Advertisement

ಶಿರ್ವ ಗಾಮ ಪಂಚಾಯತ್‌ನ ಕೆಲವೆಡೆ ಸಮಸ್ಯೆ

06:30 AM Mar 30, 2018 | Team Udayavani |

ಶಿರ್ವ: ಬಿಸಿಲಿನ ಬೇಗೆಯಿಂದ ಬತ್ತಿದ ಜೀವಜಲ ಬೆಳ್ಳೆ ಗ್ರಾ.ಪಂ.ನ ಕೆಲವೆಡೆ ಜನಜೀವನವನ್ನು ಕಷ್ಟಕರವನ್ನಾಗಿಸಿದೆ. ಕಾಪು ತಾಲೂಕಿನ ಬೆಳ್ಳೆ ಗ್ರಾ.ಪಂ. ಬೆಳ್ಳೆ -ಕಟ್ಟಿಂಗೇರಿ ಅವಳಿ ಗ್ರಾಮಗಳನ್ನೊಳಗೊಂಡಿದೆ. ಇಲ್ಲಿನ ಗಾಂಧಿನಗರ, ಧರ್ಮಶ್ರೀ ಕಾಲನಿ, ರಕ್ಷಾಪುರ ಕಾಲನಿ, ಪೊಯ್ಯದ ಪಾಡಿ ನೀರಿಲ್ಲದೇ ಸಂಕಷ್ಟದಲ್ಲಿವೆ. ಉಳಿದೆಡೆಗಳಿಗೆ ನೀರು ಸುಮಾರಾಗಿ ಪೂರೈಕೆಯಾಗುತ್ತಿದೆ. 

Advertisement

ಗಾಂಧಿನಗರದಲ್ಲಿ ನೀರು ಪೂರೈಸುತ್ತಿದ್ದ ಬೋರ್‌ವೆಲ್‌ನಲ್ಲೂ ನೀರಿನ ಕೊರತೆ ಕಾಡಿದೆ. ಇದರಿಂದ ಟಾಸ್ಕ್ ಫೋರ್ಸ್‌ನಲ್ಲಿ ತುರ್ತು ಬೋರ್‌ವೆಲ್‌ಗೆ ಕೊರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ನೀರಿನ ಸಮಸ್ಯೆ ತೀವ್ರಗೊಂಡಿದ್ದರಿಂದ 14ನೇ ಹಣಕಾಸು ಯೋಜನೆಯಲ್ಲಿ ಬದಲಿ ಕಾಮಗಾರಿಯಾಗಿ ತುರ್ತು ಬೋರ್‌ವೆಲ್‌ ನಿರ್ಮಿಸಲಾಗಿದೆ. 

ಪಡುಬೆಳ್ಳೆಯ ಧರ್ಮಶ್ರೀ ಮತ್ತು ರಕ್ಷಾಪುರ ಕಾಲನಿಯ ಪ್ರದೇಶಗಳಿಗೆ ಕುರ್ಡಾಯಿ ಕೆರೆ (ದಿಂದೊಟ್ಟು) ಹಾಗೂ ಪಡುಬೆಳ್ಳೆ ದೇವಸ್ಥಾನದ ನದಿ ಬಳಿಯ ಬಾವಿಯಿಂದ ಶುದ್ಧೀಕರಿಸಿದ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಇಲ್ಲಿಯೂ ನೀರಿನ ಕೊರತೆ ಇದೆ. ಟೆಂಡರ್‌ ಕರೆದು ಟ್ಯಾಂಕರ್‌ನಲ್ಲಿ ನೀರು ಪೂರೈಸಲು ಜಿಲ್ಲಾಧಿಕಾರಿಗಳ ನಿರ್ದೇಶವಿದ್ದರೂ 5,000 ರೂ. ಬಿಡ್‌ ಸಲ್ಲಿಸಿ ನೀರು ಪೂರೈಸಲು ಯಾರೂ ಮುಂದೆ ಬರುತ್ತಿಲ್ಲ.

ಕಡಿಮೆ ಸಾಮರ್ಥ್ಯದ ಟ್ಯಾಂಕ್‌
ಕುಂತಳ ನಗರದಲ್ಲಿ ರಚನೆಯಾದ ಓವರ್‌ ಹೆಡ್‌ ಟ್ಯಾಂಕ್‌ನ ನೀರು ಸಂಗ್ರಹ ಸಾಮರ್ಥ್ಯ 25 ಸಾವಿರ ಲೀಟರ್‌ ಇದ್ದು ಪೈಪ್‌ಲೈನ್‌ ಸಮಸ್ಯೆಯಿಂದ 15 ಮನೆಗಳಿಗೂ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಬಸವೇಶ್ವರ ಭಜನಾ ಮಂದಿರದ ಬಳಿಯ ಬೋರ್‌ವೆಲ್‌ನಿಂದ ಇಲ್ಲಿಗೆ ನೀರಿನ ಪೂರೈಕೆ ಆಗುತ್ತಿದೆ.

ಶುದ್ಧ ನೀರಿನ ಘಟಕ ಉಪಯೋಗಕ್ಕಿಲ್ಲ!
ಇನ್‌ಫೋಸಿಸ್‌ ಸ್ಥಾಪಿತ ಶುದ್ಧ ಕುಡಿಯುವ ನೀರಿನ ಘಟಕ ಪಡುಬೆಳ್ಳೆಯ ಧರ್ಮಶ್ರೀ ಕಾಲನಿಯ ಸಮುದಾಯ ಭವನದ ಬಳಿ ಇದ್ದು, ಇದನ್ನು ಸಾರ್ವಜನಿಕರು ಸರಿಯಾಗಿ ಉಪಯೋಗಿಸುತ್ತಿಲ್ಲ.

Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೇಕು
ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಿಸಿ ಪಾಪನಾಶಿನಿ ನದಿ ನೀರನ್ನು ಶುದ್ಧೀಕರಿಸಿ ಗ್ರಾಮಗಳಿಗೆ ನೀಡುವ ಯೋಜನೆ ಸಾಕಾರಗೊಂಡರೆ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಜತೆಗೆ ಬೋರ್‌ವೆಲ್‌, ವಿದ್ಯುತ್‌, ಪಂಪ್‌, ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ.

ಶಿರ್ವದಲ್ಲೂ ನೀರಿನ ಸಮಸ್ಯೆ
ಶಿರ್ವ ಗ್ರಾ.ಪಂ. ವ್ಯಾಪ್ತಿಯ ತೊಟ್ಲಗುರಿ, ತುಪ್ಪೆಪಾದೆ ಮತ್ತು ಮಟ್ಟಾರು ಪರಿಸರದಲ್ಲಿ ಸ್ವಲ್ಪಮಟ್ಟಿನ ಕುಡಿಯುವ ನೀರಿನ ಸಮಸ್ಯೆಯಿದೆ. ಮಸೀದಿ ಬಳಿ ಬೋರ್‌ವೆಲ್‌ಗೆ ವಿದ್ಯುತ್‌ ಪಂಪ್‌ ಜೋಡಿಸಿ ನೀರು ಪೂರೈಕೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಬಾರಿ ರಸ್ತೆ ವಿಸ್ತರಣೆ ವೇಳೆ ಪೈಪ್‌ಲೈನ್‌ ಒಡೆದು ನೀರಿನ ಸಮಸ್ಯೆ ಎದುರಾಗಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿ ವ್ಯವಸ್ಥೆ ಸುಧಾರಿಸಿದೆ. ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಇದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಗ್ರಾ. ಪಂ. ಸಜ್ಜಾಗಿದೆ.

ಟ್ಯಾಂಕರ್‌ ನೀರಿಗೆ ವ್ಯವಸ್ಥೆ
ನೀರಿನ ಸಮಸ್ಯೆಯಿರುವೆಡೆಗೆ ಕ್ರಿಯಾಯೋಜನೆಯಲ್ಲಿ ಅನುದಾನವಿರಿಸಿ ನೀರಿನ ಪೈಪ್‌ಲೈನ್‌ ವಿಸ್ತರಿಸಲಾಗಿದೆ.ಅಗತ್ಯ ಬಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಗ್ರಾ. ಪಂ. ನಿಂದ ವ್ಯವಸ್ಥೆ ಕಲ್ಪಿಸಲಾಗುವುದು.

– ಮಾಲತಿ, ಶಿರ್ವ ಗ್ರಾ.ಪಂ. ಪಿಡಿಒ 

– ಸತೀಶ್ಚಂದ್ರ ಶೆಟ್ಟಿ  ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next