Advertisement

ನೀಲ ನಕ್ಷೆ ಹಂತದಲ್ಲಿ ಶಿವಮೊಗ್ಗ ಸಿಟಿ

03:45 AM Jul 02, 2017 | |

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್‌ಸಿಟಿಯ ಎರಡನೇ ಹಂತದಲ್ಲಿ ಆಯ್ಕೆಯಾದ ಶಿವಮೊಗ್ಗ ನಗರ, ಇದರ ಅನುಷ್ಠಾನಕ್ಕೆ ಸಿದಟಛಿಗೊಳ್ಳುತ್ತಿದೆ.

Advertisement

ಈಗಾಗಲೇ ಕೆಲವು ಯೋಜನೆಗಳ ನೀಲನಕ್ಷೆ ಸಿದ್ಧವಾಗುತ್ತಿದ್ದು, ಟೆಂಡರ್‌ ಕರೆಯುವ ಹಂತದಲ್ಲಿದೆ. ಎಲ್ಲ ಪ್ರಯತ್ನಗಳ ನಡುವೆಯೂ ಶಿವಮೊಗ್ಗ ನಗರ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿತ್ತು. ಆದರೆ, ಕೇಂದ್ರ ಸರ್ಕಾರ 2016ರ ಸೆಪ್ಟೆಂಬರ್‌ 20ರಂದು ಎರಡನೇ ಹಂತದಲ್ಲಿ ಘೋಷಿಸಿದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.

ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಅನುಷ್ಠಾನಕ್ಕೆ ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಂಪನಿ ನೋಂದಾವಣಿಯಾಗಿದ್ದು, ಅಧಿಕೃತವಾಗಿ ಕಚೇರಿ ಆರಂಭವಾಗಿದೆ. ನಗರಪಾಲಿಕೆ ಆಯುಕ್ತರಾದ ಮುಲೈ ಮುಹಿಲನ್‌ ಕಂಪನಿಯ ಎಂ.ಡಿ.ಆಗಿ ನೇಮಕಗೊಂಡಿದ್ದಾರೆ. ಉಳಿದಂತೆ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಪೂರ್ಣಾವಧಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ ಗಣೇಶ್‌ ಎಂಬುವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಶಿವಮೊಗ್ಗ ನಗರವನ್ನು ಸ್ಮಾರ್ಟ್‌ ಆಗಿ ಪರಿವರ್ತಿಸಲು ಎರಡು ಕಂಪನಿಗಳು ಸಹ ಅಂತಿಮಗೊಂಡಿವೆ. ಸ್ಮಾರ್ಟ್‌ಸಿಟಿ ಕಾಮಗಾರಿಯ ಪ್ರಸ್ತಾವನೆ ಸಿದ್ಧಪಡಿಸಲು ಭಾರತ ಮೂಲದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಹಾಗೂ ಬಹುರಾಷ್ಟ್ರೀಯ ಕಂಪನಿ ಪೈಸ್‌ ವಾಟರ್‌ ಕೂಪಸ್‌ (ಪಿಡಬ್ಲ್ಯುಸಿ) ಕಂಪನಿಗಳು ನೇಮಕಗೊಂಡಿವೆ. ಈಗಾಗಲೇ ಕಂಪನಿಗಳು ಸರ್ವೇ ಕಾರ್ಯ ಮತ್ತು ಡಿಸೈನ್‌ ಕಾರ್ಯದಲ್ಲಿ ನಿರತವಾಗಿವೆ. ಈ ಕಂಪನಿಗಳು ಶಿವಮೊಗ್ಗ ನಗರವನ್ನು ಸ್ಮಾರ್ಟ್‌ ಆಗಿ ರೂಪಾಂತರಗೊಳಿಸಲಿವೆ.

ಆರಂಭದ ಕಾಮಗಾರಿಗಳು: ಆರಂಭದಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸ ಲಾಗಿದ್ದು, ಸಾಗರ ರಸ್ತೆಯ ಆಲ್ಕೊಳ ಸರ್ಕಲ್‌ನಿಂದ ಬಸ್‌ಸ್ಟಾÂಂಡ್‌ವರೆಗಿನ ಚತುಷ್ಪಥ ರಸ್ತೆಯಲ್ಲಿ ಸೈಕಲ್‌ ಮಾರ್ಗ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಈ ರಸ್ತೆಯನ್ನು ಹೈವೇ ಅಥಾರಿಟಿ ಚತುಷ್ಪಥ ರಸ್ತೆಯ ನ್ನಾಗಿ ಮಾಡಲಿದ್ದು, ಸ್ಮಾರ್ಟ್‌ಸಿಟಿ ಕಂಪನಿ ಈ ಕಾಮಗಾರಿ ಯಲ್ಲಿ ಸೇರಿಕೊಂಡು ಸೈಕಲ್‌ ಮಾರ್ಗ ನಿರ್ಮಾಣ, ಡಕ್‌ಬಾಕ್ಸ್‌ ನಿರ್ಮಾಣ, ಸ್ಮಾರ್ಟ್‌ ಟಾಯ್ಲೆಟ್‌ ನಿರ್ಮಾಣ ಮಾಡಲಿದೆ. ನಗರದೊಳಗೆ ಹಾದು ಹೋದ ಚಾನಲ್‌ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ.

Advertisement

ಚಾನಲ್‌ ದಂಡೆಯಲ್ಲಿ ಪಾರ್ಕ್‌ ನಿರ್ಮಾಣ, ಓಪನ್‌ ಜಿಮ್‌ ನಿರ್ಮಾಣ ಮಾಡಲು ಉದ್ದೇಶಿಸಿದೆ. ಚಾನಲ್‌ ಮೇಲೆ ಸೋಲಾರ್‌ ರೂಪಿಂಗ್‌ ಕಾಮಗಾರಿ ಅನುಷ್ಠಾನಕ್ಕೆ ಸ್ಮಾರ್ಟ್‌ಸಿಟಿ ಕಂಪನಿ ಆಸಕ್ತವಾಗಿದೆ. ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ತುಂಗಾ ನದಿಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಿದೆ. ಜತೆಗೆ ಐಟಿ ವಲಯದ ಅಭಿವೃದ್ಧಿ ಮುಖ್ಯವಾಗಿದೆ. ಈ ಎಲ್ಲ ಯೋಜನೆಗಳನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಟೆಂಡರ್‌ ಕರೆಯಲು ಪ್ರಕ್ರಿಯೆ ಆರಂಭಿಸಲಾಗಿದೆ. ಜತೆಗೆ, ನೆಹರು ರಸ್ತೆ ಸೇರಿ ಕೆಲವು ಮುಖ್ಯ ರಸ್ತೆಗಳಲ್ಲಿ ಮೂಲ ಸೌಕರ್ಯಕ್ಕೆ ಬೇಕಾದ
ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.

ಹಣ ಬಂದಿಲ್ಲ: ಆದರೆ, ಇದುವರೆಗೂ ಸ್ಮಾರ್ಟ್‌ಸಿಟಿ ಸಂಬಂಧ ಯಾವುದೇ ಅನುದಾನ ಬಂದಿಲ್ಲ. ಶೀಘ್ರದಲ್ಲಿ
ಇದು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಎಂಡಿ ಮುಹಿಲಿನ್‌. ಒಟ್ಟಾರೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ
ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರತಿ ವರ್ಷ ತಲಾ 100 ಕೋಟಿ ರೂ.ಗಳನ್ನು ನೀಡಲಿದೆ. ಕೇಂದ್ರದ ಅನುದಾನದಲ್ಲಿಯೇ ನಗರಪಾಲಿಕೆಯ ಪಾಲೂ ಸೇರಲಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಗುರುತಿಸಲ್ಪಟ್ಟ ಶಿವಮೊಗ್ಗ, ಈಗಾಗಲೇ ಒಂದು ಹಂತದಲ್ಲಿ ಅಭಿವೃದ್ಧಿ ಹೊಂದಿ, ಮೂಲ ಸೌಕರ್ಯ ಗಳನ್ನು ಪಡೆದಿದೆ. ಇದರ ಮೇಲೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹರಿದು ಬಂದಲ್ಲಿ ಇನ್ನಷ್ಟು ಗಮನಾರ್ಹ ಬದಲಾವಣೆ ಕಾಣಲಿದೆ ಎಂಬ ನಿರೀಕ್ಷೆ ನಾಗರಿಕರದ್ದು. ಯೋಜನೆ ಆದಷ್ಟು ಬೇಗ ಅನುಷ್ಠಾನಗೊಂಡು ಕಾಮಗಾರಿ ಆರಂಭವಾಗಬೇಕು ಎಂಬುದು ಕೂಡ ಸಾರ್ವಜನಿಕರ ಬೇಡಿಕೆಯಾಗಿದೆ.

ಶಿವಮೊಗ್ಗ ನಗರ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಇದುವರೆಗೆ ಅಭಿವೃದ್ಧಿಗೆ ಹಣ ಬಂದಿಲ್ಲ. ಆದರೆ, ಇದಕ್ಕಾಗಿ ನೇಮಕಗೊಂಡ ಕಂಪನಿಗಳು ಆರಂಭದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪ್ರಸ್ತಾವನೆ ಸಿದ್ಧಪಡಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಕಾಮಗಾರಿ ಆರಂಭಿಸಲಿವೆ. 
ಕೆ. ಬಿ.ಪ್ರಸನ್ನಕುಮಾರ್‌,
ಶಾಸಕರು, ಶಿವಮೊಗ್ಗ.

ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಲು ಕನ್ಸ್‌ಲ್ಟೆಂಟ್‌ ಏಜೆನ್ಸಿಗಳು ನೇಮಕಗೊಂಡಿದ್ದು, ಇವುಗಳು ನೀಡಿದ ಪ್ರಸ್ತಾ ವನೆ ಆಧಾರದ ಮೇಲೆ ಹಲವು ಯೋಜನೆಗಳನ್ನು ಆರಂಭಿಸಲಿದ್ದೇವೆ. ಇದುವರೆಗೆ ಹಣ ಬಂದಿಲ್ಲ. ಆದರೆ, ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ. ಅಷ್ಟರಲ್ಲಿ ಉಳಿದ ಪ್ರಾಥಮಿಕ ಸಿದ್ಧತೆಗಳನ್ನು ಪೂರೈಸುತ್ತೇವೆ.
– ಮುಲೈ ಮುಹಿಲಿನ್‌,
ಎಂ.ಡಿ., ಸ್ಮಾರ್ಟ್‌ಸಿಟಿ ಕಂಪನಿ.

Advertisement

Udayavani is now on Telegram. Click here to join our channel and stay updated with the latest news.

Next