Advertisement

ಶಿಶಿರನ ಜೈತ್ರಯಾತ್ರೆ

11:12 PM Feb 17, 2018 | |

ಶಿವರಾತ್ರಿ ಬಂದುಹೋಗಿದೆ. ಹಬ್ಬಗಳು ಮತ್ತೂಮ್ಮೆ ಮೆರವಣಿಗೆ ಹೊರಟಿವೆ. ಶಿಶಿರನ ದಿಗ್ವಿಜಯದ ರಥ ಸಾಗುತ್ತಲೇ ಇದೆ… ವಸಂತನ ತಾಣದವರೆಗೂ !

Advertisement

ಹೇಮಂತನೂ ಶೀತಲ, ಶಿಶಿರನೂ ಶೀತಲ. ಇವರೀರ್ವರ ನಡುವೆ ವ್ಯತ್ಯಾಸ ಬಹಳ ಕಡಮೆ. ಇದಕ್ಕೆ ಕವಿ-ಪಂಡಿತರ ಒಪ್ಪಿಗೆಯೂ ಇದೆ. ಶಶಂತಿಧಾವಂತಿ ಯಸ್ಮಿನ್‌ ಪಥಿಕಾ ಇತಿ ಶಿಶಿರಃ ಎಂದು ಶಿಶಿರ ಋತುವಿನ ಭೀತಿಕಾರಕ ನಿರ್ವಚನವನ್ನು ಶಾಬ್ದಿಕರು ನಡೆಸಿದ್ದಾರೆ! ದಾರಿಗರಿಗೆಲ್ಲ ಹೆದರಿಕೆ ಹುಟ್ಟಿಸುವಂಥ ಚಳಿ ಶಿಶಿರನದೆಂದು ಜನರ ದೂರು! ಹೇಮಂತನೂ ಶೀತಲ, ಶಿಶಿರನೂ ಶೀತಲ. ಹೀಗಾಗಿ, ಇವರೀರ್ವರ ನಡುವೆ ವ್ಯತ್ಯಾಸ ಬಹಳ ಕಡಮೆಯೆಂದು ಅನೇಕರ ಅಭಿಪ್ರಾಯ. ಬಹುಜನರ ಅಭಿಮತಕ್ಕೆ ಕವಿ-ಪಂಡಿತರ ಆಮೋದನೆಯೂ ಸಿಕ್ಕಿದೆ. ಆದರೂ ಶಿಶಿರವು ಬರಿಯ ಹೇಮಂತಚ್ಛಾಯೆಯಲ್ಲ. ಅದಕ್ಕೆ ತನ್ನದೇ ಆದ ವಿಶೇಷತೆ, ಸ್ವಂತಿಕೆಯ ಛಾಪು ಉಂಟು.

ಮಾರ್ಗಶೀರ್ಷ-ಪುಷ್ಯಮಾಸಗಳ ಕೊರೆಯುವ ಚಳಿ ಕೂಡಿದ ಹೇಮಂತನ ಹಿಮಬಾಹುಳ್ಯ ಶಿಶಿರನಿಗಿಲ್ಲ. ಈತನು ಮಾಘ-ಫಾಲ್ಗುನಮಾಸಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಸಹ್ಯಶೈತ್ಯದಿಂದ ತೀರ್ಥಸ್ನಾನಸ್ಫೂರ್ತಿಯನ್ನೂ ಕೊಡಬಲ್ಲ ಉದಾರಿ! ಶಾಸ್ತ್ರವು ಮಾಘಮಾಸದಿಂದಲೇ ದಿವ್ಯಸ್ನಾನಾದಿಗಳನ್ನು ವಿಧಿಸುತ್ತದೆ. ಉತ್ತರಾಯಣದ ದೈವದಿವಸದಲ್ಲಿ ಸ್ನಾನ-ಸಂಧ್ಯಾ-ಪಂಚಮಹಾಯಾಗಾದಿ ಸರ್ವವೈದಿಕ ಕಾರ್ಯಗಳಿಗೂ ಶಿಶಿರನ ಪೂರ್ವಾಹ್ನ ಕಾಲವೇ ಅತ್ಯಂತ ಸಮಚಿತ. ಅಲ್ಲದೆ ಋತುಸಂಧಿಗಳು ಪ್ರತಿಯೊಂದು ಋತುವಿನ ಆದ್ಯಂತದ ಪಕ್ಷಗಳಲ್ಲಿ ಕಂಡರೂ ಶಿಶಿರನಲ್ಲಿ ಕಾಣುವಂತೆ‌ ಸ್ಪಷ್ಟ ಋತುಸಂಧಿಸೌಂದರ್ಯ ಮತ್ತಿತರ ಋತುಗಳಲ್ಲಿ ಮೃಗ್ಯ. ಬರಡು ಬರಡಾದ ಚಳಿಗಾಲದ ವಾರ್ಧಕವೃತ್ತಿಯು ನಳನಳಿಸುವ ಚೈತನ್ಯಸರ್ವಸ್ವ ಸಂಕೇತವಾದ ಚೈತ್ರ ಯೌವನಕ್ಕೆ ತಿರುಗುವ ಪರಿಣಾಮ ರಮಣೀಯಾವಧಿ ಶಿಶಿರ-ವಸಂತ ಸಂಧಿಯಲ್ಲಿದೆ.

ಆರಂಭದಲ್ಲಿ ಶಿಶಿರನು ಶೀತಲನೇ. ಆತನ ಪ್ರಭಾವವನ್ನು ಒಂದು ಚಾಟುಪದ್ಯ ಹೀಗೆ ವಿವರಿಸುತ್ತದೆ:
ಸೀತ್ಕಾರಂ ಶಿಕ್ಷಯತಿ  ವ್ರಣಯತ್ಯಧರಂ ತನೋತಿ ರೋಮಾಂಚಮ… |
ನಾಗರಕಃ ಕಿಂ ಮಿಲಿತೋ ನ ಹಿ ನ ಹಿ ಸಖೀ ಶೈಶಿರಃ ಪವನಃ |
ಸೀತ್ಕಾರವನ್ನು (ಸಶಬ್ದವಾಗಿ ತುಟಿಗಳನ್ನು ಕುಂಚಿಸುವುದು ಸಾಮಾನ್ಯವಾಗಿ ಚುಂಬನದಲ್ಲಿ) ಕಲಿಸುತ್ತಾನೆ, ತುಟಿಗಳನ್ನು ಗಾಯಗೊಳಿಸುತ್ತಾನೆ, ಮೈನವಿರೇಳಿಸುತ್ತಾನೆ-ಏನೇ! ಯಾರಾದರೂ “ನಾಗರಕ’ ನಿನಗೆ ಗಂಟುಬಿದ್ದನೇ? ಇಲ್ಲ ಇಲ್ಲ ಸಖೀ! ಈ ಶಿಶಿರಪವನನಿಂದ ಹೀಗಾಯ್ತು! ಶಿಶಿರದ ತಣ್ಣನೆಯ ಗಾಳಿ ಮಾಡುವ ಈ ಚೇಷ್ಟೆ ಬಲು ಬಿಸಿಯಾದದ್ದಲ್ಲವೇ! 
ಲಕ್ಷ್ಮೀಶ ಕವಿ ಹೇಳುತ್ತಾನೆ- ಶಿವನು ತನ್ನ ಶಿರಸ್ಸಿನ ಚಂದ್ರನನ್ನು ಆಗಸಕ್ಕೆಸೆದು, ಗಂಗೆಯನ್ನು ಸಾಗರಕ್ಕೆ ಒಗೆದು, ಹಣೆಗಣ್ಣನ್ನು ಅಗಲವಾಗಿ ಅಗ್ಗಿಷ್ಟಿಕೆಯಂತೆ ತೆಗೆದು ಚಳಿ ಕಾಯಿಸಿಕೊಳ್ಳಲಾರಂಭಿಸಿದನಂತೆ ! ನೀಲಕಂಠದೀಕ್ಷಿತನು ಗಂಗಾವತರಣ ಕಾವ್ಯದಲ್ಲಿ ಪಾರ್ವತಿಯು ತನ್ನ ಮಕ್ಕಳಿಗೆ ಹೊದಿಸಲು ಗಂಡನ ವ್ಯಾಘ್ರಾಜಿನ-ಗಜಾಜಿನಗಳನ್ನೂ ಕಿತ್ತುಕೊಂಡು ಪತ್ನಿàಧರ್ಮಕ್ಕಿಂತ ಮಾತೃಧರ್ಮವನ್ನು ಮಿಗಿಲಾಗಿ ಮೆರೆದ ಸಂಗತಿಯನ್ನು ವಿನೋದಮಯವಾಗಿ ವರ್ಣಿಸುತ್ತಾನೆ. ಒಂದು ಮುಕ್ತಕವಂತೂ ಈ ಥಂಡಿಯಲ್ಲೊಬ್ಬ ಹಾದಿಹೋಕನು ರಾತ್ರಿ ಕಳೆಯಲು ಒಂದೂರಿನ ಗ್ರಾಮದೇವತೆಯ ದೇವಾಲಯದಲ್ಲಿ ತಂಗಿದ್ದು, ಹರಕುಕೌದಿ ಎಳ್ಳಷ್ಟೂ ಪ್ರಯೋಜನಕ್ಕೆ ಬಾರದ ಬೆಳಗಿನ ಜಾವದ ಚಳಿಗೆ ತಾಳಲಾರದೆ ಮೂಲೆಯಿಂದ ಮೂಲೆಗೆ ಮುದುಡಿಕೊಳ್ಳಲು ತಾರಾಡುತ್ತಿದ್ದನೆಂದು ವರ್ಣಿಸಿದೆ. ರುದ್ರಭಟ್ಟನು ಕೋಳಿಯೂ ಸಹ ಬೆಳಗಿನ ಚಳಿಗೆ ಕೂಗಲೂ ಆಗದೆ, ಕಣ್ಣು ತೆರೆಯಲೂ ಇಚ್ಛಿಸದೆ ಮೌನದಿಂದ ಮುದುಡಿ ಕುಳಿತ ಬಗೆಯನ್ನು ರಮಣೀಯವಾಗಿ ನಿರೂಪಿಸುತ್ತಾನೆ. ಅಲ್ಲದೆ ನೀರಿನಲ್ಲಿಯೇ ಬದುಕುವ ಮೀನುಗಳಿಗೂ ನೀರನ್ನು ಬಿಟ್ಟು ಹೊರಬರುವಂತಾದುದಂತೆ! ಗಟ್ಟಿಚಿಪ್ಪಿನ ಉಭಯಚರಗಳಾದ ಆಮೆಗಳೂ ಎಳೆ ಬಿಸಿಲನ್ನೆಳಸಿದುವಂತೆ! ಸೂರ್ಯನ ಬಿಸಿಲನ್ನೇ ಬೆಳ್ದಿಂಗಳೆಂದು ಚಕೋರಗಳು ಹೀರುವಂತಾಯ್ತು. ಬಾಡಬಾಗ್ನಿಯನ್ನು ಹವಳವೆಂದು ಜಲದೇವತೆಗಳು ತಿಳಿಯುವಂತಾಯ್ತು. ಶಿವನ ಹಣೆಗಣ್ಣ ಬೆಂಕಿಯನ್ನು ರಕ್ತಚಂದನತಿಲಕವೆಂದೂ ಭ್ರಮಿಸಿ ಪಾರ್ವತಿಯೂ ವಿಸ್ಮಿತೆಯಾಗುವಂತಾಯ್ತು!

ಮರಗಳಿಂದ ಎಡೆಬಿಡದೆ ಉದುರುವ ಹೊಂಬಣ್ಣದ ತರಗೆಲೆಗಳು ಭುವಿಗೆ ವೃಕ್ಷದೇವತೆಗಳು ಆಗಸದೊಡನೆ ಸ್ಪರ್ಧೆಹೂಡಿ, ಆಗಸವು ಸುರಿಸುವ ಬೆಳ್ಳಿಯ (ಹಿಮದ) ಮಳೆಗೆ ಮಿಗಿಲಾಗಿ ಸಡ್ಡು ಹೊಡೆಯುವ ಬಂಗಾರದ ಮಳೆಯನ್ನೆರೆದು ತಮ್ಮ ಕೃತಜ್ಞತೆಯನ್ನು ತೋರುವಂತಿತ್ತು! ಬರಮೋಡದ ತೊಟ್ಟಿಲಲ್ಲಿ, ಶೀತವಾತಚಲನಧ್ವನಿಯೆಂಬ ಜೋಗುಳ ಹಾಡುತ್ತ ಹಿಮವೆಂಬ ಶಾಲುಸುತ್ತಿ ಶಿಶಿರನು ಚಂದ್ರನೆಂಬ ಮಗುವನ್ನಿಟ್ಟು ಮಲಗಿಸುತ್ತಿದ್ದಂತಿತ್ತು! (ಇದು ನನ್ನ ಗ್ರಾಮಜನಋತವಃ ಎಂಬ ಖಂಡಕಾವ್ಯದ ಭಾಗ)

Advertisement

ಮೊಂಡುತನದ ತುಂಟ
ಆಂಧ್ರಕವಿ ವಿಶ್ವನಾಥ ಸತ್ಯನಾರಾಯಣ ಶಿಶಿರದಲ್ಲಿ ಇರುವೆಗಳ ಪಾಡು, ಕಂಬಳಿ ಹುಳಗಳ ಹೊಯ್ದಾಟ, ದನಕರುಗಳ ವರ್ತನೆ, ಹಳ್ಳಿಯ ಜನರ ರೀತಿ-ನೀತಿಗಳೆಲ್ಲವನ್ನೂ ಅತಿನಿಶಿತಪರಿಶೀಲನೆಯಿಂದ ನಿರೂಪಿಸಿದ್ದಾರೆ. ಮತ್ತೂಬ್ಬ ಜ್ಞಾನಪೀಠಪ್ರಶಸ್ತಿ ವಿಜೇತ ತೆಲುಗುಕವಿ ಸಿ. ನಾರಾಯಣ ರೆಡ್ಡಿ ಶಿಶಿರನನ್ನೊಬ್ಬ ಮೊಂಡುತನದ ತುಂಟನಿಗೆ ಹೋಲಿಸಿ, ಶೀತವಾತಗಳನ್ನೆಲ್ಲ ಆ ಬಾಲಕ ಉಡಾಳತನವನ್ನಾಗಿ ವರ್ಣಿಸಿದ್ದಾರೆ. ಸಂಗೀತವಿಚಾರವು ಈ ಪ್ರಬಂಧಕ್ಕೆ ಹೊರತಾದರೂ ಒಂದೇ ಒಂದು ಅನರ್ಘ‌ಭಾಸ್ವರವಾದ ತೆಲುಗುಪದ್ಯದೊಂದಿಗೆ ಈ ಕವಿಕಲ್ಪನಶಿಲ್ಪವನ್ನು ಮುಗಿಸಬಹುದು. ಸಂಗೀತರಹಸ್ಯಕಲಾನಿಧಿಯೆಂದು ಖ್ಯಾತಿವೆತ್ತ ರಾಮರಾಜಭೂಷಣನು ತೆನಾಲಿ ರಾಮಕೃಷ್ಣನ ಸಮಕಾಲೀನ. ಈತನ ಪ್ರತಿಪದ್ಯ ಚಮತ್ಕಾರವಿರುವ ವಸುಚರಿತ್ರವೆಂಬ ಕಾವ್ಯದಲ್ಲಿ ಕವಿಯು ಮೆರೆದಿರುವ ಸಾಹಿತ್ಯ-ಸಂಗೀತಪ್ರೌಢಿಮೆ ಅನನ್ಯ. ಶಿಶಿರ-ವಸಂತಗಳ ಸಂಧಿಕಾಲದಲ್ಲಿ ಹಾಡಬೇಕಾಗಿರುವ “ಹಿಂದೋಳ’ ರಾಗದಲ್ಲಿ ರಿಷಭ ಮತ್ತು ಪಂಚಮ ಸ್ವರಗಳು ವಜ್ಯì. ವಸಂತ ಋತೂಚಿತವಾದ ವಸಂತರಾಗದಲ್ಲಿ ಎಲ್ಲ ಸ್ವರಗಳೂ ಇವೆ. ಹೀಗಾಗಿ ಶಿಶಿರಾಂತ್ಯದಲ್ಲಿ ಕೋಗಿಲೆಗಳು ಮೌನವಾಗಿದ್ದುವು (ಕೋಗಿಲೆ ಪಂಚಮ ಸ್ವರದ ಪ್ರತಿನಿಧಿ) ವಸಂತೋದಯವಾಗುತ್ತಿದ್ದಂತೆಯೇ “ಸರಿ’ಯಾಗಿ “ಕೋಕಿಲವಾಣಿ’ ಕಳೆಗೊಂಡು ಹಿಂದೋಳವನ್ನು ಸೇರಿತು. (ಇಲ್ಲಿ “ಸರಿ’ ಎಂದರೆ ರಿಷಭ ಸಹಿತವೆಂಬರ್ಥ) ಕೋಕಿಲವಾಣಿ ಸ್ತ್ರೀಯರ ವಿಶೇಷಣವಲ್ಲದೆ ಪಂಚಮದ ಪ್ರತಿನಿಧಿ ಮತ್ತು “ಹಿಂದೋಳ’ ಔಡವರಾಗವೊಂದಲ್ಲದೆ ತೂಗುಯ್ನಾಲೆ ಎಂಬ ಹಲವು ಅರ್ಥಚ್ಛಾಯೆಗಳಿಂದಾಗಿ ಕವಿತೆಗೆ ಬಂದ ಸೊಗಸು ಸ್ಮರಣೀಯ.

ಶಿಶಿರದಲ್ಲಿ ಬರುವ ರಥಸಪ್ತಮಿ ಅರ್ಕಪತ್ರ (ಎಕ್ಕದೆಲೆ)ಕ್ಕೂ ಅರ್ಕ (ಸೂರ್ಯ)ನಿಗೂ ಕಲ್ಪಿಸುವ ನಂಟು ವೈದ್ಯಶಾಸ್ತ್ರದ ಬೆಂಬಲವನ್ನೂ, ಭಾಷಾಶಾಸ್ತ್ರದ ಸಂಬಂಧಗಳನ್ನೂ ಹೊಂದಿದೆ. ಮಹಾಶಿವರಾತ್ರಿಯಂತೂ ಸುಪ್ರಸಿದ್ಧ. ಅಷ್ಟಮೂರ್ತಿಯಾದ ಮಹೇಶ್ವರನು ತನ್ನ ಪರಮವೈರಾಗ್ಯಕ್ಕೂ ಸರ್ವೇಂದ್ರಿಯಸಂಯಮಕ್ಕೂ ತಕ್ಕ ರೀತಿಯಲ್ಲಿ ಶಿಶಿರನನ್ನೇ ಆರಿಸಿಕೊಂಡು ಆವಿರ್ಭವಿಸಿರುವುದು ಚಿಂತನೀಯ. ಪರಮಭಾಗವತೋತ್ತಮನೂ ಶಸ್ತ್ರ-ಶಾಸ್ತ್ರವಿದ್ಯಾನಿಧಿಯೂ ಆದ ಇಚ್ಛಾಮರಣಿ ಭೀಷ್ಮನ ಅವಸಾನಕ್ಕೂ ಶಿಶಿರವೇ ಬೇಕಾಯಿತು. 

ಇವೆಲ್ಲಕ್ಕೂ ಆಂತರಿಕವಾದ ತಾತ್ತಿಕಸಂಬಂಧವನ್ನು ಕಲ್ಪಿ ಸುವಂತೆ ಕುಮಾರಸಂಭವಕ್ಕಾಗಿ (ಸ್ಕಂದಜನನಕ್ಕಾಗಿ) ಕುಮಾರ (ಕೆಟ್ಟ ಮನ್ಮಥ) ಸಂಹಾರವಾದದ್ದೂ ಶಿಶಿರದಲ್ಲಿಯೇ. ಕಾಲಸ್ವರೂಪಿಯಾದ ಮಹಾವಿಷ್ಣುವಿನ ಪುತ್ರನು ಕಾಲ-ಕಾಲನಾದ ಮಹೇಶ್ವರನ ಪುತ್ರೋದಯ ಕ್ಕಾಗಿ ಗತಿಸಿದ್ದು ಬಹು ಧ್ವನಿಪೂರ್ಣ. ಕಾಮನ ದಹನದಿಂದಲೇ ಕ್ಷೇಮದ ಆವಿರ್ಭಾವ. ಆದರೆ ದಗ್ಧನಾದ ಕಾಮನ ಪುನರುಜ್ಜೀವನದಿಂದಲೇ ಜೀವನವೆಂಬ ಪರಮಸತ್ಯವೂ ಇಲ್ಲಿದೆ. ಕಾಮದಹನದ ಸಂಕೇತ ಆದಿಯಿಂದಲೂ ಕವಿ-ಕಲಾವಿದರಿಗೆ ಬತ್ತದ ವಸ್ತು. ಫಾಲ್ಗುನಪೂರ್ಣಿಮೆಯಂದು ಶಿಶಿರ-ವಸಂತಸಂಧಿಕಾಲದ ಸಂಕೇತವಾಗಿ ಸಂಗೀತ (ನೃತ್ಯ-ಗೀತ-ವಾದ್ಯವಿನೋದ), ಸಾಹಿತ್ಯ, ಶೃಂಗಾರಲೀಲೆಗಳ ಆರಂಭ. ಕಾಮದೇವಾಯತನಗಳನ್ನು ಹೊಂದಿದ್ದ ಪ್ರಾಚೀನಭಾರತದಲ್ಲಿ ಅಂದಿನಿಂದಲೇ ರತಿ-ಮನ್ಮಥರ ಪೂಜೆ, ಹೋಲಿಕೋತ್ಸವ, ನಾಗರಕಗೋಷ್ಠಿಗಳ ನಾಂದಿ.

ಶಿಶಿರದಲ್ಲಿ ಹೇಮಂತ-ವಸಂತಗಳ ರಸಪಾಕವಿರುತ್ತದೆ. ಹೆಚ್ಚಾಗಿ ಅಂತರ್ವೇಶ್ಮ (ಇನೊxàರ್‌) ಕ್ರೀಡೆಗಳೇ ಉಪಾದೇಯ. ಡೋಲಾವಿನೋದ (ಉಯ್ನಾಲೆಯಾಟ), ಕ್ರೀಡಾಶಕುಂತಸಂಘಾತ (ತಿತ್ತಿರಿ, ಕುಕ್ಕುಟ ಮೊದಲಾದ ಪಕ್ಷಿಗಳ ದ್ವಂದ್ವಯುದ್ಧದ ಆಯೋಜನೆ), ಶುಕಾದ್ಯಾಲಾಪಾಭ್ಯಾಸವಿನೋದ (ಗಿಳಿ, ಶಾರಿಕೆ ಮೊದಲಾದ ಪಕ್ಷಿಗಳಿಗೆ ವಿರಾಮವಾಗಿ ಮಾತು ಕಲಿಸುವುದು!) ಈ ಕೆಲಸವಂತೂ ಹದಿಹರೆಯದ ಮುಗುದೆಯರಿಗಾಗ ಬಲು ಹಿತವಾಗಿತ್ತು. ಆದರೆ ಮಾತನ್ನು ಕಲಿತ ಧೂರ್ತಪಕ್ಷಿಗಳು ಆ ಮಾನಿನಿಯರು ಏಕಾಂತದಲ್ಲಿ ತಮ್ಮ ಇನಿಯರೊಡನಾಡಿದ ಮಾತುಗಳನ್ನೂ -ಕಲಿಸದೆಯೇ-ಕಲಿತುಬಿಟ್ಟು ಹಗಲಿನಲ್ಲಿ ಎಲ್ಲರ ನಡುವೆ ಪದೇ ಪದೇ ಅದನ್ನೇ ಹಾಡಿ ತಮ್ಮ ಒಡತಿಯರ ಮಾನವನ್ನು ಕಳೆಯುತ್ತಿದ್ದವು! ಅಮರುಕಾದಿಗಳ ಪದ್ಯಗಳಲ್ಲಿ ಇಂಥ ಹಲವು ರಸಸಂದರ್ಭಗಳ ವರ್ಣನೆಯುಂಟು. ಆಗ ಕೆಲವರು ಚದುರೆಯರು ತಮ್ಮ ಮುದ್ದಿನ ಹಕ್ಕಿಗಳಿಗೆ ಬಾಯ್ದೆರೆಯಲಾರದಷ್ಟು ತಿನಿಸನ್ನಿತ್ತು ಮಾತನ್ನು ನಿಲ್ಲಿಸುತ್ತಿದ್ದರು. ಒಬ್ಬಳಂತೂ ಇಂಥ ಒಂದು ಸಂದರ್ಭದಲ್ಲಿ ಏನೂ ಇಲ್ಲದಿದ್ದಾಗ ಕಿವಿಯ ಕೆಂಪು ಹರಳ್ಳೋಲೆಯನ್ನೇ ದಾಳಿಂಬದ ಬೀಜಗಳೆಂದು ಮರುಳುಗೊಳಿಸಿ ಗಿಳಿಯ ಬಾಯಿಗೊಡ್ಡಿ ಗುರುಹಿರಿಯರ ಗೇಲಿಯಿಂದ ಪಾರಾದಳಂತೆ! ಮತ್ತೂಬ್ಬಳು “ಕಾಂತ’ “ರಮಣ’ನಾಥ ಎಂದು ಗಿಳಿ ತಾನು ತನ್ನಿನಿಯನನ್ನು  ಸಂಬೋಧಿಸಿದ ನುಡಿಗಳನ್ನೇ ಹಾಡಿದಾಗ ಜಾಣ್ಮೆಯಿಂದ ಸುತ್ತಲಿದ್ದ ಜನರಿಗೆ ಈ ಹೆಡ್ಡ ಗಿಳಿಯು ಪೂರ್ಣವಾಗಿ ಶಬ್ದಗಳನ್ನು ಉಚ್ಚರಿಸಲಾರದು; ಶೀಕಾಂತ, ರಮಾರಮಣ, ಆಶ್ರಿತನಾಥ ಎಂದು ದೇವರ ಸ್ತುತಿಯನ್ನು ನಾನು ಕಲಿಸಿದರೆ ಇದು ಹೇಳುವ ರೀತಿ ಹೀಗಿದೆ! ಎಂದು ಚಮತ್ಕರಿಸಿ ಗಿಳಿಗೇ ಗೇಲಿ ಮಾಡಿಸಿದಳಂತೆ! (ಇದು ನನ್ನ ಶೃಂಗಾರಲಹರಿಯ ಪದ್ಯದ ಛಾಯೆ) ಇದಲ್ಲದೆ ನಿಲೀನಕಕ್ರೀಡೆ (ಕಣ್ಣು ಮುಚ್ಚಾಲೆಯಾಟ) ಸಹ ಜನಪ್ರಿಯವಾಗಿತ್ತು! ಕ್ರೀಡೆಗಳಿಗೆ ವಯಸ್ಸಿಗಿಂತ ಮನಸ್ಸು ಮುಖ್ಯವೆಂಬುದಕ್ಕಿದು ಸಾಕ್ಷಿ.

ಸೂರ್ಯಸ್ನಾನಗಳ ಪಿತಾಮಹ
ಬಾಲಾತಪವಿನೋದವಂತೂ ಎಳೆ ಬಿಸಿಲಿಗೆ ಮೈಯ್ಯನ್ನೊಡ್ಡಿ ಮಲೆತು ಮೈಮರೆಯುವ ಖಯಾಲಿ! ಇಂದಿನ ಸೂರ್ಯಸ್ನಾನಗಳಿಗೆಲ್ಲ ಇದು ಪ್ರಪಿತಾಮಹ! ಈಚೆಗೆ ಪಾಶ್ಚಾತ್ಯರಲ್ಲಿ ಮಾತ್ರ ಕಾಣಸಿಗುವ, ಮಡಿವಂತರು ಮೂಗುಮುರಿಯುವ ಈ ಲೀಲೆಯನ್ನು ಶಾರದಾತನಯನು ತನ್ನ ಭಾವಪ್ರಕಾಶದಲ್ಲಿ  ಹೆಸರಿಸಿದ್ದಾನೆ. ಇವುಗಳನ್ನೆಲ್ಲ ಕಂಡಾಗ ನಮ್ಮ ಪೂರ್ವಿಕರ ಜೀವನೋತ್ಸಾಹ ಮತ್ತು ಅತಿಸ್ವಲ್ಪ  ವಿನೋದಕ್ಕೂ ಇತ್ತ ಹೃದಯಸಂಪನ್ನಪ್ರಾಶಸ್ತ್ಯ ಅರಿವಾಗದಿರದು. ಈ ಎಲ್ಲ ಚೆಲ್ಲಾಟಕ್ಕೂ ಕಲಶಪ್ರಾಯವಾದದ್ದು ಪಾನಗೋಷ್ಠಿ! ಇದರ ನೈತಿಕಚರ್ಚೆ ಹೇಗಾದರಿರಲಿ, ಭೌತಿಕಾಸ್ತಿತ್ವ ಮಾತ್ರ ಅಜರಾಮರ! ಧರ್ಮಶಾಸ್ತ್ರಗಳೆಲ್ಲ ಒಕ್ಕೊರಲಿನಿಂದ ಮದಿರಾಪಾನವನ್ನು ನಿಂದಿಸಿ ದಿಗಿಲು ತರಿಸುವಂಥ ದಂಡ-ಪಾಪ-ಪ್ರಾಯಶ್ಚಿತ್ತಗಳನ್ನು ವಿಧಿಸಿದರೂ ರೂಢಿರೇವ ಬಲೀಯಸೀ! ಅನುಲ್ಲಂಘವಾದ ಮನುಶಾಸನವೇ ಮದ್ಯಪಾನವು ಮಾಂಸಾಶನ-ಮೈಥುನಗಳಂತೆ ಮೂಲಭೂತಪ್ರಕೃತಿಯಾದ ಕಾರಣ ದೋಷವಿಲ್ಲವೆಂದು ಗತ್ಯಂತರವಿರದೆ ಒಪ್ಪಿ ನಿವೃತ್ತಿಸ್ತು ಮಹಾಫ‌ಲಾ ಎಂದು ಹೇಳಿ ಸುಮ್ಮನಾಗಬೇಕಾಯಿತು! (ಹೀಗೆಂದು ನಾನು ಭಗವಾನ್‌ ಮನುಮಹರ್ಷಿಗಳ ಸ್ಮತಿಯನ್ನು ಲಘುವಾಗಿ ಕಾಣುತ್ತಿಲ್ಲ; ವಸ್ತುಸ್ಥಿತಿಯ ಬಲವನ್ನು ಲಾಘವದಿಂದ ರೂಪಿಸುತ್ತಿದ್ದೇನಷ್ಟೆ) ಪ್ರಾಚೀನ ಭಾರತದಲ್ಲಿ ಸುಮಾರು 40-50 ತೀಕ್ಷ್ಣ ವಾದ ಮದ್ಯಪ್ರಕಾರಗಳೂ 50-60 ಮೃದುಮಧ್ಯಮ ಹಾಗೂ ಮಾದಕತ್ವರಹಿತಪೇಯಗಳೂ ಇದ್ದವೆಂದು ಕೆಲವರ ಸಂಶೋಧನೆ. ದ್ರಾಕ್ಷಿ, ಕಪಿತ್ಥ (ಬೇಲ), ನಾಗಚಂಪಕಪುಷ್ಪ, ಧಾತಕೀಪುಷ್ಪ, ಗುಡ (ಬೆಲ್ಲ), ಕದಂಬ, ಖರ್ಜೂರ, ಮಧೂಕಪುಷ್ಪ, ನಾರಿಕೇಳ, ಮಧೂಲಿಕ ಮೊದಲಾದವುಗಳಿಂದ ತಯಾರಿಸುತ್ತಿದ್ದ ಬಗೆಬಗೆಯ ಮದ್ಯಗಳ ಹೆಸರೇ ಮನೋಹರ. ಶೀಧು, ಮೇರಯ, ಮೈರೇಯ, ಮಧು, ಆಸವ, ವಾರುಣೀ, ಕಾದಂಬರೀ, ದಿವ್ಯಾ, ಪರಿಶ್ರುತ, ಮಾಧವೀ ಇತ್ಯಾದಿಗಳಲ್ಲದೆ ಕಾಪಿಶಾಯಿನೀ (ಕಾಬೂಲಿನಿಂದ ಬರುತ್ತಿದ್ದದ್ದು) ಮೊದಲಾದ ಇಂಪೋರ್ಟೆಡ್‌ ಪ್ರಕಾರಗಳೂ ಇದ್ದವು! ಮತ್ತು ಬರಿಸದ ಆಮಲಕ, ದಾಡಿಮ, ಧಾನ್ಯಾಮಲ, ಗುಡೋದಕ, ಹಂಸೋದಕ, ಐಕ್ಷವ, ಜಾಂಬವ, ಕರ್ಕಂಧೂ, ಖಂಡ, ಜಂಬೀರ, ಸೌವೀರ, ಪಂಚಸಾರ ಮೊದಲಾದ ಅನೇಕಮೃದುಮಧುರಪಾನಕ -ಪಾನೀಯಗಳೂ ವಿಪುಲವಾಗಿದ್ದವು. ಶ್ರೀಮದ್ವಾಲ್ಮೀಕಿರಾಮಾಯಣದ ಮಧುವನಪ್ರಸಂಗ (ಸುಂದರಕಾಂಡ) ಉತ್ತರಕಾಂಡದ ರಾಮಸೀತಾವಿಹಾರ (ಸರ್ಗ 42)ವೂ ಈ ಬಗೆಯ ಪಾನಗೋಷ್ಠಿಗಳ ಎರಡು ವಿಭಿನ್ನಸ್ತರಗಳನ್ನು ವರ್ಣಿಸುವ ಆದಿಮಕವಿ-ಕರ್ಮಗಳು.

ಇಂಥ ರಸಾಸವಗಳೊಡನೆ ಕಾವ್ಯ-ಗೀತರಸಾಸ್ವಾದವೂ ತಡೆಯಿಲ್ಲದೆ ನಡೆಯುತ್ತಿತ್ತು. ವಿದಗ್ಧಗೋಷ್ಠಿಗಳಲ್ಲಿ ಈ ಲೇಖನದ ಆದಿಯಲ್ಲಿ ಹೇಳಿದ ಅಪಹು°ತ ಎಂಬ ಪ್ರಕಾರದ ಚಾಟುಪದ್ಯದ ಬಗೆಯಲ್ಲಿ ಅನೇಕವಿಧದ ಪ್ರಹೇಲಿಕೆ (ಒಗಟು), ಆಭಾಣಕ (ಗಾದೆ), ವಾಚೋಯುಕ್ತಿ (ನುಡಿಗಟ್ಟು)ಗಳ ರಚನೆ-ಕಥನಗಳಲ್ಲದೆ ಚಿತ್ರಕವಿತ್ವದ ಬಗೆಬಗೆಯ ಮುಖಗಳಾದ ಬಿಂದುಚ್ಯುತಕ, ಮಾತ್ರಾಚ್ಯುತಕ, ಕ್ರಿಯಾಗುಪ್ತ, ಕಾರಕಗುಪ್ತ, ಅಂತರ್ಲಾಪಿ, ಬಹಿರ್ಲಾಪಿ ಮೊದಲಾದ ಕಸರತ್ತುಗಳ ಮೂಲಕ ಬುದ್ಧಿಪಾಟವವನ್ನು ತೋರಲಾಗುತ್ತಿತ್ತು. ತನ್ಮೂಲಕ ಬುದ್ಧಿ-ಮನಸ್ಸು-ಮೆಯಳಿಗೆ ಬಿಸಿ ಏರುತ್ತಿತ್ತು.

ಚರಕ-ಸುಶ್ರುತಾದಿಗಳು ತಮ್ಮ ಸಂಹಿತೆಗಳಲ್ಲಿ ಶಿಶಿರೋಚಿತ ಋತುಚರ್ಯೆಗೆ ವಾತಪದಾರ್ಥಗಳ ನಿಷೇಧ, ಬಿಲವಾಸಿಗಳ ಮಾಂಸಕ್ಕೆ ಅನಮೋದನೆ, ಕಲವಿಂಕ, ಲಾವಕಾದಿಗಳ ಖಾದ್ಯಗಳಿಗೆ ಸಮ್ಮತಿಯನ್ನು ಕೊಡುತ್ತಾರೆ. ಅಲ್ಲದೆ ಸಿಹಿ-ಒಗರುಗಳ ಸಮರಸವನ್ನೂ ಕ್ಷೀರಬಾಹುಲ್ಯವನ್ನೂ ಅಂಗೀಕರಿಸುತ್ತಾರೆ. ಅಗಳಗುಳಾಗುವ ಅನ್ನಕ್ಕಿಂತ ಮುದ್ದೆಯ ಅನ್ನ ಒಳಿತು. ಮೆಣಸು, ಜೀರಿಗೆ, ಶುಂಠಿಗಳ ಪ್ರಾಬಲ್ಯ ಉತ್ತಮ. ನೆಲಮಾಳಿಗೆಗಳಲ್ಲಿ ವಾಸ. ಅಗ್ಗಿಷ್ಠಿಕೆಯ ಸಾಹಚರ್ಯ ಮತ್ತು ಮರದ ಪರಿಕರಗಳು ಅನುಕೂಲ. ಮದ್ಯಸೇವನೆಯೂ ಮಿತ್ರಪ್ರಮಾಣದಲ್ಲಿ ಅನುಮತ. ಈ ರೀತಿಯಲ್ಲಿ ಅನ್ನ-ಪಾನಗಳ ವಿತರಣೆಯು ಹಲವರಿಂದ ಸಂದಿದೆ.

ಹೀಗೆ ಶಿಶಿರ ಋತು ತನ್ನದೇ ಆದ ಸ್ಥಾನೌಚಿತ್ಯದಿಂದ ಮುಂಬರುವ ಚೈತ್ರದ ಜೈತ್ರಯಾತ್ರೆಗೆ ಹರಿಕಾರನಾಗಿ ಪ್ರಕೃತಸಂವತ್ಸರವಿಧಾನದ ಭರತವಾಕ್ಯವನ್ನು ಘೋಷಿಸುವ ಕುಶೀಲವನಾಗಿ ಅಖಂಡಕಾಲದ ಅವ್ಯಾಕೃತಸೌಂದರ್ಯಕ್ಕೆ ಸಾಪೇಕ್ಷವಾದ ಸಮಯಖಂಡಗಳ ವ್ಯಾಕೃತವಿವರಣೆಯನ್ನು ಕೊಟ್ಟು ಸಾರ್ಥಕವಾಗಿದೆ.

ಶತಾವಧಾನಿ ಆರ್‌. ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next