Advertisement

ಶಿರಾ ಭೀಕರ ಅಪಘಾತ; ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ :ಸಿಎಂ

06:50 PM Aug 25, 2022 | Team Udayavani |

ಬೆಂಗಳೂರು: ಶಿರಾ ತಾಲೂಕು ಕಳ್ಳಂಬೆಳ್ಳ ಬಳಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ತುಮಕೂರು ಬಳಿ 9 ಕೂಲಿ ಕಾರ್ಮಿಕರು ತೀವ್ರವಾದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಇದು ಬಹಳ ದುರ್ದೈವದ ಸಂಗತಿ. ದುಡಿಮೆ ಮಾಡಲು ಬಂದವರ ಬದುಕೇ ಇಲ್ಲದಂತಾಗಿರುವುದು ದಿಗ್ಭ್ರಮೆ ಹುಟ್ಟಿಸಿದೆ. ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮೃತಪಟ್ಟವರಿಗೆ ಪ್ರಧಾನಮಂತ್ರಿಯವರು ಟ್ವೀಟ್ ಮೂಲಕ ಸಂತಾಪ ಸೂಚಿಸಿ, ಮೃತಪಟ್ಟವರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡಿದ್ದಾರೆ. ಇದಕ್ಕಾಗಿ ಪ್ರಧಾನ ಮಂತ್ರಿಯವರನ್ನು ಅಭಿನಂದಿಸುತ್ತೇನೆ. ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಕ್ರೂಸರ್ ಗೆ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ 9 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ರಾಯಚೂರು ಮತ್ತು ಮಾನ್ವಿ ಮೂಲದ ಜನರು ಕೂಲಿ ಅರಸಿ ಕ್ರೂಜರ್ ವಾಹನದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಲಾರಿ ಢಿಕ್ಕಿ ಹೊಡೆದು ಅವಘಡ ಸಂಭವಿಸಿತ್ತು.ತೀವ್ರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.ಮೃತರಲ್ಲಿ ನಾಲ್ವರು ಪುರುಷರು,ಒಂದು ಮಗು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next