ಮುಂಬೈ: ಕಳೆದೊಂದು ವರ್ಷದಿಂದ ಟೀಂ ಇಂಡಿಯಾ ನಾಯಕತ್ವದ ಸಂಗೀತ ಕುರ್ಚಿ ನಡೆಸುತ್ತಿರುವ ಬಿಸಿಸಿಐ, ಇದೀಗ ಮತ್ತೆ ಬೇರೆ ಆಟಗಾರನಿಗೆ ನಾಯಕತ್ವ ನೀಡಲು ಮುಂದಾಗಿದೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಎಡಗೈ ಆಟಗಾರ ಶಿಖರ್ ಧವನ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸ ಸೆ.28ರಿಂದ ಆರಂಭವಾಗಲಿದೆ. ಭಾರತ ತಂಡವು ಹರಿಣಗಳ ವಿರುದ್ಧ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನಾಡಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ನಂತರ ಏಕದಿನ ಸರಣಿ ನಡೆಯಲಿದೆ.
ಮೂಲಗಳ ಪ್ರಕಾರ ಟಿ20 ಸರಣಿಗೆ ಪೂರ್ಣ ಪ್ರಮಾಣದ ತಂಡವೇ ಆಡಲಿದ್ದು, ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಸೇರಿ ಕೆಲವು ಪ್ರಮುಖ ಆಟಗಾರರಿಗೆ ರೆಸ್ಟ್ ಸಿಗಲಿದೆ. ಅ.11ರವರೆಗೆ ದಕ್ಷಿಣ ಆಫ್ರಿಕಾ ಸರಣಿ ನಡೆಯಲಿದೆ. ಆದರೆ ಅ.9 ಅಥವಾ 11ರಂದು ಭಾರತ ಟಿ20 ತಂಡ ಆಸ್ಟ್ರೇಲಿಯಾಗೆ ತೆರಳಲಿದೆ. ಟಿ20 ವಿಶ್ವಕಪ್ ಕೂಟವು ಆಸೀಸ್ ನೆಲದಲ್ಲಿ ಅ.16ರಿಂದ ನ.13ರವರೆಗೆ ನಡೆಯಲಿದೆ.
ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ಅವರು ಟೀಂ ಇಂಡಿಯಾ ಕೋಚ್ ಆಗಿರಲಿದ್ದಾರೆ ಎಂದು ವರದಿ ತಿಳಿಸಿದೆ. ರಾಹುಲ್ ತ್ರಿಪಾಠಿ ಅವರಂತಹ ಆಟಗಾರರು ಈ ಸರಣಿಯಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ವರ್ಷದ ಆರಂಭದಲ್ಲಿ ಐರ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡಿದ ಉಮ್ರಾನ್ ಮಲಿಕ್ ಸಹ ಏಕದಿನ ಸರಣಿಗೆ ಪುನರಾಗಮನ ಮಾಡಬಹುದು.
ಇದನ್ನೂ ಓದಿ:ಮಂಗಳೂರು ದಸರಾಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ : ಸಚಿವ ವಿ. ಸುನಿಲ್ ಕುಮಾರ್
ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 28 ರಂದು ತಿರುವನಂತಪುರದಲ್ಲಿ ನಡೆಯಲಿದೆ. ಎರಡನೇ ಟಿ20 ಅನ್ನು 2022 ರ ಅಕ್ಟೋಬರ್ 2ರಂದು, ಮೂರನೇ ಅಕ್ಟೋಬರ್ 4 ರಂದು ಇಂದೋರ್‌ನಲ್ಲಿ ಆಡಲಾಗುತ್ತದೆ. ಏಕದಿನ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6ರಂದು ಲಕ್ನೋದಲ್ಲಿ ನಡೆದರೆ, ಉಳಿದೆರಡು ಪಂದ್ಯಗಳು ರಾಂಚಿ ಮತ್ತು ದಿಲ್ಲಿಯಲ್ಲಿ ಕ್ರಮವಾಗಿ ಅಕ್ಟೋಬರ್ 9 ಮತ್ತು 11ರಂದು ನಡೆಯಲಿದೆ.