Advertisement
ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ದೇವಸ್ಯಮೂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ಮುದಿಮಾರ ಮತ್ತು ಇಬ್ಬರು ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳ ತಂಡ ವಿದ್ಯಾ ದೇಗುಲ ಸೇವಾ ಯೋಜನೆ ಎಂಬ ಹೆಸರಿನಲ್ಲಿ ಶಾರ್ದೂಲವೇಷ ಧರಿಸಿ ಗಮನ ಸೆಳೆದಿದ್ದಾರೆ.
1955ರಲ್ಲಿ ಆರಂಭಗೊಂಡ ದೇವಸ್ಯ ಮೂಡೂರು ಶಾಲೆಗೆ ಈಗ 70ರ ಹರೆಯ. ಈ ಶಾಲೆಗೆ ಸುಮಾರು 1.20 ಎಕ್ರೆ ಸ್ವಂತ ಜಮೀನು ಇದೆಯಾದರೂ ಹತ್ತಾರು ಸಮಸ್ಯೆಗಳಿಂದ ಅದು ಕಷ್ಟದಲ್ಲಿ ಸಿಲುಕಿಕೊಂಡಿದೆ. ರಾಜ್ಯದಲ್ಲಿ ಅದೆಷ್ಟೋ ಶಾಲೆಗಳು ಮೂಲ ಸೌಕರ್ಯದ ಕೊರತೆಯಿಂದ, ವಿದ್ಯಾರ್ಥಿಗಳ ಸಂಖ್ಯೆ ಕುಸಿತದಿಂದ ಮುಚ್ಚಿಹೋಗಿವೆ. ತಮ್ಮ ಊರಿನ ಶಾಲೆ ಕೂಡಾ ಹಾಗಾಗಬಾರದು ಎಂಬ ಕಾಳಜಿಯನ್ನು ಎಸ್‌ಡಿಎಂಸಿ ಮತ್ತು ಊರವರು ಹೊಂದಿದ್ದಾರೆ.
Related Articles
Advertisement
ಶಾಲೆ ಉಳಿಸುವುದು ಊರಿನ ಹೊಣೆಸರಕಾರಿ ಶಾಲೆ ಉಳಿಸಲು ಜನಪ್ರತಿನಿಧಿಗಳು ಮತ್ತು ಸರಕಾರವನ್ನು ನಂಬಿಕೊಳ್ಳುವ ಬದಲು ಊರವರೇ ತೊಡಗಿಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯವರು. ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳ ತಂಡ ಈಗಾಗಲೇ ದಾನಿಗಳ ನೆರವಿನಿಂದ ಮೂಲ ಸೌಕರ್ಯಕ್ಕಾಗಿ ಪ್ರಯತ್ನಿಸುತ್ತಿದೆ. ಅದರ ಜತೆಗೆ ಈಗ ನವರಾತ್ರಿ ವೇಷ ಧರಿಸಿ ಹೊರಟಿದೆ. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಮುದಿಮಾರ ಅವರು ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು ಈ ಕೆಲಸದಲ್ಲಿ ಆಸಕ್ತರಾಗಿದ್ದಾರೆ. ಗ್ರಾಮೀಣ ಜನರ ಶಿಕ್ಷಣ ದೇಗುಲವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನಿಟ್ಟಿನಲ್ಲಿ ಒಟ್ಟು 5 ದಿನಗಳಲ್ಲಿ ಶಾರ್ದೂಲ ವೇಷ ಧರಿಸಿ ಹಣ ಸಂಗ್ರಹಿಸುತ್ತೇವೆ. ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕಾಂದ್ರೋಡಿ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ ನಾಯ್ಕ ಹಾಗೂ ಕೆಲವೊಂದು ಹಿರಿಯ ವಿದ್ಯಾರ್ಥಿಗಳು ಕೂಡಾ ನನಗೆ ಸಾಥ್ ನೀಡುತ್ತಿದ್ದಾರೆ.
-ವಸಂತ ಮುದಿಮಾರ ಎಸ್‌ಡಿಎಂಸಿ ಅಧ್ಯಕ್ಷರು -ರತ್ನದೇವ್ ಪುಂಜಾಲಕಟ್ಟೆ