ನವದೆಹಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶಕ್ಕೆ ಉದ್ಧವ್ ಠಾಕ್ರೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಿವಸೇನಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯ ನಂತರ ಬುಧವಾರ ಪ್ರತಿಕ್ರಿಯೆ ನೀಡಿರುವ ಶಾ, ಶಿವಸೇನಾ ಜನಾದೇಶಕ್ಕೆ ಅವಮಾನ ಮಾಡಿದ್ದಾರೆಯೇ ವಿನಃ ಬಿಜೆಪಿಗಲ್ಲ ಎಂದು ತಿಳಿಸುವ ಮೂಲಕ ಮಹಾರಾಷ್ಟ್ರದಲ್ಲಿ ಜನರು ಬಿಜೆಪಿಗೆ ಜನಾದೇಶ ನೀಡಿದ್ದಾರೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಎಲ್ಲರಿಗೂ ನಾನು ಕೇಳುತ್ತಿದ್ದೇನೆ, ಜನಾದೇಶವನ್ನು ಮುರಿದವರು ಯಾರು? ನಾವು ಮಾಡಿಲ್ಲ. ನಾವು ನಮ್ಮ ಶಾಸಕರನ್ನು ಯಾವುದೇ ಹೋಟೆಲ್ ಗಳಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿಲ್ಲ. ಯಾರು ಆ ರೀತಿ ಕ್ಯಾಂಪ್ ಮಾಡಿದ್ದಾರೋ ಅವರು ಏನು ತಪ್ಪೇ ಮಾಡಿಲ್ಲವೇ? ಯಾರು ಮೈತ್ರಿಯನ್ನು ಮುರಿದಿದ್ದಾರೋ ಅವರು ತಪ್ಪು ಮಾಡಿಲ್ಲವೇ? ನಮಗೆ ಜನಾದೇಶವಿತ್ತು. ನಾವು ಸರ್ಕಾರ ರಚಿಸಲಿಲ್ಲ. ಇದು ನಮ್ಮ ತಪ್ಪು ಎಂದು ಶಾ ಕಟುವಾಗಿ ಶಿವಸೇನಾವನ್ನು ಟೀಕಿಸಿದ್ದಾರೆ.
ಎನ್ ಸಿಪಿ, ಶಿವಸೇನಾ ಹಾಗೂ ಕಾಂಗ್ರೆಸ್ ಸೇರಿದಂತೆ ಮಹಾ ವಿಕಾಸ್ ಅಘಾಡಿಯನ್ನು ಶಾ ಟೀಕಿಸಿದರು. ಮೂರು ಪಕ್ಷಗಳ ತತ್ವ ಮತ್ತು ಸಿದ್ಧಾಂತ ವಿಭಿನ್ನವಾಗಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿವೆ ಎಂದರು.
ಸರಣಿ ಟ್ವೀಟ್ ಮಾಡಿರುವ ಶಾ, ಯಾರು ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇಟ್ಟಿದ್ದಾರೋ, ಯಾರು ಚುನಾವಣಾ ಪೂರ್ವ ಮೈತ್ರಿಯನ್ನು ಮುರಿದಿದ್ದಾರೋ ಅವರೇ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ತಮ್ಮ ಸಿದ್ದಾಂತವನ್ನು ಬದಿಗೊತ್ತಿ ಮೂರು ಪಕ್ಷಗಳು ಸೇರಿ ಇದೀಗ ಸರ್ಕಾರ ರಚಿಸಿವೆ ಎಂದು ಟೀಕಿಸಿದ್ದಾರೆ.