Advertisement
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆ ವರೆಗಿನ 23.57 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಎಲ್ಲ ರೀತಿಯ ಪ್ರಾರಂಭಿಕ ಹಂತದ ತಯಾರಿ ಪೂರ್ಣಗೊಂಡಿದೆ. ಜನವರಿಯಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ.
ಸುರಂಗ ಮಾರ್ಗ ಯೋಜನೆಯ ಬಹುತೇಕ ಪ್ರದೇಶ ಸರಕಾರಿ ಭೂಮಿಯಾಗಿದೆ. ಖಾಸಗಿಯಾಗಿ ಶೇ. 30ರಷ್ಟು ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಿರುವುದರಿಂದ ಅಧಿಸೂಚನೆಯ ಬಳಿಕ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳಲಿದೆ. ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಭಾರತ್ ಮಾಲಾದಡಿ ಕಾಮಗಾರಿ
ಬೆಂಗಳೂರು-ಮಂಗಳೂರು ನಡುವೆ ರಸ್ತೆ ಸಂಚಾರದಲ್ಲಿ ಒಂದು ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗಿರುವ ಈ ಸುರಂಗ ಮಾರ್ಗವು ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಳಿ ಮೂಲಕ ಸಾಗುತ್ತದೆ. ಇದರಲ್ಲಿ 6 ಸುರಂಗಗಳು ಮತ್ತು 10 ಸೇತುವೆಗಳು ನಿರ್ಮಾಣವಾಗಲಿದೆ. 7 ವರ್ಷಗಳ ಹಿಂದೆ ಇದರ ಯೋಜನಾ ವೆಚ್ಚ 10,015 ಕೋ.ರೂ. ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಸುಮಾರು 12,000 ಕೋ.ರೂ. ಆಗಬಹುದು ಎನ್ನಲಾಗುತ್ತಿದೆ. ಜಪಾನ್ ಇಂಟರ್‌ನ್ಯಾಶನಲ್ ಕೋ-ಆಪರೇಟಿವ್ ಏಜೆನ್ಸಿ (ಜೈಕಾ) ಇದರ ಡಿಪಿಆರ್ ಸಿದ್ಧಪಡಿಸಿತ್ತು. ಯೋಜನೆಯನ್ನು ಈ ಹಿಂದೆ ಜೈಕಾ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಹೆದ್ದಾರಿ ಇಲಾಖೆ ನಿರ್ಧರಿಸಿತ್ತು. ಇದೀಗ ಆ ಪ್ರಸ್ತಾವನೆಯನ್ನು ಕೈಬಿಟ್ಟು ಭಾರತ ಸರಕಾರ “ಭಾರತ್ ಮಾಲಾ’ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
Related Articles
ಮಂಗಳೂರಿನಲ್ಲಿ ಸುಸಜ್ಜಿತವಾದ ಸರ್ವಋತು ಬಂದರು ಇದ್ದರೂ ಶಿರಾಡಿ ಘಾಟಿಯಲ್ಲಿ ಸಂಚಾರ ಸಮಸ್ಯೆಯಿಂದಾಗಿ ಬೆಂಗಳೂರಿನ ಬಹುತೇಕ ಉದ್ಯಮಗಳು ತಮ್ಮ ವ್ಯವಹಾರ ಚಟುವಟಿಕೆಗಳಿಗಾಗಿ ಚೆನ್ನೈ ಬಂದರನ್ನು ಆಶ್ರಯಿಸುತ್ತಿವೆ. ಚೆನ್ನೈ ಬಂದರನ್ನು ಒಡಿಶಾ ಕೂಡ ಅವಲಂಬಿಸಿರುವುದರಿಂದ ಅಲ್ಲಿ ಹೆಚ್ಚಿನ ಒತ್ತಡವಿದೆ. ಆದುದರಿಂದ ಮಂಗಳೂರು- ಬೆಂಗಳೂರು ಮಧ್ಯೆ ಸುಗಮ ಸಂಚಾರದ ವ್ಯವಸ್ಥೆ ನಿಟ್ಟಿನಲ್ಲಿ ಉದ್ದೇಶಿತ ಸುರಂಗಮಾರ್ಗ ಯೋಜನೆಯನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಗೊಳ್ಳಬೇಕು ಎಂಬ ಒತ್ತಡ ಕೈಗಾರಿಕಾ ವಲಯದಿಂದ ಇದೆ. ಇದಲ್ಲದೆ ಭಾರತಮಾಲಾ ಯೋಜನೆಯಲ್ಲಿ ಈಗಾಗಲೇ ಚೆನ್ನೈ-ಬೆಂಗಳೂರು ನಡುವೆ 262 ಕಿ.ಮೀ. ಉದ್ದದ 20,000 ಕೋ.ರೂ. ವೆಚ್ಚದ ಎಕ್ಸ್‌ಪ್ರೆಸ್ ಹೈವೇಗೆ ಟೆಂಡರ್ ಆಗಿದೆ. ಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಪ್ರಸ್ತಾವನೆಯಲ್ಲಿದ್ದು, ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆ ಇದಕ್ಕೆ ಪೂರಕವಾಗಲಿದೆ ಎಂದು ಅಂದಾಜಿಸಲಾಗಿದೆ.
Advertisement
ಸುಗಮ ಸಂಚಾರಕ್ಕೆ ಪೂರಕವರ್ಷಂಪ್ರತಿ ಮಳೆಗಾಲದಲ್ಲಿ ಶಿರಾಡಿ ಘಾಟಿ ರಸ್ತೆಯಲ್ಲಿ ತಲೆದೋರುವ ಭೂಕುಸಿತದ ಆತಂಕಕ್ಕೆ ಸುರಂಗ ಮಾರ್ಗವು ಪರಿಹಾರ ಕಲ್ಪಿಸಲಿದೆ. ಪ್ರಸ್ತುತ ಅಡ್ಡಹೊಳೆಯಿಂದ ಮಾರನಹಳ್ಳಿ ವರೆಗೆ ಘಾಟಿಯಲ್ಲಿ 27 ಕಿ.ಮೀ. ಕಾಂಕ್ರೀಟ್ ರಸ್ತೆ ಇದೆ. ಇದರ ಜತೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಅಡ್ಡಹೊಳೆ – ಸಕಲೇಶಪುರ ಮಾರ್ಗದ ನಡುವಿನ ದೂರದ ಅಂತರವೂ ಇಳಿಕೆಯಾಗಲಿದೆ ಮತ್ತು ಕಡಿಮೆ ಸಮಯದಲ್ಲಿ ಕ್ರಮಿಸಬಹುದಾಗಿದೆ. ಇಂಧನದಲ್ಲೂ ಇಳಿತ ಮತ್ತು ಸಂಚಾರವೂ ಸುಗಮವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಯೋಜನೆಗೆ ಜಪಾನ್ ದೇಶ ತಾಂತ್ರಿಕ ಸಲಹೆಗಳನ್ನು ನೀಡುತ್ತಿದೆ. ಶಿರಾಡಿ ಘಾಟಿ ಸುರಂಗಮಾರ್ಗ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಸಿದ್ಧವಿದ್ದು, ಅನುಮೋದನೆ ದೊರಕಿದ ಕೂಡಲೇ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯೋಜನೆಯಲ್ಲಿ ಹೆಚ್ಚು ಸರಕಾರಿ ಜಾಗ ಬರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ನಡೆಯುವ ಸಾಧ್ಯತೆಗಳಿವೆ.
- ಮಂಜುನಾಥ್, ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ