ಬೆಂಗಳೂರು: ಈಗಾಗಲೇ ಸಚಿವ ಸಂಪುಟದ ಒಪ್ಪಿಗೆ ಪಡೆದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಬೆಂಗಳೂರು ಸುರಂಗ ರಸ್ತೆ ಕಾಮಗಾರಿ ವೇಗ ಪಡೆದುಕೊಳ್ಳುವುದಕ್ಕೆ “ಭಾರತ-ಚೀನಾ’ ದ್ವಿಪಕ್ಷೀಯ ಸಂಬಂಧದ ಸಮಸ್ಯೆ ಎದುರಾಗಿದೆ. ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರಿ ಬಾಂಧವ್ಯ ತೆರೆದುಕೊಳ್ಳುವುದನ್ನು ರಾಜ್ಯ ಸರ್ಕಾರ ಈಗ ಎದುರು ನೋಡುತ್ತಿದೆ.
ಸರ್ಕಾರದ ಉನ್ನತ ಮೂಲಗಳು ಈ ವಿಚಾರವನ್ನು ಖಚಿತಪಡಿಸಿವೆ. ಮೊದಲ ಹಂತದಲ್ಲಿ ಹೆಬ್ಟಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ನಾಲ್ಕು ಟ್ರ್ಯಾಕ್ ಸುರಂಗ ಮಾರ್ಗ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಕಳೆದ ಜುಲೈ ತಿಂಗಳಲ್ಲಿಯೇ ಅನುಮತಿ ನೀಡಿದೆ. ಒಟ್ಟು 6 ಹಂತದ ಯೋಜನೆಗೆ ಈಗಾಗಲೇ “ಬ್ಲೂ ಪ್ರಿಂಟ್ ‘ ಹಾಗೂ ಮಾರ್ಗಗಳನ್ನೂ ಗುರುತಿಸಲಾಗಿದೆ.
ಆದರೆ, ಈ ಕಾಮಗಾರಿ ವೇಗ ಪಡೆಯುವುದಕ್ಕೆ ಚೀನಾ ನಿರ್ಮಿತ ಬೋರಿಂಗ್ ಯಂತ್ರದ ಅಗತ್ಯ ವಿದೆ. ನಮ್ಮ ಮೆಟ್ರೋ ನಿರ್ಮಾಣಕ್ಕೆ ಆರಂಭದಲ್ಲಿ ಚೀನಾ ನಿರ್ಮಿತ ಯಂತ್ರೋಪಕರಣಗಳನ್ನೇ ಬಳಸಲಾಗಿತ್ತು. ಆದರೆ, ಕಳೆದ ಎರಡು ವರ್ಷದಿಂದ ಎರಡು ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟು ಕ್ಷೀಣಿಸಿದೆ. ಹೀಗಾಗಿ ಬೋರಿಂಗ್ ಯಂತ್ರಗಳ ಆಮದು ಸದ್ಯಕ್ಕೆ ಸಾಧ್ಯವಿಲ್ಲ.
ಹೀಗಾಗಿ ಸುರಂಗ ಮಾರ್ಗ ಕಾಮಗಾರಿ ಶೀಘ್ರ ಪ್ರಾರಂಭವಾಗುವುದಕ್ಕೆ ಈಗ ಭಾರತ-ಚೀನಾ ಬಾಂಧವ್ಯ ವೃದ್ಧಿ ತೀರಾ ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಅವರು ಇತ್ತೀಚೆಗೆ ಬ್ರಿಕ್ಸ್ ಸಮ್ಮೇಳನದ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಷಿ ಜಿಂಪಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ವ್ಯವಹಾರಿಕ ಸಂಬಂಧ ಜಿಗಿತುಕೊಳ್ಳುವುದರ ಮುನ್ಸೂಚನೆ ಎಂದು ಭಾವಿಸಲಾಗಿದೆ. ಎಷ್ಟು ಬೇಗ ಕೇಂದ್ರ ಸರ್ಕಾರ ನಿರ್ಬಂಧ ಸಡಿಲಗೊಳಿ ಸುತ್ತದೆಯೋ, ಅಷ್ಟು ಬೇಗ ಸುರಂಗ ಮಾರ್ಗ ಕಾಮಗಾರಿ ವೇಗ ಪಡೆದುಕೊಳ್ಳುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.
ಈ ಮಾರ್ಗದಲ್ಲಿ ಒಟ್ಟು ನಾಲ್ಕು ಮಾರ್ಗಗಳು ಇರಲಿದ್ದು, ಮೂರು ಮಾತ್ರ ವಾಹನ ಓಡಾಟಕ್ಕೆ ತೆರೆದಿರುತ್ತದೆ. ಒಂದು ಮಾರ್ಗವನ್ನು ಮುಕ್ತವಾಗಿಡಲಾಗುತ್ತದೆ. ಭೂ ಸ್ವಾಧೀನ ಹಾಗೂ ಪರಿಹಾರ ಪ್ರಮಾಣ ಕಡಿಮೆ ಇರುವುದರಿಂದ ಕಾಮಗಾರಿ ಪ್ರಾರಂಭಕ್ಕೆ ವಿಳಂಭವಾಗುವುದಿಲ್ಲ ಎಂಬುದು ಬಿಬಿಎಂಪಿಯ ಲೆಕ್ಕಾಚಾರ.
ವಿಧಾನಸೌಧ ಸುತ್ತಲಿನ 1 ಕಿ.ಮೀ. ಪ್ರದೇಶದೊಳಗೆ ಸುರಂಗ ಮಾರ್ಗದ ಯಾವುದೇ ಪ್ರವೇಶದ್ವಾರ ಇರದಂತೆ ಸೂಚನೆ ನೀಡಲಾಗಿದೆ. ಈ ಮಾರ್ಗದಲ್ಲಿ ಪ್ರಾರಂಭವಾಗುವ ರಸ್ತೆಯ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ರೇಸ್‌ಕೋರ್ಸ್ ಬಳಿ ಇರಲಿವೆ ಎಂದು ಮೂಲಗಳು ತಿಳಿಸಿವೆ.