ಶಿವಮೊಗ್ಗ: ಶಿವಮೊಗ್ಗದ ನವೋದಯ ಶಾಲೆಯಿಂದ ಛತ್ತೀಸ್‌ಗಡಕ್ಕೆ ಮಕ್ಕಳು ಓದಲು ಹೋಗಿದ್ದು, ಅಲ್ಲಿನ ಮಕ್ಕಳು ಇಲ್ಲಿಗೆ ಬಂದಿದ್ದಾರೆ. ಲಾಕ್‌ಡೌನ್ ಜಾರಿಯಾದ ಕಾರಣ ಮಕ್ಕಳು ಅಲ್ಲೇ ಉಳಿದು ಆತಂಕದಲ್ಲಿದ್ದು, ಅವರನ್ನು ಕರೆತರುವಂತೆ ಜಿಲ್ಲಾ ಧಿಕಾರಿಗೆ ಪೋಷಕರು ಮನವಿ ಮಾಡಿದರು.
ಲಾಕ್‌ಡೌನ್ ಜಾರಿಯಾದಾಗಿನಿಂದ ಛತ್ತೀಸ್‌ಗಡದ ರಾಯಪುರದಲ್ಲಿ ಸಿಲುಕಿರುವ ನವೋದಯ ಶಾಲೆ ಮಕ್ಕಳನ್ನು ಕರೆತರಬೇಕೆಂದು ಒತ್ತಾಯಿಸಿ ಪೋಷಕರು ಡಿಸಿಗೆ ಮನವಿ ಸಲ್ಲಿಸಿದರು.
ಗಾಜನೂರಿನ ನವೋದಯ ವಿದ್ಯಾಲಯದಲ್ಲಿ ಆರನೇ ತರಗತಿಯಿಂದ ಓದುತ್ತಿರುವ ಮಕ್ಕಳು 2019- 20ನೇ ಸಾಲಿನಲ್ಲಿ ಛತ್ತೀಸ್‌ಗಡದ ರಾಯಪುರದ ನವೋದಯ ಶಾಲೆಗೆ 9ನೇ ತರಗತಿ ಓದಲು ಹೋಗಿದ್ದಾರೆ. ರಾಯಪುರದಿಂದ ಮಕ್ಕಳು ಗಾಜನೂರು ನವೋದಯ ವಿದ್ಯಾಲಯಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 19ಕ್ಕೆ ಪರೀಕ್ಷೆ ಮುಕ್ತಾಯವಾಗಿದ್ದು, ಮಾ.26ರಂದು ರಾಯಪುರದಿಂದ ಮಕ್ಕಳು ಇಲ್ಲಿಗೆ ಬರಬೇಕಿತ್ತು. ಇಲ್ಲಿನ ಮಕ್ಕಳು ಅಲ್ಲಿಗೆ ತೆರಳಬೇಕಿತ್ತು. ಆದರೆ ಲಾಕ್ ಡೌನ್ ಜಾರಿಯಾಗಿದ್ದರಿಂದ ಇದುವರೆಗೂ ಬರಲು ಮತ್ತು ಹೋಗಲು ಸಾಧ್ಯವಾಗಿಲ್ಲ. ಮಕ್ಕಳು ಆತಂಕಕ್ಕೆ ಒಳಗಾಗಿದ್ದಾರೆ. ನಮಗೂ ಆತಂಕವಿದೆ. ಈ ಬಗ್ಗೆ ನವೋದಯ ಶಾಲೆಯ ಪ್ರಾಂಶುಪಾಲರನ್ನು ವಿಚಾರಿಸಿದರೆ ಸದ್ಯದಲ್ಲೇ ಬರುತ್ತಾರೆ ಎಂದು ತಿಳಿಸಿದ್ದಾರೆ.
ದೂರದ ರಾಯಪುರದಲ್ಲಿ ಮಕ್ಕಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರನ್ನು ಕೂಡಲೇ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಪೋಷಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದ್ದಾರೆ. ವಾಗೀಶ್, ಮೋಹನ್ ಇದ್ದರು.