Advertisement
ಹಲವು ವರ್ಷಗಳ ಹಿಂದೆ ಅದೊಂದು ದಿನ ಬೆಳಗ್ಗೆ, “ಬಟಾಣಿ… ಬಟಾಣಿ’ ಎಂದು ಕೂಗುತ್ತಾ ತರಕಾರಿ ಮಾರುವವಳು ಬಂದಿದ್ದಳು. ಅವಳ ಬಳಿ ಇದ್ದುದು ಬಿಡಿಸಿರುವ ಬಟಾಣಿ! ಆಹಾ, ನನ್ನ ಕೆಲಸ ಕಮ್ಮಿಯಾಯೆ¤ಂದು ಖುಷಿಯಲ್ಲಿ ಖರೀದಿಸಿದೆ. ಅದನ್ನು ತೊಳೆದು ಆಲೂಗಡ್ಡೆಯೊಂದಿಗೆ ಬೇಯಿಸಲು ಇಟ್ಟೆ. ಸ್ವಲ್ಪ ಹೊತ್ತಿನಲ್ಲಿ ಹಸಿರು ನೀರು ಬಿಡಲು ಶುರುವಾಯ್ತು. ಇದೇನೆಂದು ಆಶ್ಚರ್ಯವಾಯ್ತು. ಗಡಿಬಿಡಿಯಲ್ಲಿ ತೊಳೆಯುವಾಗ ಗಮನಿಸಿರಲಿಲ್ಲ .ಈಗ ಬಿಟ್ಟ ಬಣ್ಣ ನೋಡಿ, ಅದು ಕೃತಕ ಬಣ್ಣವೆಂದು ಥಟ್ಟನೆ ಹೊಳೆಯಿತು. ಅದೂ ಮ್ಯಾಲಕೈಟ್ ಗ್ರೀನ್ ಎಂದು ಗೊತ್ತಾದಾಗ ಹೌಹಾರಿದೆ.
Related Articles
Advertisement
ಪರಿಚಯಸ್ಥನಾದ ಅಂಗಡಿಯವನಲ್ಲಿ ದೂರು ಹೇಳಿದರೆ, ಆತ “ಇದು ಕೋಲ್ಕತ್ತಾದಿಂದ ಬರೋದಮ್ಮ. ಬರುವಾಗಲೇ ಹೀಗೆ ಬಣ್ಣ ಹಾಕಿರುತ್ತಾರೆ. ನಾವು ನೀರಿನಲ್ಲಿ ನೆನೆ ಹಾಕಿ ಆದಷ್ಟನ್ನು ತೆಗೆಯುತ್ತಿದ್ದೇವೆ’ ಎಂದು ಹೇಳಿದ. ಅಷ್ಟಲ್ಲದೆ, “ನೀವು ಬೇರೆ ಗ್ರಾಹಕರ ಎದುರೇ ಇದೆಲ್ಲ ಹೇಳಬೇಡಿ’ ಎಂದು ನಯವಾಗಿ ಆಕ್ಷೇಪಿಸಿದ. ಅವನಿಗೆ ಅವನ ವ್ಯಾಪಾರದ್ದೇ ಚಿಂತೆ. ನಮ್ಮ ಆರೋಗ್ಯದ ಬಗ್ಗೆ ಅವನ್ಯಾಕೆ ಯೋಚಿಸುತ್ತಾನೆ.
ಮತ್ತೂಮ್ಮೆ ಬನಶಂಕರಿ ಅಮ್ಮನಿಗೆ ಬಾಗೀನ ಕೊಡಲು ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲೇ ಹೊರಗೆ ಹೂವು ಮಾರುವವರ ಹತ್ತಿರ ಮಲ್ಲಿಗೆ ಕೊಳ್ಳಲು ಹೋದಾಗ ಅಚ್ಚ ಬಿಳುಪಿನ ದುಂಡು ಮಲ್ಲಿಗೆ ಮೇಲೆ ಹಸಿರು ಬಣ್ಣದ ಕುರುಹು ಕಾಣಿಸಿತು. ಅಯ್ಯೋ, ಬಣ್ಣದಲ್ಲಿ ಅದ್ದುವ ಈ ಪಿಡುಗು ಹೂಗಳನ್ನೂ ಬಿಟ್ಟಿಲ್ಲವೇ ಎಂದು ಬೇಸರವಾಯ್ತು. ಹೂವು ಬಾಡದಿರಲೆಂದೋ ಅಥವಾ ಹಳೆಯ ಹೂವನ್ನೋ ಮ್ಯಾಲಕೈಟ್ ಗ್ರೀನ್ ಬಣ್ಣದ ನೀರಿನಲ್ಲಿ ಅದ್ದಿ ತೆಗೆದಿರಿಸಿದ್ದರು.
ಆಮೇಲೆ ಗೊತ್ತಾಯ್ತು, ಈ ಬಣ್ಣ ಬೀನ್ಸ್, ಬೆಂಡೆಕಾಯಿ, ಚೌಳೀಕಾಯಿ,ಹಾಗಲಕಾಯಿ, ಮೆಣಸಿನ ಕಾಯಿಯನ್ನೂ ಬಿಟ್ಟಿಲ್ಲ ಅಂತ. ಮ್ಯಾಲಕೈಟ್ ಗ್ರೀನ್‌ನಂಥ ರಸಾಯನಿಕ ಬಣ್ಣಗಳಿಂದ ಕ್ಯಾನ್ಸರ್, ಅಲರ್ಜಿ, ಕಿಡ್ನಿ ವೈಫಲ್ಯದಂಥ ಮಾರಕ ರೋಗಗಳು ಬರುವ ಸಾಧ್ಯತೆ ಇದೆ. ಇತ್ತೀಚೆಗೆ ಅತಿ ಸಣ್ಣ ವಯಸ್ಸಿನಲ್ಲೇ ಮಾರಣಾಂತಿಕ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನಾವು ತಿನ್ನುವ ವಿಷಪೂರಿತ ಆಹಾರವೇ ಕಾರಣವಿರಬಹುದು. ತರಕಾರಿ, ಹಣ್ಣುಗಳನ್ನು ಸಾಗಾಟ ಮಾಡುವಾಗ ಮತ್ತು ಚಿಲ್ಲರೆ ಮಾರಾಟಗಾರರಲ್ಲಿ ಕಡಿಮೆ ವೆಚ್ಚದ, ಉತ್ತಮ ಸಂಸ್ಕರಣಾ ತಂತ್ರ ಜ್ಞಾನದ ಕೊರತೆ ಇರುವುದು ಕಾರಣವೋ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಆಹಾರ ಕಲಬೆರಕೆಯ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಕಾರಣವೋ ತಿಳಿಯಲಿಲ್ಲ. ಸದ್ಯಕ್ಕೆ, ಗ್ರಾಹಕರು ಕೃತಕ ಬಣ್ಣಗಳ ಕುರಿತು ಜಾಗೃತರಾಗುವುದೊಂದೇ ದಾರಿ.
ಇನ್ನೇನು ಮಾವಿನ ಹಣ್ಣಿನ ಸೀಝನ್ ಬರುತ್ತದೆ. ಮಾರುಕಟ್ಟೆ ತುಂಬಾ ಹಳದಿ, ಕೆಂಪು ಬಣ್ಣದಲ್ಲಿ ಹೊಳೆಯುವ ಮಾವಿನಹಣ್ಣುಗಳು! ಆದರೆ, ಹೊಳೆಯುವುದೆಲ್ಲ ಚಿನ್ನವಲ್ಲ ತಾನೇ. ಕೃತಕವಾಗಿ ಹಣ್ಣನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ನಂಥ ಹಾನಿಕಾರಕ ರಾಸಾಯನಿಕವನ್ನು ಬಳಸಿ, ಮಾವಿನ ಕಾಯಿಯನ್ನು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತಾರೆ. ಹಣ್ಣು ಒಳಗೆ ಸಿಹಿಯಾಗಿರದೆ ಹುಳಿಯಾಗಿರಲು ಅದೇ ಕಾರಣ. ಹಣ್ಣಿನ ಮೇಲೆ ಬಿಳಿ ಹುಡಿಯ ಶೇಖರಣೆಯೂ ಕಾಣಸಿಗುತ್ತದೆ. ಹಾಗಾಗಿ, ಬಣ್ಣ ನೋಡಿ ಮೋಸ ಹೋಗಬೇಡಿ. ಹಣ್ಣು-ತರಕಾರಿ ಖರೀದಿಸುವಾಗ ಎಚ್ಚರವಿರಲಿ.ಯಾವುದೇ ಕಾರಣಕ್ಕೂ, ಹಣ್ಣು-ತರಕಾರಿಯನ್ನು ಚೆನ್ನಾಗಿ ತೊಳೆಯದೇ ತಿನ್ನಬೇಡಿ.
ಸುಮನ್ ಪೈ