Advertisement

“ಮಹಾ” ವಿಶ್ವಾಸಮತ ಗೆದ್ದ ಸಿಎಂ ಉದ್ಧವ್ ಠಾಕ್ರೆ, ಬಿಜೆಪಿ ಸದಸ್ಯರಿಂದ ಸಭಾತ್ಯಾಗ

08:51 AM Dec 01, 2019 | Team Udayavani |

ಮುಂಬೈ: ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ ಶನಿವಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.

Advertisement

ನಂತರ ಸುಪ್ರೀಂಕೋರ್ಟ್ ಆದೇಶದಂತೆ ತಲೆ ಎಣಿಕೆ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ದಿಲೀಪ್ ಪಾಟೀಲ್ ನಡೆಸಿದರು. ವಿಶ್ವಾಸಮತದ ಪರ ಇರುವ ಶಾಸಕರ ತಲೆ ಎಣಿಕೆ ಮೊದಲಿಗೆ ಮಾಡಲಾಯಿತು.

ವಿಶ್ವಾಸಮತ ಯಾಚನೆಯಲ್ಲಿ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ 169 ಶಾಸಕರ ಮತ ಸಿಕ್ಕಿದೆ. 288 ಶಾಸಕರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಶಾಸಕರ ಬೆಂಬಲದ ಅಗತ್ಯವಿದೆ.

ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಮೂರು ಪಕ್ಷಗಳ ಶಾಸಕರ ಸಂಖ್ಯೆ 154. ವಿಶ್ವಾಸಮತ ಯಾಚನೆ ವೇಳೆ ಬಹುಜನ್ ವಿಕಾಸ್ ಅಘಾಡಿ ಮತ್ತು ಪಕ್ಷೇತರರು ಕೆಲವು ಶಾಸಕರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ 105 ಬಿಜೆಪಿ ಶಾಸಕರು ಕಲಾಪದಿಂದ ಹೊರನಡೆದಿದ್ದರು.

Advertisement

ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಹಂಗಾಮಿ ಸ್ಪೀಕರ್ ಕಾಳಿದಾಸ್ ಅವರನ್ನು ಬದಲಿಸಿ ಕಾಂಗ್ರೆಸ್ ನ ದಿಲೀಪ್ ಪಾಟೀಲ್ ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಸಂದರ್ಭದಲ್ಲಿ ಪ್ರೋ ಟೆಮ್ ಸ್ಪೀಕರ್ ದಿಲೀಪ್ ಪಾಟೀಲ್, ಗದ್ದಲ ನಡೆಸದಂತೆ ಮನವಿ ಮಾಡಿಕೊಂಡರು.

ನಿಯಮಾವಳಿ ಪ್ರಕಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರಮಾಣವಚನ ಸಮರ್ಪಕವಾಗಿ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಫಡ್ನವೀಸ್ ಆಕ್ರೋಶ ವ್ಯಕ್ತಪಡಿಸಿದರು. ವಂದೇ ಮಾತರಂನಿಂದ ಅಧಿವೇಶನ ಆರಂಭವಾಗಬೇಕಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಅಧಿವೇಶನ ಕರೆಯಲಾಗಿದೆ ಎಂದು ಆರೋಪಿಸಿದರು.

ವಿಶೇಷ ಅಧಿವೇಶನದ ಬಗ್ಗೆ ನಮಗೆ ರಾತ್ರಿ ಒಂದು ಗಂಟೆಗೆ ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಲು ಮುಂದಾದಾಗ ಹಂಗಾಮಿ ಸ್ಪೀಕರ್ ಪಾಟೀಲ್ ಫಡ್ನವೀಸ್ ಅವರ ಮನವೊಲಿಸಿ ಕುಳಿತುಕೊಳ್ಳುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next