ಸಕಲೇಶಪುರ: ತಾಲೂಕಿನಲ್ಲಿ ಹಾದುಹೋಗಿರುವ ರಾ.ಹೆ.75ರ ಶಿರಾಡಿ ಘಾಟ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಬೆಂಗಳೂರು-ಮಂಗಳೂರು 250 ರಿಂದ 263 ಕಿ.ಮೀ.ನ ಹೆದ್ದಾರಿಯಲ್ಲಿ 13 ಕಿ.ಮೀ. ಕಾಂಕ್ರೀಟಿಕರಣ ಮಾಡಲಾಗಿದೆ. ಇದರಲ್ಲಿ 12 ಕಿ.ಮೀ. ತಡೆ ಗೋಡೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. 8 ಕಿ.ಮೀ. ರಸ್ತೆ ಅಂಚಿಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಕೆಲವು ಕಡೆ ಮಣ್ಣು ಹಾಕುವ ಕಾರ್ಯ ನಡೆಯುತ್ತಿದ್ದು, ಆಲೂರು ತಾಲೂಕಿನಿಂದ ಲಾರಿಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ರಾತ್ರಿ ವೇಳೆ ಸಾಗಾಟಕ್ಕೆ ಅವಕಾಶ ನೀಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣ ಎಂಬ ಮಾತು ಕೇಳಿ ಬಂದಿದೆ.
ವಾಹನ ಸಂಚಾರಕ್ಕೆ ಡೀಸಿ ತಡೆ: ಸದ್ಯ ಕಾಂಕ್ರೀಟ್ ಕಾಮಗಾರಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮಾರನ ಹಳ್ಳಿ ಹಾಗೂ ಗುಂಡ್ಯ ಗ್ರಾಮದಲ್ಲಿರುವ ಚೆಕ್ ಪೋಸ್ಟ್‌ನ ನೌಕರರು, ಪರಿಚಿತ ಹಾಗೂ ಪ್ರಭಾವಿ ವ್ಯಕ್ತಿಗಳ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಶಿರಾಡಿಘಾಟ್‌ನಲ್ಲಿ
ಅಧಿಕೃತವಾಗಿ ಸಂಚಾರ ಆರಂಭಿಸುವ ಮುನ್ನವೇ ನೂರಾರು ವಾಹನಗಳು ಸಂಚರಿಸುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಜಿಲ್ಲಾಧಿಕಾರಿ ಗಳು ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದರು. ಇದಕ್ಕೆ ಶಿರಾಡಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ವ್ಯಾಪಕ ವಿರೋಧ ಕೇಳಿ ಬಂದಿತ್ತು.
ಜು.15ಕ್ಕೆ ವಾಹನ ಸಂಚಾರ?: ಶಿರಾಡಿಘಾಟ್‌ನ ಕಾಂಕ್ರೀಟ್, ತಡೆಗೋಡೆ, ರಸ್ತೆ ಅಂಚಿಗೆ ಮಣ್ಣು ತುಂಬಿಸುವ ಕಾಮಗಾರಿಗಳನ್ನು ಕೆಲವು ದಿನಗಳ ಹಿಂದೆ ವೀಕ್ಷಣೆ ಮಾಡಿದ್ದ ಮಂಗಳೂರು ಜಿಲ್ಲಾಧಿಕಾರಿಗಳು ಜು.15 ರಿಂದ ಸಂಚಾರ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮ ವಾರ ಮತ್ತೂಮ್ಮೆ ಕಾಮಗಾರಿ ವೀಕ್ಷಣೆ ಮಾಡ ಲಾಗಿದೆ. ಆದರೆ, ಅಧಿಕೃತವಾಗಿ ಸಂಚಾರ ಯಾವಾಗಿ ನಿಂದ ಆರಂಭಿಸುತ್ತಾರೆಂಬ ನಿರ್ಧಾರ ಇನ್ನೂ ಮಾಡಿಲ್ಲ. ಬುಧವಾರ ಸರ್ಕಾರದ ಮುಖ್ಯ ಎಂಜಿನಿ ಯರ್ ತಂಡ ಶಿರಾಡಿಗೆ ಭೇಟಿ ನೀಡಲಿದ್ದು, ಕಾಮಗಾರಿ ಪರಿಶೀಲನೆ ನಂತರ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಸಾಧ್ಯತೆಗಳಿವೆ.
ಹೆಸರು ಹೇಳಲಿಚ್ಛಿಸದ ಹೆದ್ದಾರಿ ಅಧಿಕಾರಿಯೊಬºರ ಪ್ರಕಾರ ಜು.15ರಿಂದ ಜೀಪು, ಕಾರಿನಂತ ಲಘುವಾಹ ನಗಳ ಸಂಚಾರಕ್ಕೆ ಅವಕಾಶ ನೀಡಿ ಆ.1ರಿಂದ ಬಸ್, ಲಾರಿಯಂತಹ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜು.15ರಿಂದ ನಿಷೇಧ ಹೇರಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮುಚ್ಚಲಾಗಿದ್ದ ಹೋಟೆಲ್‌ಗಳು ತೆರೆದಿರುವುದನ್ನು ನೋಡಿದರೆ ಜು.15ರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಹೆಚ್ಚಿದೆ.
ಗಡ್ಕರಿ,ಆಸ್ಕರ್‌ಗೆ ಆಹ್ವಾನ
ಮಂಗಳೂರು: ಶಿರಾಡಿ ಘಾಟಿ ರಸ್ತೆ ದುರಸ್ತಿಗೊಂಡು ಸಜ್ಜುಗೊಳ್ಳುತ್ತಿದ್ದು, ಉದ್ಘಾಟನೆಗೆ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫರ್ನಾಂಡಿಸ್ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಗಡ್ಕರಿ ಅವರ ದಿನಾಂಕನಿಗದಿಗಾಗಿ ಸಚಿವರ ದಿಲ್ಲಿಯ ಕಚೇರಿಗೆ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ಫ್ಯಾಕ್ಸ್ ಸಂದೇಶ ರವಾನಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.