ಹುಬ್ಬಳ್ಳಿ: ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಅದು ತನ್ನದೆಯಾದ ಕೆಲಸ ಮಾಡುತ್ತದೆ. ಆದರೆ ಹಿಂದಿನ ಸಿದ್ದರಾಮಯ್ಯ (Siddaramaiah) ಈಗ ಉಳಿದಿಲ್ಲ. ಅವರಿಂದ ರಾಜ್ಯಕ್ಕೆ ಒಳಿತಾಗಲಿದೆ ಎಂಬ ವಿಶ್ವಾಸ ಇಲ್ಲ ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V.Somanna) ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಸರ್ಕಾರದ ಆಟಾಟೋಪ ನಡೆಯಲ್ಲ. ಜನ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಕ್ಫ್ ಸಚಿವ ಜಮೀರ ಅಹ್ಮದರು ರಾಜ್ಯಕ್ಕೆ ಜೆಪಿಸಿ ತಂಡ ಆಗಮಿಸುತ್ತಿರುವುದೇ ಅನಧಿಕೃತ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಅವರು ಕಾನೂನು ಅರಿತುಕೊಳ್ಳಲಿ. ಈ ರೀತಿಯಾಗಿ ಏಕೆ ಹೇಳಿಕೆ ಕೊಟ್ಟರೋ ಗೊತ್ತಾಗುತ್ತಿಲ್ಲ. ಅವರಿಗೆ ಮುಸ್ಲಿಮರು ಮಾತ್ರ ಮತ ಹಾಕಿಲ್ಲ. ಎಲ್ಲರೂ ಹಾಕಿದ್ದಾರೆ. ಅವರು ಮೊದಲು ಮಂತ್ರಿ ಕೆಲಸ ಮಾಡಲಿ. ಅದನ್ನು ಬಿಟ್ಟು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ. ಇದ್ದು ಸತ್ತ ಹಾಗೆ ಸಿದ್ದರಾಮಯ್ಯ ಸರ್ಕಾರವಾಗಿದೆ. ಅವರು ಪಂಜರದ ಗಿಳಿಯಾಗಿದ್ದಾರೆ. ಮೊದಲಿನ ಹಾಗೆ ಅವರು ಸಿಎಂ ಆಗಿ ಉಳಿದಿಲ್ಲ. ಸ್ವಇಚ್ಛೆಯಿಂದ ಒಂದೇ ಒಂದು ಸಣ್ಣ ಅಭಿವೃದ್ಧಿ ಕಾರ್ಯ ಮಾಡಲು ಆಗುತ್ತಿಲ್ಲ. ಹೀಗಾಗಿ ಉಪ ಚುನಾವಣೆ ನಂತರ ಈ ಸರ್ಕಾರ ಇರುತ್ತದೆ ಎಂಬ ನಂಬಿಕೆ ಇಲ್ಲ ಎಂದರು.
ರಾಷ್ಟ್ರಕ್ಕೆ ಬಸವರಾಜ ಬೊಮ್ಮಾಯಿ ಅವಶ್ಯಕತೆಯಿದೆ ಎಂದು ಮೋದಿಯವರು ಅಪೇಕ್ಷೆ ಮೇರೆಗೆ ಅವರು ಸಂಸದರಾಗಿದ್ದು, ಅವರ ಮಗನನ್ನು ಶಿಗ್ಗಾವಿ ಕ್ಷೇತ್ರಕ್ಕೆ ನಿಲ್ಲಿಸಲಾಗಿದೆ. ಮಾಜಿ ಸಿಎಂ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಧಾನಿ ಮೋದಿಯವರು ಕೈಗೊಂಡ ಕಾರ್ಯಗಳು ಗೆಲುವಿಗೆ ಸಹಕಾರಿ ಆಗಲಿದೆ. ಮೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.