ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ತಿರುವು ನೀಡುವ ಘಟ್ಟ. ಆದ್ದರಿಂದ ಎಲ್ಲ ಪೂರ್ವ ಸಿದ್ಧತೆಗಳನ್ನು ನಡೆಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಪರೀಕ್ಷೆಯನ್ನು ನಡೆಸಲೇಬೇಕು ಎಂದು ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಹಮತ ಕೇಳಿದ್ದರು. ಪರೀಕ್ಷೆ ನಡೆಸಬೇಕೆಂದು ಒಂದೂವರೆ ತಿಂಗಳ ಹಿಂದೆ ಸಲಹೆ ನೀಡಿದ್ದೆ ಎಂದರು. ಬಳ್ಳಾರಿಗೆ ನಾನು ಭೇಟಿ ನೀಡಿ ಶಾಲೆಯೊಂದರಲ್ಲಿ ಪರಿಶೀಲಿಸಿದಾಗ 9ನೇ ತರಗತಿ ವಿದ್ಯಾರ್ಥಿಗಳಿಗೆ ಆಸ್ಪತ್ರೆ ಎಂದು ಬರೆಯಲು ಬಂದಿಲ್ಲ. ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಸದೇ ಎಸ್‌ಎಸ್ ಎಲ್‌ಸಿ ಪಾಸ್ ಮಾಡಿದರೆ ವಿದ್ಯಾರ್ಥಿಯು ಬದಲಾಗದೆ ಹಾಗೆ ತಪ್ಪುಗಳು ಮರುಕಳಿಸುವ ಸ್ಥಿತಿ ನಿರ್ಮಾಣಗೊಳ್ಳುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕುಡಿಯುವ ನೀರು ಮತ್ತು ಶೌಚಾಲಯ , ಸಾರಿಗೆ ವ್ಯವಸ್ಥೆ, ಸಾಮಾಜಿಕ ಅಂತರ ಮತ್ತು ಸ್ವಚ್ಚತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ತುರ್ತು ಸಂದರ್ಭ ಬಂದಲ್ಲಿ ಪರೀಕ್ಷಾ ಅವಧಿಯಲ್ಲಿ ಲಾಕ್‌ಡೌನ್ ಮಾಡಿ ಕೇವಲ ವಿದ್ಯಾರ್ಥಿಗಳಿಗಷ್ಟೆ ಸಡಿಲಗೊಳಿಸಿ ಯಶಸ್ವಿಯಾಗಿ ಪರೀಕ್ಷೆ ಮಾಡಬಹುದು ಎಂದರು.
ಶಿರಸಿ, ತೀರ್ಥಹಳ್ಳಿ, ಹಳಿಯಾಳದಲ್ಲಿ ದಟ್ಟವಾದ ಕಾಡುಗಳಿವೆ. ಇಲ್ಲಿ ಇಂಟರ್‌ನೆಟ್ ಇಲ್ಲ. ಆನ್ ಲೈನ್ ಶಿಕ್ಷಣ ಹೇಗೆ ಸಾಧ್ಯವೆಂದು ಪ್ರಶ್ನಿಸಿದ ಅವರು, ಶೇಕಡಾ 80.ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿದ್ದು, ನೆಟ್‌ವರ್ಕ್ ಸಮಸ್ಯೆ ಎಲ್ಲ ಕಡೆಯೂ ಇದ್ದು, ಇಂತಹ ಸಂದರ್ಭದಲ್ಲಿ ಆನ್ ಲೈನ್ ಶಿಕ್ಷಣ ಸಮಂಜಸವಲ್ಲ. ಪ್ರೌಢ ಶಿಕ್ಷಣದಲ್ಲಿ ಆನ್‌ಲೈನ್ ಬಳಕೆ ಬಗ್ಗೆ ಚಿಂತಿಸಬಹುದು ಎಂದರು.
ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಎದುರಿಸುವ ಸಿಇಟಿ ಪರೀಕ್ಷೆಗೆ ನಮ್ಮ ರಾಜ್ಯದ ಶಿಕ್ಷಣ ಪಡೆದು ಹೋದವರು ಕಡಿಮೆ ಅಂಕ ಪಡೆದಿರುತ್ತಾರೆ. ಕಾರಣ ನಮ್ಮ ಮಕ್ಕಳಿಗೆ ನೀಡದ ಪಠ್ಯವೂ ಸಹ ಅಲ್ಲಿ ಪ್ರಶ್ನೆಯಾಗಿ ಬಂದಿರುತ್ತದೆ. ನಮ್ಮಲ್ಲಿ ಶೇ.98 ರಷ್ಟು ಅಂಕ ಪಡೆದರೆ ಸಿಇಟಿಯಲ್ಲಿ ಶೇ.70 ರಷ್ಟು ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದರು. ಸರ್ಕಾರಿ ಶಾಲೆಯ ಸ್ಥಿತಿ ಸಹ ದೇಶದಲ್ಲಿ ಸುಧಾರಣೆಗೊಳ್ಳಬೇಕಿದೆ ಎಂದ ಕಿಮ್ಮನೆ ರತ್ನಾಕರ್, ಇಪ್ಪತ್ತು ಲಕ್ಷ ಜನಸಂಖ್ಯೆ ಹೊಂದಿದ ರಾಷ್ಟ್ರ ಒಲಂಪಿಕ್‌ನಲ್ಲಿ ಗೋಲ್ಡ್ ಮೆಡಲ್ ಪಡೆಯಲು ಸಾಧ್ಯವಾಗುತ್ತದೆ. ಅದೇ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶ ಒಲಂಪಿಕ್ ನಲ್ಲಿ ಒಂದು ಗೋಲ್ಡ್ ಮೆಡಲ್ ಪಡೆಯಲೂ ಒದ್ದಾಡುವಂತಾಗಿದೆ. ಇದಕ್ಕೆ ಭಾರತೀಯ ಶಿಕ್ಷಣ ಪದ್ಧತಿಯೇ ಕಾರಣವಾಗಿದ್ದು, ಇವತ್ತಿಗೂ ಅನೇಕ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲ ಮತ್ತು ಉನ್ನತ ಶಿಕ್ಷಣ ಪಡೆಯಲು ಬೇಕಾದ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದರು.
ಶಾಲಾ ಶುಲ್ಕ ಎಲ್ಲರಿಗೂ ಒಪ್ಪಿಗೆ ಇರುವಂತಿರಬೇಕು. ಈಗ ಸರ್ಕಾರದ ಕೈಯಲ್ಲಿ ಕೋವಿಡ್-19 ಎಂಬ ಅಸ್ತ್ರ ಇದ್ದು, ಸಾರ್ವಜನಿಕರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಈ ಅಸ್ತ್ರವನ್ನು ಬಳಸಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬಹುದಾಗಿದೆ. ಸರ್ಕಾರ ಎಲ್ಲರಿಗೂ ಒಪ್ಪಿಗೆಯಾಗುವ ಸೂತ್ರ ರಚಿಸಿ ಶುಲ್ಕ ಪಡೆಯುವ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಅಂತಹ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಪರಿಗಣಿಸುವ ಬಗ್ಗೆ ಕೆಲವರ ಸೂಚನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಸೆಪ್ಟಂಬರ್ ಅಂತ್ಯದವರೆಗೆ ಕೋವಿಡ್-19 ಬಗ್ಗೆ ಕಾದು ನೋಡುವ ತಂತ್ರ ಅನುಸರಿಸಿ ಆಮೇಲೆ ನಿರ್ಧಾರ ಕೈಗೊಳ್ಳಬಹುದು. ಒಂದು ವೇಳೆ ಶಾಲಾ ಕಾಲೇಜುಗಳು ಸೆಪ್ಟಂಬರ್‌ನಲ್ಲಿ ಪ್ರಾರಂಭವಾದರೆ ಕಡಿತಗೊಂಡ ಶಾಲಾ ಅವಧಿಯಲ್ಲಿ ಏಪ್ರಿಲ್-ಮೇ ನಲ್ಲಿ ನಡೆಸುವುದರ ಮೂಲಕ ಸರಿದೂಗಿಸಬಹುದು ಎಂದರು.
ಸಾವು ಮುಖ್ಯವೋ, ಬದುಕು ಮುಖ್ಯವೋ ಅಂದಾಗ ಬದುಕು ಮುಖ್ಯವಾಗುತ್ತದೆ. ಹಾಗಾಗಿ ಬದುಕಿದ್ದರೆ ಶಿಕ್ಷಣವಾಗುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಆಗಸ್ಟ್‌ವರೆಗೆ ಎಲ್ಲ ಶಾಲಾ ಕಾಲೇಜುಗಳನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.
ಕಿಮ್ಮನೆ ರತ್ನಾಕರ್