ಕುಟುಂಬ ಫೋಟೊದೊಳಗಿನ ಒಬ್ಬೊಬ್ಬರನ್ನೇ ಸ್ವಾರಸ್ಯಕರವಾಗಿ ಪರಿಚಯಿಸುತ್ತಾ ಗಮನ ಸೆಳೆಯುತ್ತಾರೆ. ಇಲ್ಲಿ ಇವಳೇ, ಅಮ್ಮ, ಅಜ್ಜಿ, ಅತ್ತೆ ಎಂದು ಮುಂತಾಗಿ ಕರೆಯಲ್ಪಟ್ಟು ತನ್ನ ನಿಜ ಹೆಸರನ್ನೇ ಮರೆತ ಮನೋಜ್ಞ ಅಭಿನಯ ಮಾರ್ಮಿಕವಾಗಿತ್ತು.
ಹೆಣ್ಣು ಒಂದು ಅದ್ಭುತ ಸೃಷ್ಟಿ . ಅವಳು ತನ್ನ ಹತ್ತು ಹಲವು ಭಾವನೆಗಳನ್ನು ಎಲ್ಲರೊಂದಿಗೆ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ತನ್ನ ಭಾವನೆಗಳ ಮೂರ್ತರೂಪದಂತೆ ಕಾಣಿಸುವ ಕಿರುತೆರೆ ಧಾರಾವಾಹಿಗಳಂಥ ಪ್ರದರ್ಶನಗಳನ್ನು ಅವಳು ಇಷ್ಟಪಡುತ್ತಾಳೆ. ಹೆಣ್ಣನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹಲವಾರು ಪೂರ್ಣ ಪ್ರಮಾಣದ ಸಿನಿಮಾ, ನಾಟಕಗಳು ಪ್ರದರ್ಶನ ಕಂಡು ಯಶಸ್ವಿಯಾಗಿದೆ. ಸ್ತ್ರೀ ಶಕ್ತಿಯಾಗಿ, ಶೋಷಿತ ಮಹಿಳೆಯಾಗಿ, ನಿಸ್ವಾರ್ಥ ಅಮ್ಮನಾಗಿ, ಸಾಧಕಿಯಾಗಿ ಬಿಂಬಿಸುವ ಪ್ರಯತ್ನಗಳು ನಡೆದಿವೆ. ಆದರೆ ಮುಕ್ಕಾಲು ತಾಸು ಅವಧಿಯಲ್ಲಿ ಒಬ್ಬರೇ ರಂಗ ಭೂಮಿ ಮೇಲೆ ನಟಿಸಿ ದಿನನಿತ್ಯ ಬದುಕಿನ ಬವಣೆಗಳನ್ನು ವಿಶಿಷ್ಟವಾಗಿ ತೆರೆದಿಟ್ಟ ಪ್ರದರ್ಶನ ಅಪರೂಪ ಎನ್ನಬಹುದು. ಇಂಥ ಒಂದು ಪ್ರಯತ್ನ ಇತ್ತೀಚೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ “ನನ್ನೊಳಗಿನ ಅವಳು’ ಎಂಬ ಏಕವ್ಯಕ್ತಿ ನಾಟಕದಲ್ಲಿ ಮೂಡಿ ಬಂತು. ಶಿಲ್ಪಾ ಜೋಷಿ ಅವರು ಮೂರು ವಿಭಿನ್ನ ಪಾತ್ರಗಳನ್ನು ಲೀಲಾಜಾಲವಾಗಿ ಪ್ರಸ್ತುತ ಪಡಿಸಿದರು.
ನಾಟಕದಲ್ಲಿ ಬೇರೆ ಬೇರೆ ಪಾತ್ರಗಳು ಇದ್ದರೂ ಕಾಣದಂತೆ ಅವರ ಮಾತುಗಳನ್ನು ಊಹಿಸುವಂತೆ, ಫೋನ್ ಮೂಲಕ ಹಾಗೂ ಹಿನ್ನೆಲೆ ಸಂಗೀತ ಮೂಲಕ ಪ್ರೇಕ್ಷಕರಿಗೆ ಬಿಟ್ಟದ್ದು ನಿರೂಪಣೆಯ ಚಾಣಾಕ್ಷತನ ತೋರಿಸಿತು. ಧ್ವನಿಯ ಏರಿಳಿತಗಳಿಂದಲೇ ಮತ್ತೂಂದು ಕಡೆಯ ಮಾತುಗಳನ್ನು ಊಹಿಸಬಹುದಿತ್ತು. ಸ್ವಗತ ಪರಿಣಾಮಕಾರಿಯಾಗಿತ್ತು. ಹೆಚ್ಚಿನ ಭಾಗದಲ್ಲಿ ದಿನಚರಿ ಕಥೆ ಹೇಳುವಂತೆ ಕಂಡು ಬಂದರೂ ನಾಟಕೀಯ ಸ್ಪರ್ಶ ಪ್ರೇಕ್ಷಕನಿಗೆ ಹಿಡಿಸುತ್ತದೆ. ಅದರಲ್ಲೂ ಹೆಂಗಳೆಯರಿಗೆ ಖಂಡಿತ ಥೀಮ್ ಇಷ್ಟ ಆಗಬಹುದು.
ಏಕೆಂದರೆ ಮೂರು ವಿವಿಧ ವ್ಯಕ್ತಿತ್ವಗಳ ಹೆಣ್ಣಿನ ಪರಿಚಯ ಸಾಂಸಾರಿಕ ಜಂಜಾಟದ ನಡುವೆ ಇರುತ್ತದೆ. ಮೊದಲನೆಯವಳ ನಿರುದ್ಯೋಗಿ ಗಂಡ ದೂರದಲ್ಲಿದ್ದು ತಾನೇ ಮನೆ ಜವಾಬ್ದಾರಿಯನ್ನು ಹೊತ್ತು ನಡೆಸುವ ಏಕಾಂಗಿ ಜೀವನ. ಎರಡನೆಯವಳು ವಿಚ್ಛೇದಿತೆ. ಡೈವೊರ್ಸಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡವಳೆಂಬ ನೋವಿನೊಂದಿಗೆ ಸಾಗಿಸುವ ಒಂಟಿ ಬದುಕಿನ ಸುತ್ತ ಹೆಣೆದ ಕಥೆಯವಳು. ಕೊನೆಯದಾಗಿ ಬರುವ ಮೂರನೆಯವಳು ಎಲ್ಲರಿಗೂ ಹತ್ತಿರವಾಗುವ ಒಂದು ಕುಟುಂಬದ ಹಿರಿಯವಳು. ಈ ಪಾತ್ರದಲ್ಲಿ ಶಿಲ್ಪಾ ಅವರು ಹಲವಾರು ಉಲ್ಲೇಖನೀಯ ಅಂಶಗಳನ್ನು ವೇದಿಕೆ ಮೇಲೆ ತಂದಿದ್ದಾರೆ. ಒಂದು ರೀತಿಯ ಪರಕಾಯ ಪ್ರವೇಶ ಮಾಡಿದ್ದಾರೆ ಎಂದರೂ ತಪ್ಪಾಗಲಾರದು. ಇಲ್ಲಿ ಅವರು ತಮ್ಮ ರಂಗಭೂಮಿಯ ಅನುಭವವನ್ನೆಲ್ಲಾ ಧಾರೆಯೆರೆದಿದ್ದಾರೆ. ಕುಟುಂಬ ಫೋಟೊದೊಳಗಿನ ಒಬ್ಬೊಬ್ಬರನ್ನೇ ಸ್ವಾರಸ್ಯಕರವಾಗಿ ಪರಿಚಯಿಸುತ್ತಾ ಗಮನ ಸೆಳೆಯುತ್ತಾರೆ. ಇಲ್ಲಿ ಇವಳೇ, ಅಮ್ಮ, ಅಜ್ಜಿ, ಅತ್ತೆ ಎಂದು ಮುಂತಾಗಿ ಕರೆಯಲ್ಪಟ್ಟು ತನ್ನ ನಿಜ ಹೆಸರನ್ನೇ ಮರೆತ ಮನೋಜ್ಞ ಅಭಿನಯ ಮಾರ್ಮಿಕವಾಗಿತ್ತು.
ಮೂರು ಪಾತ್ರಗಳಿಗೆ ತಕ್ಕಂತೆ ಸಣ್ಣ ಹಾಡುಗಳ ಮಧ್ಯೆ ಲಗುಬಗನೆ ಮಾರ್ಪಾಡುಗೊಳ್ಳುವ ವೇದಿಕೆ ಮತ್ತು ಶಿಲ್ಪಾ ಅವರ ಪೂರ್ವತಯಾರಿ ತಂಡದ ಸಹಕಾರದೊಂದಿಗೆ ಎದ್ದು ಕಾಣುತ್ತದೆ. ಇದರ ಸಾಹಿತ್ಯ ರಚನೆ ಖುದ್ದು ಅವರದ್ದೇ. ಅನುಭವಿ ರಂಗಕರ್ಮಿ ರವಿರಾಜ್ ಹೆಚ್.ಪಿ. ಅವರ ನಿರ್ದೇಶನ ಮತ್ತು ಗೀತಂ ಗಿರೀಶ್ ಅವರ ಸಂಗೀತ ನಾಟಕದ ಯಶಸ್ಸಿಗೆ ಪೂರಕವಾಗಿತ್ತು.
ಜೀವನ್ ಶೆಟ್ಟಿ