Advertisement

Shirahatti: ಮಾಗಡಿ ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ

05:58 PM Nov 28, 2023 | Team Udayavani |

ಶಿರಹಟ್ಟಿ: ಮಾಗಡಿ ಗ್ರಾಮದ ಕೆರೆಗೆ ಚಳಿಗಾಲಕ್ಕೆ ವಿವಿಧ ಪ್ರದೇಶಗಳಿಂದ ಸಹಸ್ರಾರು ಹಕ್ಕಿಗಳು ವಲಸೆ ಬರುತ್ತಿದ್ದು, ಈ ವರ್ಷವೂ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ವಿದೇಶಿ ಹಕ್ಕಿಗಳ ಕಲರವ ಆರಂಭವಾಗಿದೆ.

Advertisement

ಜಿಲ್ಲೆಯಿಂದ ಹಾವೇರಿಗೆ ಹೋಗುವ ಮಾರ್ಗದಲ್ಲಿ 8 ಕಿಮೀ, ಲಕ್ಷ್ಮೇಶ್ವರದಿಂದ 11 ಕಿಮೀ, ಶಿರಹಟ್ಟಿ ಯಿಂದ 5 ಕಿಲೋಮೀಟರ್‌ ಪ್ರಯಾಣಿಸಿದರೆ ಮಾಗಡಿಕೆರೆ ಸಿಗುತ್ತದೆ. ಈ ಕೆರೆ ಒಟ್ಟು ವಿಸ್ತೀರ್ಣ 134.15 ಎಕರೆಯಷ್ಟು ವಿಶಾಲವಾಗಿದ್ದು, ಮಾಗಡಿ-ಹೊಳಲಾಪೂರ ಗ್ರಾಮಗಳಲ್ಲಿ ಮೈಚಾಚಿಕೊಂಡಿದ್ದು ಈ ಕೆರೆಯ ಜಲಾಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ.

ದೂರದ ಜಮ್ಮು-ಕಾಶ್ಮೀರ್‌, ಲಡಾಕ್‌, ಮಲೇಶಿಯಾ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಹಿಮಾಚಲ ಸರೋವರದಲ್ಲಿ ಅಕ್ಟೋಬರ್‌ದಿಂದ ಮಾರ್ಚ್ ವರೆಗೆ ಹೆಚ್ಚು ಚಳಿ ಇರುತ್ತದೆ. ಹೀಗಾಗಿ ಅಲ್ಲಿ ಕೆಲ‌ ಸರೋವರಗಳಲ್ಲಿ ನೀರು ಹೆಪ್ಪುಗಟ್ಟುತ್ತದೆ. ಈ ಚಳಿಗಾಲ ಕಳೆಯುವುದಕ್ಕೆ ಅಲ್ಲಿಯ ಪಕ್ಷಿಗಳು ದಕ್ಷಿಣ ಭಾರತದತ್ತ ಕೆಲ ಕಡೆ ವಲಸೆ ಬರುತ್ತವೆ. ಮಾಗಡಿ ಕೆರೆಗೆ ಈ ಬಾನಾಡಿಗಳು ಆರು ತಿಂಗಳು ನೆಲೆಯೂರಿ ನಂತರ ಪುನಃ ತಮ್ಮ ತವರಿಗೆ ತೆರಳುತ್ತವೆ.

ಈ ಪಕ್ಷಿಗಳು ಪ್ರತಿವರ್ಷ ಒಂದೇ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುತ್ತವೆ. ಈ ಸಂದರ್ಭದಲ್ಲಿ ಕೆಲ ಜಾತಿಯ ಪಕ್ಷಿಗಳು ಸಂತಾನೋತ್ಪತ್ತಿ ಮಾಡಿಕೊಂಡು ಮಾರ್ಚ್‌ ಕೊನೆ ವಾರ ತಮ್ಮ ದೇಶಗಳಿಗೆ ಪ್ರಯಾಣ ಬೆಳೆಸುತ್ತವೆ. ನಮ್ಮ ದೇಶದ ಬಾತುಗೋಳಿಗಿಂತ ಚಿಕ್ಕಗಾತ್ರ ದಲ್ಲಿರುವ ಹಂಸ ಜಾತಿಗೆ ಸೇರುವ ಈ ಪಕ್ಷಿಗಳ ಒಡನಾಟದಿಂದ ಮಾಗಡಿ ಕೆರೆ ಕಂಗೊಳಿಸುತ್ತದೆ.
ಈಗಾಗಲೇ ಸಾವಿರಾರು ಪಕ್ಷಿಗಳು ಕೆರೆಗೆ ಅತಿಥಿಗಳಾಗಿ ಆಗಮಿಸಿವೆ.

ಅಕ್ಟೋಬರ್‌ ತಿಂಗಳ ಅಂತಕ್ಕೆ ಸುಮಾರು 100ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಲಸೆ ಬರುತ್ತಿದ್ದು, ಅವುಗಳಲ್ಲಿ ಪ್ರಮುಖ 16 ಪ್ರಭೇದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿವೆ. ಆ ಪೈಕಿ ಗೀರು ಬಾತುಕೋಳಿಗಳು ಪಕ್ಷಿಗಳ ಸಂಖ್ಯೆ ಅ ಧಿಕವಾಗಿದ್ದು, ನಂತರ ಸ್ಥಾನದಲ್ಲಿ ಬ್ರಾಹ್ಮಿನಿ ಡಕ್‌, ಬ್ಲಾಕ್‌ ಐಬಿಎಸ್‌, ಪೈಂಟೆಡ್‌ ಸ್ಟಾರ್ಕ್‌ ಹಾಗೂ ನ್ಪೋನ್‌ ವಿಲ್‌ ಜಾತಿ ಹಕ್ಕಿಗಳು ಈ ಕೆರೆಯನ್ನು ಆಶ್ರಯಿಸುತ್ತವೆ.

Advertisement

ನಾರ್ದನ್‌ ಸಿಲ್ವರ್‌, ಲಿಟಲ್‌ ಕಾರ್ಪೋರಲ್ಸ್‌, ಅಟಲರಿಂಗ್‌ ಫ್ಲೋವರ್‌, ಲೋಮನ್‌ ಡೆಲ್‌, ವುಡ್‌ ಸ್ಟಾಂಡ್‌, ಪೈಪರ್‌, ಗ್ರೀವನ್‌ ಟೆಲ್‌, ಬ್ಲಾಕ್‌ ಡ್ರಾಂಗೋ ರೆಡ್ಡಿ ಪ್ರಿಫೆಟ್‌ ಅನೇಕ ಜಾತಿಯ ಪಕ್ಷಿಗಳು ಕೆರೆಗೆ ವಲಸೆ ಬಂದಿರುವುದು ಕಾಣಿಸುತ್ತದೆ.

ಪ್ರತಿದಿನ ಬೆಳಗಿನ ವೇಳೆ ಆಹಾರ ಅರಸುತ್ತ ಸುತ್ತಮುತ್ತಲಿನ ಪ್ರದೇಶಗಳತ್ತ ಸಂಚರಿಸುತ್ತವೆ. ನಂತರ ಸಂಜೆ 6 ರಿಂದ 7 ಗಂಟೆ ಸಮಯ ಹೊಲದಲ್ಲಿ ಶೇಂಗಾ, ಕಡಲೆ, ಮಡಿಕೆ, ಹೆಸರು ಮತ್ತು ವಿವಿಧ ಕ್ರಿಮಿಕೀಟಗಳನ್ನು ತಿನ್ನುತ್ತವೆ. ಕೆಲ ಜಾತಿಯ ಪಕ್ಷಿಗಳು ರಾತ್ರಿ ಕೆರೆಯಲ್ಲಿ ವಿಹರಿಸುತ್ತ ಚಿಕ್ಕ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುತ್ತವೆ.

ಬಂಗಾರ ವರ್ಣದ ಬ್ರಾಹ್ಮಿಣಿ ಡಕ್‌, ಬೂದು, ಕೆಂಪು, ನೇರಳೆ, ಕಪ್ಪು ಬಣ್ಣದ ಕುತ್ತಿಗೆ ಕೊಕ್ಕರೆಗಳು ಹೊಟ್ಟೆ ಭಾಗದಲ್ಲಿ ಕೇಸರಿ ಬಣ್ಣದ ಉದ್ದ ಕಾಲುಗಳನ್ನು ಹೊಂದಿರುವ ಈ ಬಾನಾಡಿಗಳು ನೀರಿನಲ್ಲಿ ಗಂಭೀರವಾಗಿ ಚಲಿಸುತ್ತಿರುತ್ತವೆ. ಪಕ್ಷಿಗಳು ಹೆಚ್ಚಾಗಿರುವ ಸ್ಥಳದಲ್ಲಿ ಅರಣ್ಯ ಇಲಾಖೆ ವೀಕ್ಷಣಾ ಗೋಪುರ ನಿರ್ಮಿಸಿದ್ದು, ಪಕ್ಷಿಗಳ ಮಾಹಿತಿ ಫಲಕ ಹಾಕಲಾಗಿದೆ. ವಿಶ್ರಾಂತಿ ತಾಣ ನಿರ್ಮಿಸಲಾಗಿದೆ. ಇದರಿಂದ ಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಿದೆ. ಈ ಪಕ್ಷಿ ಜಾತ್ರೆಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕುಟುಂಬಗಳಿಗೆ ಪಿಕ್‌ನಿಕ್‌ ಪಾಯಿಂಟ್‌ ಇದಾಗಿದೆ.

ಪ್ರತಿವರ್ಷ ಶಿರಹಟ್ಟಿ ತಾಲೂಕಿನಲ್ಲಿ ಬರುವ 25 ಸರ್ಕಾರಿ ಶಾಲಾ ಮಕ್ಕಳಿಗೆ ಅರಣ್ಯ ಇಲಾಖೆಯಿಂದ ಮಾಗಡಿ ಕೆರೆಗೆ
ಕರೆದುಕೊಂಡ ಬರುತ್ತೇವೆ ಈ ಬಾರಿ ತಾಲೂಕಿನ 25 ಶಾಲೆಗಳನ್ನು ಆಯ್ಕೆ ಮಾಡಿದ್ದೇವೆ.
ರಾಮಪ್ಪ ಪೂಜಾರಿ,
ವಲಯ ಅರಣ್ಯ ಅಧಿಕಾರಿ ಶಿರಹಟ್ಟಿ (ಆರ್‌ಎಫ್‌ಒ )

ನಾನು 5 ವರ್ಷದಿಂದ ಈ ಮಾಗಡಿ ಕೆರೆ ಬರುತ್ತಿದ್ದೇನೆ. ಇಲ್ಲಿ ಬರುವ ಕೆಲವು ವಿಶೇಷ ಪಕ್ಷಿಗಳು ಅಧ್ಯಯನ ಮಾಡಿದ್ದೇನೆ. ವಿದೇಶಿ ಹಕ್ಕಿಗಳು ದಿನಚರಿ ತುಂಬಾ ವೈವಿಧ್ಯತೆಯಿಂದ ಕೂಡಿವೆ.
ಮಂಜುನಾಥ ರಾವಳ,
ವೈಡ್‌ ಲೈಪ್‌ ಪೋಟೋಗ್ರಾಫರ್‌

*ಉದಯಕುಮಾರ ಹಣಗಿ

Advertisement

Udayavani is now on Telegram. Click here to join our channel and stay updated with the latest news.

Next