಿಪಿಯತ್ತ ಸ್ನೇಹದ ಹಸ್ತ ಚಾಚಲು ಹಿಂದೇಟು ಹಾಕುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. 

ರಾಣೆ ಬಿಜೆಪಿ ಬೆಂಬಲ ಗಳಿಸುವಲ್ಲಿ ಸಫ‌ಲರಾದರೆ ಅವರಿಗೆ 136 ಮತಗಳು ಸಿಗುವುದು ಖಚಿತ. 122 ಬಿಜೆಪಿ ಶಾಸಕರೇ ಇದ್ದಾರೆ. ಇತರ ಸಣ್ಣಪುಟ್ಟ ಪಕ್ಷಗಳ ಬೆಂಬಲ ಸೇರಿ 136 ಮತಗಳು ಸಿಗುತ್ತವೆ. ಆದರೆ ವಿಧಾನಪರಿಷತ್‌ಗೆ ಆಯ್ಕೆಯಾಗಬೇಕಾದರೆ 146 ಶಾಸಕರ ಮತಗಳು ಬೇಕು. ಈ ಪರಿಸ್ಥಿತಿಯಲ್ಲಿ ಶಿವಸೇನೆ ಕೈಕೊಟ್ಟರೆ ರಾಣೆಗೆ ವಿಧಾನ ಪರಿಷತ್‌ ಪ್ರವೇಶ ಸಿಗುವುದಿಲ್ಲ. ಇದೇ ವೇಳೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬೆಂಬಲದೊಂದಿಗೆ ಶಿವಸೇನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಸುಲಭವಾಗುತ್ತದೆ. ಈ ಮೂರು ಪಕ್ಷಗಳ ಒಟ್ಟು ಶಾಸಕರ ಸಂಖ್ಯೆ 146 ಇದೆ. 

Advertisement

ಒಂದು ವೇಳೆ ರಾಣೆ ಎನ್‌ಡಿಎ ಕೂಟ ಸೇರಿದರೆ ಶಿವಸೇನೆ ಸರಕಾರದಿಂದ ಹೊರ ಬರಲಿದೆ. ಆದರೆ ಅನಂತರ ಬಾಹ್ಯ ಬೆಂಬಲ ನೀಡಿ ಸರಕಾರ ಪತನವಾಗದಂತೆ ನೋಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗೆ ಕೈಜೋಡಿಸಿದರೆ ಶಿವಸೇನೆಯ ಇಮೇಜಿಗೆ ಇನ್ನಿಲ್ಲದ ಹಾನಿಯಾಗಲಿದೆ ಎಂಬುದು ವಿಶ್ಲೇಷ‌ಕರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next