Advertisement

ಇಲ್ಲಿ ಪ್ರತೀ ಮಳೆಗಾಲದಲ್ಲೂ ಜಾಗರಣೆ!

06:00 AM May 25, 2018 | Team Udayavani |

ಉಡುಪಿ: ಶಿರಿಬೀಡು ಇಷ್ಟಸಿದ್ಧಿ ವಿನಾಯಕ ರಸ್ತೆಯ ಕೆ.ಚಂದ್ರಕಾಂತ ಪ್ರಭು ಅವರಿಗೆ ಪ್ರತಿವರ್ಷ ಮಳೆಗಾಲವಿಡೀ ರಾತ್ರಿ ಜಾಗರಣೆ. ಕಾರಣ ಇಲ್ಲಿ ಸಣ್ಣ ಮಳೆ ಬಂದರೂ ಚರಂಡಿಯ ನೀರು ಮನೆಯೊಳಗೆ ಪ್ರವೇಶಿಸುತ್ತದೆ. ಈ ಬಾರಿಯೂ ಇದು ಪುನರಾವರ್ತನೆಯಾಗಿದೆ.  

Advertisement

ನೀರು ಹರಿಯಲು ಅಡ್ಡಿ
ಆದಿ ಉಡುಪಿ-ಮಣಿಪಾಲ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಶಿರಿಬೀಡು ವಾರ್ಡ್‌ನಲ್ಲಿ 40ಕ್ಕೂ ಅಧಿಕ ಮನೆಗಳಿಗೆ ನೆರೆ ಹಾವಳಿ ವರ್ಷವೂ ಇದೆ. ಇಲ್ಲಿ ದೊಡ್ಡ ತೋಡೊಂದಿದ್ದು, ಅದರಲ್ಲಿ ಹೂಳು, ಮಣ್ಣು, ಕಲ್ಲು, ಮರದ ಗೆಲ್ಲು, ಸೋಗೆ ಮೊದಲಾದವು ಸೇರಿಕೊಂಡು ನೀರು ಹರಿಯಲು ಅಡ್ಡಿಯಾಗಿದೆ. ಇದರೊಂದಿಗೆ ನೀರು ಹರಿಯುವ ಸ್ಥಳಕ್ಕೆ ಅಡ್ಡಲಾಗಿರುವ ವಿವಿಧ ಕೇಬಲ್‌ಗ‌ಳು, ಪೈಪ್‌ಗ್ಳು ಕಸ, ಗೆಲ್ಲುಗಳನ್ನು ಹಿಡಿದಿಟ್ಟು ನೀರು ಪ್ರವಹಿಸದಂತೆ ಮಾಡುತ್ತದೆ. ಪರಿಣಾಮ ಸಣ್ಣ ಮಳೆ ಬಂದರೂ ಸಮಸ್ಯೆ ಸೃಷ್ಟಿಯಾಗುತ್ತದೆ. “ಈ ಹಿಂದೊಮ್ಮೆ ಸ್ವಲ್ಪ ಹೂಳು ತೆಗೆದಿದ್ದರು. ಈ ಬಾರಿಯಂತೂ ನಗರಸಭೆಯವರು ಗಮನವನ್ನೇ ಹರಿಸಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಜಿ.ಸಿ.ಪೈ, ಗಣೇಶ್‌ ಶೇಟ್‌, ಚಂದ್ರಶೇಖರ್‌, ರಂಗರಾಜ್‌ ಮೊದಲಾದವರು.


ಕೊಳಚೆ ನೀರೂ ತೋಡಿಗೆ
ಉಡುಪಿಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಹಿಂಭಾಗದಿಂದ ಆರಂಭವಾಗುವ ಈ ತೋಡಿನಲ್ಲಿ ಕೆಲವು ಆಸ್ಪತ್ರೆ, ವಸತಿಗೃಹಗಳ ಕೊಳಚೆ ಕೂಡ ಸೇರಿಕೊಳ್ಳುತ್ತದೆ. ತೋಡಿನಲ್ಲಿ ನೀರು ಸರಾಗವಾಗಿ ಹರಿಯದೆ ಅದು ಬಾವಿಗಳಿಗೂ ಸೇರುತ್ತದೆ. ಪರಿಣಾಮವಾಗಿ ಅನೇಕ ಒಳ್ಳೆಯ ಬಾವಿಗಳು ಕೂಡ ಹಾಳಾಗಿವೆ ಎನ್ನುತ್ತಿದ್ದಾರೆ ಸ್ಥಳೀಯರು. ಮೊನ್ನೆ ಸುರಿದ ಸಾಧಾರಣ ಮಳೆಗೆ ತೋಡಿನಲ್ಲಿದ್ದ ಕಸದ ರಾಶಿ ಇಲ್ಲಿನ ಮನೆಯಂಗಳಕ್ಕೆ ಬಂದು ಸೇರಿದೆ. ನಾಗರ ಹಾವು ಕೂಡ ಚಂದ್ರಕಾಂತ ಅವರ ಮನೆಗೆ ಬಂದಿದೆ! 

ಮಳೆಗಾಲದಲ್ಲಿ ಈ ದಾರಿಯಲ್ಲಿ ಬರುವುದಿಲ್ಲ 
ತೋಡಿಗೆ ಅಡ್ಡಲಾಗಿರುವ ಕಾಲುಸಂಕವೊಂದು ಉಡುಪಿ ಬಸ್‌ ನಿಲ್ದಾಣ, ಬನ್ನಂಜೆ ಮತ್ತು ಪಕ್ಕದ ಅನೇಕ ಪ್ರದೇಶಗಳಿಗೆ ಒಳದಾರಿಯಾಗಿದೆ. ಇದನ್ನು ನಿತ್ಯ ಶಾಲಾ ಮಕ್ಕಳು ಕೂಡ ಬಳಸುತ್ತಾರೆ. ಆದರೆ ಮಳೆಗಾಲ ಆರಂಭವಾದ ಕೂಡಲೇ ಇಲ್ಲಿ ತೋಡು ಬ್ಲಾಕ್‌ ಅಕ್ಕಪಕ್ಕದ ರಸ್ತೆಗಳು ಕೂಡ ಮುಳುಗಿ ಹೋಗುವುದರಿಂದ ಈ ದಾರಿಯನ್ನು ಬಳಸುವುದಿಲ್ಲ. “ಮಳೆಗಾಲದಲ್ಲಿ ಇಲ್ಲಿ ನಡೆದಾಡಲು ಸಾಧ್ಯವಿಲ್ಲ. ಹಾಗಾಗಿ ನಾನು ಬಸ್‌ನಲ್ಲಿಯೇ ತೆರಳುತ್ತೇನೆ’ ಎನ್ನುತ್ತಾರೆ ಬನ್ನಂಜೆ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿ ಚೈತ್ರಾ.


ಮಳೆನೀರು ಬಾರದಂತೆ ಹಲಗೆ !
ಮಳೆನೀರು ನಮ್ಮ ಮನೆಯೊಳಗೆ ಪ್ರತೀವರ್ಷ ಬರುತ್ತದೆ. ನಮ್ಮ ಪಕ್ಕದ ಜಿ.ಟಿ.ಪೂಜಾರಿ ಅವರ ಮನೆ ಸೇರಿದಂತೆ ಪರಿಸರದ ಅನೇಕ ಮನೆಗಳಿಗೆ ನೀರು ನುಗ್ಗುತ್ತದೆ.  ಅಂಗಳ ತುಂಬಿ ಮೆಟ್ಟಿಲುಗಳು ಮುಳುಗಿ ಮನೆಯೊಳಗೆ ಬಂದು 6 ಇಂಚಿನಷ್ಟು ನೀರು ಸಂಗ್ರಹವಾಗುತ್ತದೆ. ನಮ್ಮ ಮನೆಯಲ್ಲಿ ಸಣ್ಣ ಮಗು ಕೂಡ ಇದೆ. ಅದು ಕೆಳಗೆ ಮಲಗಿರುತ್ತದೆ. ಹಾಗಾಗಿ ನಾನು ಮಳೆ ಬರುವ ಸೂಚನೆ ದೊರೆತ ಕೂಡಲೇ ಎಚ್ಚರವಾಗಿರುತ್ತೇನೆ. ಈ ಬಾರಿ ಮನೆಯ ಬಾಗಿಲಿಗೆ ಮರದ ಹಲಗೆಯೊಂದನ್ನು ಸಿದ್ಧಮಾಡಿಸಿಕೊಂಡು ಇಟ್ಟಿದ್ದೇನೆ. ಅದರ ಮೂಲಕವಾದರೂ ಮಳೆನೀರನ್ನು ತಡೆಯುವ ಪ್ರಯತ್ನ ನನ್ನದು.
– ಕೆ.ಚಂದ್ರಕಾಂತ ಪ್ರಭು,
ಶಿರಿಬೀಡು ನಿವಾಸಿ  

ಹಿಟಾಚಿಯಿಂದಲೇ ಹೂಳು ತೆಗೆಯಬೇಕು
ಕಳೆದ ವರ್ಷ ಮಾನವ ಶ್ರಮದಿಂದ ಸ್ವಲ್ಪ ಹೂಳೆತ್ತಲಾಗಿದೆ. ಆದರೆ ಅದು ಅಷ್ಟು ಪ್ರಯೋಜನವಾಗಿಲ್ಲ. ಈ ಬಾರಿ ಹಿಟಾಚಿಯಿಂದಲೇ ಹೂಳೆತ್ತಲು ನಗರಸಭೆಗೆ ತಿಳಿಸಿದ್ದೇನೆ. ಸೋಗೆ ಮತ್ತು ಕಸಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಬನ್ನಂಜೆ ರಸ್ತೆಯಲ್ಲಿರುವ ಸೇತುವೆ ತಳಪಾಯ ಎತ್ತರವಾಗಿರುವುದರಿಂದಲೂ ತೋಡಿನ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿದೆ. 
– ಡಾ| ಎಂ.ಆರ್‌.ಪೈ
ಸದಸ್ಯರು, ಶಿರಿಬೀಡು ವಾರ್ಡ್‌

– ಸಂತೋಷ್‌ ಬೊಳ್ಳೆಟ್ಟು 

Advertisement
Advertisement

Udayavani is now on Telegram. Click here to join our channel and stay updated with the latest news.

Next