Advertisement

ಶಿರಾಡಿ ಘಾಟಿ: ಕಾಮಗಾರಿ ಆರಂಭ

02:34 PM Jan 24, 2018 | Team Udayavani |

ಉಪ್ಪಿನಂಗಡಿ: ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಕೆಂಪು ಹೊಳೆ ಅರಣ್ಯ ಇಲಾಖೆ ಗೆಸ್ಟ್‌ ಹೌಸ್‌ ಬಳಿಯ ಸೇತುವೆಯಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ. 15 ದಿನಗಳಿಂದ ರಸ್ತೆ ಬದಿಯ ಅಗಲೀಕರಣ ಮತ್ತು ಸೇತುವೆ ಕೆಲಸಗಳು ಪ್ರಗತಿಯಲ್ಲಿವೆ.

Advertisement

ಮಂಗಳೂರು- ಬೆಂಗಳೂರು ರಾ.ಹೆ.ಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಕಾಂಕ್ರೀಟ್‌ ರಸ್ತೆ 2ನೇ ಹಂತದ ಕಾಮಗಾರಿಗೆ 2015ರಲ್ಲಿ 85.28 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ 12.38 ಕಿ.ಮೀ. ಕಾಂಕ್ರೀಟ್‌ ಕಾಮಗಾರಿಗೆ 63.10 ಕೋಟಿ ರೂ., 21 ಕಿ.ಮೀ. ಡಾಮರು ಕಾಮಗಾರಿಗೆ 22.18 ಕೋಟಿ ರೂ. ವಿಂಗಡಿಸಲಾಗಿದೆ. ಓಶಿಯನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಕಂಪೆನಿ ಕಾಮಗಾರಿ ನಿರ್ವಹಿಸಲಿದೆ.

ಅಡ್ಡಹೊಳೆಯಲ್ಲಿ ಪ್ಲಾಂಟ್‌
ಕೆಂಪುಹೊಳೆಯಿಂದ ಅಡ್ಡಹೊಳೆ ತನಕ ಒಟ್ಟು 75 ಸೇತುವೆಗಳಿವೆ. ಇವುಗಳ ಪೈಕಿ 34 ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. 12 ಸೇತುವೆಗಳ ಕಾಮಗಾರಿ ಪ್ರಗತಿ ಯಲ್ಲಿದೆ. ಕಾಂಕ್ರೀಟ್‌ ರಸ್ತೆ 8.5 ಮೀಟರ್‌, ಡಾಮರ್‌ ರಸ್ತೆ 7 ಮೀ. ಅಗಲ ಆಗಲಿದೆ. ಕಾಮಗಾರಿ ನಿರ್ವಹಣೆ ಸಲುವಾಗಿ ಅಡ್ಡಹೊಳೆ ಎಂಬಲ್ಲಿ 7.5 ಎಕರೆ ಪ್ರದೇಶ ದಲ್ಲಿ ಪ್ಲಾಂಟ್‌ ನಿರ್ಮಿಸಿಕೊಂಡಿದೆ. ಎರಡು ಯುನಿಟ್‌ಗಳಾಗಿ ವಿಂಗಡಿಸಲಾಗಿದೆ. ಜರ್ಮನಿಯಿಂದ ತರಿಸಲಾದ ಅತ್ಯಾಧುನಿಕ ಕಾಂಕ್ರೀಟ್‌ ಪೇವರ್‌ ಯಂತ್ರ-1, ಡಿ.ಎಲ್‌.ಸಿ. ಪೇವರ್‌-1, ಗ್ರೇಡರ್‌ ಯಂತ್ರವನ್ನು ಪ್ರತಿಷ್ಠಾಪಿಸಲಾಗಿದೆ. ರೋಲರ್‌-1, ಟಿಪ್ಪರ್‌-25, ಟ್ಯಾಂಕರ್‌- 4 ಕಾರ್ಯಾಚರಿಸುತ್ತಿದೆ.

ಕಾಮಗಾರಿಗೆ ಒಟ್ಟು 20 ಸಾವಿರ ಟನ್‌ ಸಿಮೆಂಟ್‌, 4 ಸಾವಿರ ಲೋಡು ಮರಳು, 5 ಸಾವಿರ ಲೋಡು ಜಲ್ಲಿ, 350 ಟನ್‌ ಕಬ್ಬಿಣ, 30 ಸಾವಿರ ಕ್ಯೂಬಿಕ್ಸ್‌ 20 ಎಂ.ಎಂ., 20 ಸಾವಿರ ಕ್ಯೂಬಿಕ್ಸ್‌ 10 ಎಂ.ಎಂ. ಸರಳು ಬಳಕೆ ಆಗಲಿದೆ. ಎರಡು ಯುನಿಟ್‌ನಲ್ಲಿ 2 ಪಾಳಿಯಲ್ಲಿ ಕೆಲಸ ನಡೆಯಲಿದೆ. ಒಟ್ಟು 200 ನುರಿತ ಕೆಲಸಗಾರರು ಕೆಲಸ ನಿರ್ವಹಿಸಲಿದ್ದಾರೆ. 5 ಎಂಜಿನಿಯರ್‌, ಐವರು ಮೆಕ್ಯಾನಿಕ್‌, 10 ಮೇಲ್ವಿಚಾರಕರು ಕೆಲಸ ನಿರ್ವಹಿಸಲಿದ್ದಾರೆ ಎಂದು ಸ್ಥಳದಲ್ಲಿದ್ದ ಎಂಜಿನಿಯರ್‌ಗಳ ತಂಡ ಮಾಹಿತಿ ನೀಡಿತು.

6 ತಿಂಗಳಲ್ಲಿ ಪೂರ್ಣ
ಕಾಮಗಾರಿ ಪೂರ್ಣಗೊಳಿಸಲು ಒಟ್ಟು 15 ತಿಂಗಳ ಕಾಲಾವಕಾಶ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ,
ಸಾರ್ವಜನಿಕರ ಸಹಕಾರದೊಂದಿಗೆ 6 ತಿಂಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು
ಓಷಿಯನ್‌ ಕನ್‌ಸ್ಟ್ರಕ್ಷನ್‌ ನಿರ್ದೇಶಕ ಶರ್ಪುದ್ದೀನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next