ಶಿರ್ವ: ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರ ಆದೇಶದಂತೆ ಸಂಜೀವಿನಿ ಒಕ್ಕೂಟಗಳ 2ನೇ ಸಂಜೀವಿನಿ ಸಂತೆಯು ನ. 1 ರಂದು ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆ ಬಳಿಯ ಶಿರ್ವ ಮಹಿಳಾ ಮಂಡಲದ ಮಹಿಳಾ ಸೌಧದಲ್ಲಿ ನಡೆಯಿತು.
ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಕಾರದ ಆದೇಶದಂತೆ ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಗಾಂಧೀ ಜಯಂತಿಯಂದು ನಡೆದ ಸಂಜೀವಿನಿ ಸಂತೆ ಯಶಸ್ವಿಯಾಗಿದ್ದು, ಇದೀಗ 2ನೇ ಸಂಜೀವಿನಿ ಸಂತೆಗೆ ಚಾಲನೆ ನೀಡಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಗ್ರಾಮಸ್ಥರು,ಸಾರ್ವಜನಿಕರು ಮಹಿಳೆಯರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ಯ,ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್.ಆಚಾರ್ಯ, ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಶಿರ್ವ ಒಕ್ಕೂಟದ ಅಧ್ಯಕ್ಷೆ ಗೀತಾ ವಾಗ್ಲೆ, ಕುತ್ಯಾರು-ಕಳತ್ತೂರು ಒಕ್ಕೂಟದ ಅಧ್ಯಕ್ಷೆ ಶಾರದೇಶ್ವರೀ ಗುರ್ಮೆ, ಶಿರ್ವ, ಮುದರಂಗಡಿ, ಮತು ಕುತ್ಯಾರು ಗ್ರಾ.ಪಂಚಾಯತ್‌ಗಳ ಸದಸ್ಯರು, ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿರ್ವ,ಮುದರಂಗಡಿ ಮತ್ತು ಕುತ್ಯಾರು ಗ್ರಾ.ಪಂಚಾಯತ್‌ಗಳ ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯೆಯರು ಮನೆಯಲ್ಲಿಯೇ ತಯಾರಿಸಿದ ದಿನಬಳಕೆಯ ವಸ್ತುಗಳು, ತರಕಾರಿ,ಮಾಸ್ಕ್,ಬಟ್ಟೆ ,ಸಿಹಿ ತಿಂಡಿಗಳು, ಸಾಂಬಾರ್ ಪುಡಿ,ಮೂಡೆ ಎಲೆ,ಅರಸಿನದ ಎಲೆ ಮೊದಲಾದ 50ಕ್ಕೂ ಹೆಚ್ಚಿನ ಉತ್ಪನ್ನಗಳ ಮಾರಾಟ ನಡೆಯಿತು.
ಶಿರ್ವ ಗ್ರಾ.ಪಂ. ಪಿಡಿಒ ಅನಂತ ಪದ್ಮನಾಭ ನಾಯಕ್ ಸ್ವಾಗತಿಸಿ,ವಂದಿಸಿದರು.