ಶಿರ್ವ: ಆತ್ರಾಡಿ -ಶಿರ್ವ -ಬಜ್ಪೆ ರಾಜ್ಯ ಹೆದ್ದಾರಿಯಿಂದ ಶಿರ್ವ ಪದವು ಹಿಂದೂ ಪ.ಪೂ. ಕಾಲೇಜು, ಎಂಎಸ್‌ಆರ್‌ಎಸ್ ಕಾಲೇಜು, ಗಾಂಧೀನಗರ, ತೋಪನಂಗಡಿಯಾಗಿ ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಜಾರಂದಾಯ ದೈವಸ್ಥಾನ ಕ್ರಾಸ್ ಬಳಿ ಹದಗೆಟ್ಟು ದುರಸ್ತಿಯಾಗದೆ ಉಳಿದಿದ್ದು, ಸಂಚಾರ ದುಸ್ತರವಾಗಿದೆ.
ರಾಜ್ಯ ಹೆದ್ದಾರಿಯಿಂದ ವಿದ್ಯಾವರ್ಧಕ ಸಮೂಹ ಶಿಕ್ಷಣ ಸಂಸ್ಥೆಗಳ ಎದುರಿನಿಂದ ಹಾದು ಹೋಗುವ ರಸ್ತೆಯ ಪದವು ಬಬ್ಬುಸ್ವಾಮಿ ದೈವಸ್ಥಾನ ಕ್ರಾಸ್ ಮತ್ತು ಜಾರಂದಾಯ ದೈವಸ್ಥಾನ ಕ್ರಾಸ್ ಬಳಿ ಡಾಮರು ಕಿತ್ತುಹೋಗಿ ಹೊಂಡ ಗುಂಡಿಗಳು ನಿರ್ಮಾಣಗೊಂಡಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.
ರಸ್ತೆ ದುರವಸ್ಥೆಯ ಬಗ್ಗೆ ಈ ಹಿಂದೆ ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದಾಗಿ ಲೋಕೋ ಪಯೋಗಿ ಇಲಾಖೆ ವಿಶೇಷ ಅನು ದಾನ ಕಾದಿರಿಸಿ 25 ಲ. ರೂ. ವೆಚ್ಚದಲ್ಲಿ ತೋಪನಂಗಡಿ ಜಂಕ್ಷನ್‌ನಿಂದ ಪದವು ನೀರಿನ ಟ್ಯಾಂಕ್‌ನವರೆಗೆ ರಸ್ತೆ ಕಾಮಗಾರಿ ನಡೆದಿತ್ತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ 15 ಲ.ರೂ. ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಸುಮಾರು 260 ಮೀ.ಉದ್ದ ಮತ್ತು 4 ಮೀ. ಅಗಲದ ರಸ್ತೆಯನ್ನು ಹೆದ್ದಾರಿ ಮುಖ್ಯದ್ವಾರ ಮತ್ತು ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ಬಳಿ ಕಾಂಕ್ರೀಟ್ ಕಾಮ ಗಾರಿ ಮಾಡಲಾಗಿತ್ತು. ಅಲ್ಲದೆ 5 ಲ.ರೂ. ಶಾಸಕರ ಅನುದಾನದಿಂದ ಕಾಲೇಜು ಬಳಿಯ ರಸ್ತೆಯನ್ನು ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು,
ಪದವು ನೀರಿನ ಟ್ಯಾಂಕ್‌ನ ಬಳಿಯಿಂದ ಕಾಲೇಜು ಗೇಟ್‌ನವರೆಗಿನ ಸುಮಾರು 400 ಮೀ. ರಸ್ತೆಯ ಕಾಮಗಾರಿ ನಡೆಯದೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಯಾಗಿದೆ. ಪ್ರತಿದಿನ ನೂರಾರು ವಾಹನಗಳು, ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ರಸ್ತೆ ಕಾಮಗಾರಿಯ ಬಗ್ಗೆ ಗಮನ ಹರಿಸಬೇಕಿದೆ.
ವಿಶೇಷ ಅನುದಾನದಿಂದ ಒಂದು ಬಾರಿ ಅಭಿವೃದ್ಧಿ ಯೋಜನೆಯಡಿ ರೂ.25ಲಕ್ಷ ವೆಚ್ಚದಲ್ಲಿ ರಸ್ತೆ ಡಾಮರು ಕಾಮಗಾರಿ ನಡೆಸಲಾಗಿದೆ. ಜಿ.ಪಂ. ರಸ್ತೆಯಾದ್ದರಿಂದ ಉಳಿದ ರಸ್ತೆಯ ದುರಸ್ತಿ ಜಿ.ಪಂ. ಎಂಜಿನಿಯರಿಂಗ್ ಇಲಾಖೆ ನಡೆಸಬೇಕಿದೆ
.-ಜಗದೀಶ ಭಟ್, ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಡುಪಿ
ಪದವು ರಸ್ತೆ ದುರಸ್ತಿಗಾಗಿ 5 ಲ. ರೂ. ಅನುದಾನಬಿಡುಗಡೆಯಾಗಿದ್ದು, ದುರಸ್ತಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ಸುಭಾಷ್ ರೆಡ್ಡಿ, ಜಿ.ಪಂ. ಸಹಾಯಕ ಎಂಜಿನಿಯರ್, ಉಡುಪಿ
-ಸತೀಶ್ಚಂದ್ರ ಶೆಟ್ಟಿ ಶಿರ್ವ