ಶಿರಡಿ: ಸಾಯಿಬಾಬಾ ಜನ್ಮಸ್ಥಾನದ ಕುರಿತಾದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಪ್ರತಿಭಟನೆಗೆ ಸಜ್ಜಾಗಿದೆ. ರವಿವಾರದಿಂದ ಅನಿರ್ದಿಷ್ಟಾವಧಿಯವರೆಗೆ ಶಿರಡಿ ಸಾಯಿಬಾಬಾ ಮಂದಿರ ಬಂದ್ ಆಗಿರಲಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಾಯಿಬಾಬಾ ಹುಟ್ಟಿದ ಸ್ಥಳ ಪರ್ಭಾನಿಯ ಪತ್ರಿ ಎಂದಿದ್ದರು. ಈ ಹೇಳಿಕೆಯು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆ ವಿರುದ್ಧ ಸಿಡಿದೆದ್ದಿರುವ ಸಾಯಿಬಾಬಾ ದೇವಾಲಯ ಆಡಳಿತ ಮಂಡಳಿ ರವಿವಾರದಿಂದ ದೇವಾಲಯವನ್ನು ಮುಚ್ಚಲು ನಿರ್ಧರಿಸಿದೆ. ಹೀಗಾಗಿ ಜನವರಿ 19ರಿಂದ ಶಿರಡಿಯಲ್ಲಿ ಭಕ್ತರಿಗೆ ಸಾಯಿಬಾಬಾ ದರ್ಶನವಾಗುವುದಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಬಾವು ಸಾಹೇಬ್ ವಕ್ಟಾರೆ, ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ಇದರ ವಿರುದ್ಧ ನಾವು ಪ್ರತಿಭಟಿಸುತ್ತೇವೆ. ರವಿವಾರದಿಂದ ಶಿರಡಿ ದೇಗುಲ ಬಂದ್ ಮಾಡುತ್ತಿದ್ದೇವೆ. ಈ ಬಗ್ಗೆ ಚರ್ಚೆ ನಡೆಸಲು ಸ್ಥಳೀಯರೊಂದಿಗೆ ಶನಿವಾರ ಸಭೆ ಸೇರಲಿದ್ದೇವೆ ಎಂದಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪರ್ಭಾನಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಮಾತನಾಡುತ್ತಾ, ಪರ್ಭಾನಿಯ ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿದೆ. ಹಾಗಾಗಿ ಅದನ್ನು ಅಭಿವೃದ್ಧಿಪಡಿಸಿ, ಧಾರ್ಮಿಕವಾಗಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಬಗ್ಗೆ ಹೇಳಿದ್ದರು. ಆದರೆ ಇದರಿಂದ ಅಸಮಧಾನಗೊಂಡಿರುವ ಶಿರಡಿ ದೇವಾಲಯ ಮಂಡಳಿ, ಒಂದು ವೇಳೆ ಪತ್ರಿ ಅಭಿವೃದ್ದಿ ಹೊಂದಿದರೆ ಶಿರಡಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ ಎಂದು ಪ್ರತಿಭಟಿಸುತ್ತಿದೆ.