Advertisement

ಶಿರ್ಲಾಲು ಗ್ರಾ.ಪಂ: ಅಭಿವೃದ್ಧಿಗೊಳ್ಳದ ಮುಂಡ್ಲಿ ಸಂಪರ್ಕ ರಸ್ತೆ

12:30 AM Mar 16, 2019 | Team Udayavani |

ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್‌ ರಸ್ತೆಯ ಡಾಮರು ಕಿತ್ತು ಹೋಗಿ ರಸ್ತೆ ಸಂಪೂರ್ಣ ಗುಂಡಿಗಳಿಂದ ಆವೃತಗೊಂಡಿದೆ. 
 
ಸುಮಾರು 25 ವರ್ಷಗಳದೆ ಈ ರಸ್ತೆಯು ಡಾಮರೀಕರಣಗೊಂಡಿದ್ದು ಅನಂತರ ಡಾಮರು ಹಾಕಿಲ್ಲ. 4 ವರ್ಷಗಳ ಹಿಂದೆ ತೇಪೆ ಕಾರ್ಯ ನಡೆಸಲಾಗಿತ್ತು. 
 
ಕಾರ್ಕಳದಿಂದ ಮುಂಡ್ಲಿಯ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ರಸ್ತೆಯುದ್ದಕ್ಕೂ ಹೊಂಡಗುಂಡಿ ಗಳು ನಿರ್ಮಾಣವಾಗಿರುವುದರಿಂದ ಸಂಚಾರ ನಡೆಸುವುದು ದುಸ್ತರವಾಗಿದೆ. 

Advertisement

4 ಕಿ.ಮೀ. ಉದ್ದದ ರಸ್ತೆ
ಕಾರ್ಕಳದಿಂದ ದುರ್ಗಾ ಪಂಚಾಯತ್‌ ವ್ಯಾಪ್ತಿಯ ತೆಳ್ಳಾರು ವರೆಗೆ ರಸ್ತೆ ಅಭಿವೃದ್ಧಿಗೊಂಡಿದೆ ಆದರೆ ಸುಮಾರು 4 ಕಿ.ಮೀ. ಉದ್ದದ ಮುಂಡ್ಲಿವರೆಗಿನ ಈ ರಸ್ತೆ ಅಭಿವೃದ್ಧಿಯಾಗದೇ ಇರುವುದರಿಂದ ಸಂಚಾರಕ್ಕೆ ಸಂಕಷ್ಟ ಪಡಬೇಕಾಗಿದೆ.  

ಶಿರ್ಲಾಲು ಪಂಚಾಯತ್‌ ವ್ಯಾಪ್ತಿಯ ಮುಡಾಗುಡ್ಡೆ, ಮುಂಡ್ಲಿ ಭಾಗದ ಜನತೆ ತಮ್ಮ ನಿತ್ಯ ವ್ಯವಹಾರಕ್ಕಾಗಿ ಕಾರ್ಕಳ ಪೇಟೆಗೆ ತೆರಳಬೇಕಾಗಿದ್ದು ಸಂಚಾರಕ್ಕೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ನಿತ್ಯ ವಿದ್ಯಾರ್ಥಿಗಳು ಹಾಗೂ ನಿತ್ಯ ಕೆಲಸಕ್ಕೆ ತೆರಳುವವರಿಗೆ ಸಮಸ್ಯೆಯಾಗಿದೆ. 

ಮನವಿ ನೀಡಿದರೂ ಪ್ರಯೋಜನವಿಲ್ಲ
ರಸ್ತೆ ಡಾಮರೀಕರಣಗೊಳಿಸಿ ಅಭಿವೃದ್ಧಿಪಡಿಸುವಂತೆ ನಿರಂತರ ಮನ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.  ಪ್ರತಿ ಗ್ರಾಮಸಭೆಯಲ್ಲಿ ಈ ರಸ್ತೆ ಅಭಿವೃದ್ಧಿಯ ಬಗ್ಗೆ ನಿರ್ಣಯ ಕೈಗೊಂಡರೂ ಪಂಚಾಯತ್‌ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂಬುದು ಸ್ಥಳೀಯರ ಬೇಸರದ ನುಡಿ. ಸ್ಥಳೀಯ ಕೆಲ ಸಂಘ ಸಂಸ್ಥೆಗಳು ಪ್ರತಿ ವರ್ಷ ಹೊಂಡಗಳಿಗೆ ಮಣ್ಣು ತುಂಬಿಸುವ ಕೆಲಸವನ್ನು ಮಾಡುತ್ತದೆಯಾದರೂ ಕೆಲವೇ ದಿನಗಳಲ್ಲಿ ಈ ಮಣ್ಣು ಹೋಗಿ ಮತ್ತೆ ಹೊಂಡ ನಿರ್ಮಾಣವಾಗುತ್ತಿದೆ.
  
ಸೇತುವೆ ಬಳಿ ಕುಸಿಯುತ್ತಿರುವ ರಸ್ತೆ 
ಮುಂಡ್ಲಿ ಸೇತುವೆ ಹಾಗೂ ಪವರ್‌ ಪ್ರಾಜೆಕ್ಟ್ ಬಳಿಯಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ರಸ್ತೆ ಕುಸಿಯುತ್ತಿದೆ. ಈ ಕುಸಿತವನ್ನು ತಾತ್ಕಾಲಿಕವಾಗಿ ತಡೆಯಲಾಗುತ್ತದೆಯೇ ಶಾಶ್ವತ ಕಾಮಗಾರಿ ನಡೆಸಿ ರಸ್ತೆ ಕುಸಿತ ತಡೆಯುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. 

ಬಸ್‌ ಸಂಚಾರದಲ್ಲಿ ವ್ಯತ್ಯಯ
ಮುಂಡ್ಲಿಗೆ  ನಿತ್ಯ ಸುಮಾರು 10 ಬಸ್‌ಗಳು 20 ಬಾರಿ ಸಂಚಾರ ನಡೆಸುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ 3ರಿಂದ4 ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಮಾರ್ಗ ಹದಗೆಟ್ಟಿರುವುದರಿಂದ ಇನ್ನಷ್ಟು ಬಸ್‌ಗಳು ಸಂಚಾರ ಸ್ಥಗಿತಗೊಳಿಸುವ ಇರಾದೆಯಲ್ಲಿವೆ.
  
ಚುನಾವಣೆ ಬಹಿಷ್ಕಾರದ ಚಿಂತನೆ 
ದಶಕಗಳಿಂದ ರಸ್ತೆ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರೂ ರಸ್ತೆ ಅಭಿವೃದ್ಧಿ ಕಾಣದೆ ಮನನೊಂದ ಸ್ಥಳೀಯರು ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರದ ಚಿಂತನೆಯಲ್ಲಿದ್ದಾರೆ.  

Advertisement

ದಶಕ ಕಳೆದರೂ ಅಭಿವೃದ್ಧಿಗೊಂಡಿಲ್ಲ
ಅತಿ ಅಗತ್ಯವಾಗಿರುವ ಮುಂಡ್ಲಿ ಸಂಪರ್ಕ ರಸ್ತೆ ಸಂಪೂರ್ಣ ಹದೆಗೆಟ್ಟು ದಶಕಗಳೇ ಕಳೆದಿದ್ದರೂ ಅಭಿವೃದ್ಧಿಗೊಂಡಿಲ್ಲ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ನಿಷ್ಪ್ರಯೋಜಕವಾಗಿದೆ.  
ಪ್ರಜ್ವಲ್‌ ಜೈನ್‌ ಮುಂಡ್ಲಿ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next