Advertisement

ಶಿಗ್ಗಾವಿ: ಜೀವ ಭಯದಲ್ಲೇ ಹೆದ್ದಾರಿ ದಾಟುವ ದುಸ್ಥಿತಿ!

06:40 PM Jul 08, 2023 | Team Udayavani |

ಶಿಗ್ಗಾವಿ: ಪಟ್ಟಣದ ಬಳಿ ಮೇಲ್ಸೇತುವೆ, ಕೆಳ ಸೇತುವೆ ಸಂಚಾರಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸದೇ, ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿಯನ್ನು ಜನರು ದಿನನಿತ್ಯ ಜೀವ ಭಯದಲ್ಲೇ ದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಹಶೀಲ್ದಾರ್‌ ಕಚೇರಿ, ಉಪ ನೋಂದಣಿ ಕಚೇರಿ, ಭೂ-ದಾಖಲೆ ಕಚೇರಿ, ಸಬ್‌ ಟ್ರಜರಿ ಅಲ್ಲದೇ, ಜೆಎಂಎಫ್‌ಸಿ ಹಿರಿಯ, ಕಿರಿಯ ನ್ಯಾಯಾಲಯಗಳಿಗೆ ಹೋಗಿ ಬರಲು ಸಿಬ್ಬಂದಿ ಕಿಲೋ ಮೀಟರ್‌ಗಟ್ಟಲೇ ಊರು ಸುತ್ತುವರೆದು ಹೋಗಬೇಕಾಗಿದೆ. ಇಲ್ಲವೇ, ಜನರು ಪ್ರಾಣಾಪಾಯದಲ್ಲಿ ತೀರಾ ಎಚ್ಚರದಿಂದಲೇ ರಾಷ್ಟ್ರೀಯ ಹೆದ್ದಾರಿ ದಾಟಬೇಕಾದ ಸ್ಥಿತಿ ಇದೆ.

ಶಿಗ್ಗಾವಿ ಪಟ್ಟಣದ ಬೆಳವಣಿಗೆಯ ವ್ಯಾಪ್ತಿ ವಿಸ್ತಾರವಾದಂತೆ ಜನರ ಸಮರ್ಪಕ ಹಾಗೂ ಅವಶ್ಯಕ ಬೇಡಿಕೆಗಳಿಗೆ ಅನುಗುಣವಾಗಿ ಷಟ³ಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಬೇಕಿತ್ತು. ಜನರ ಓಡಾಟ ಹೆಚ್ಚಾದಂತೆ ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿತ್ತು.ಆದರೆ, ಹೆದ್ದಾರಿ ಆರು ಪಥದಲ್ಲಿ ನಿರ್ಮಾಣವಾದ ಮೇಲೆ ಊರ ಪ್ರವೇಶಕ್ಕೆ “ಕೊಂಕಣ ಸುತ್ತಿ ಮೈಲಾರ’ಕ್ಕೆ ಬರುವಂತಾಗಿದೆ.

ದಿನ ಬೆಳಗಾದರೆ ಹಾವೇರಿ ಪಟ್ಟಣದ ಕಡೆಯಿಂದ ಸಾರಿಗೆ ಬಸ್‌ ಮೂಲಕ ಬರುವ ಪ್ರಯಾಣಿಕರು ಐಬಿ ಕ್ರಾಸ್‌ ರಸ್ತೆಯಲ್ಲಿ ಇಳಿಯಬೇಕು. ಇಲ್ಲವೇ, ಬಸ್‌ ನಿಲ್ದಾಣಕ್ಕೆ ಹೋಗಿ ನಂತರ ಕಿಲೋ ಮೀಟರ್‌ ಗಟ್ಟಲೇ ಊರು ಸುತ್ತಿ ಬರಬೇಕು. ಇಂತಹ ಅವಸರದ ಸನ್ನಿವೇಶದಲ್ಲಿ ಅವರು ಪ್ರಾಣಾಪಾಯ ಲೆಕ್ಕಿಸದೇ ರಸ್ತೆ ದಾಟಲು ಮುಂದಾಗುತ್ತಾರೆ. ಪಟ್ಟಣ ಪ್ರವೇಶಕ್ಕೆ
ರಾಷ್ಟ್ರೀಯ ಹೆದ್ದಾರಿ ಕ್ರಾಸ್‌ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ.

ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಶಿಕ್ಷಣಕ್ಕಾಗಿ ದಿನನಿತ್ಯ ಬರುವ ನೂರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ. ಹೆದ್ದಾರಿ ದಾಟುವವರಿಗೆ ವಾಹನಗಳು ಡಿಕ್ಕಿ ಹೊಡೆದು ಹಲವರು ಪ್ರಾಣ ಕಳೆದುಕೊಂಡ ಪ್ರಕರಣಗಳು ಜರುಗಿವೆ. ಪಟ್ಟಣದ ನಾಗರಿಕರು ತಮ್ಮ ಜನಪ್ರತಿನಿಧಿಗಳಿಗೆ ಅಗಾಗ್ಗೆ ಮೇಲ್ಸೇತುವೆ ಮತ್ತು ಸಮರ್ಪಕ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಪತ್ರ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಜನರ ಬೇಡಿಕೆಗಳು ಮಾತ್ರ ಇನ್ನೂ ಈಡೇರಿಲ್ಲ.

Advertisement

ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ತಿಳಿಸಿದ್ದಾರೆ.

2018 ರಲ್ಲಿಯೇ ಶಾಸಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬೆಂಗಳೂರು ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಪತ್ರ ಬರೆದು ಕೈ ತೊಳೆದುಕೊಂಡಿದ್ದಾರೆ. ಅಪಘಾತ ಸಂಭವಿಸಿದಾಗ ರಕ್ಷಣೆಗೆ ಬರುವ ಪೊಲೀಸರು ಇಲ್ಲೊಂದು ಬ್ರಿಜ್‌ ಆಗಬೇಕಿತ್ತು. ಏನು ಮಡೋದು ಅಂತಾ ಉಸಿರು ಹಾಕುತ್ತಾರೆ. ಜನರ ಸಮಸ್ಯೆಗೆ ಪರಿಹಾರವಂತೂ ಇದುವರೆಗೂ ದೊರಕಿಲ್ಲ. ಜನರು ಕೂಡ ದಿನವೂ ಅಪಾಯಕಾರಿ ರಸ್ತೆ ದಾಟುವುದನ್ನು ಬಿಟ್ಟಿಲ್ಲ. ದಿನ ಸಾಯುವವರಿಗೆ ಅಳುವವರಾರು ಎಂಬಂತಾಗಿದೆ.

ಪಟ್ಟಣದ ಸಬ್‌ ರಜಿಸ್ಟ್ರಾರ್‌ ಕಚೇರಿಗೆ ತೆರಳಲು ರಸ್ತೆ ದಾಟುವಾಗ ಇಲ್ಲಿನ ದಸ್ತಾವೇಜು ಬರಹಗಾರ ನದಾಫ್‌ ಎನ್ನುವವರು ವಾಹನಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರು. ಅಲ್ಲದೇ, ಇತ್ತೀಚೆಗೆ ತುರ್ತು ಚಿಕಿತ್ಸೆಗಾಗಿ ಕುಂದೂರು ಗ್ರಾಮದ ಮಹಿಳೆ ಶಿಗ್ಗಾವಿ ಆಸ್ಪತ್ರೆಗೆ ಬರಲು ರಸ್ತೆ ದಾಟುವಾಗ ವಾಹನಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡರು. ಇಲ್ಲಿನ ಶಾಲಾ- ಕಾಲೇಜುಗಳಿಗೆ ಹೋಗಲು ಪ್ರತಿದಿನ ಬೆಳಿಗ್ಗೆ-ಸಾಯಂಕಾಲ ವಿದ್ಯಾರ್ಥಿಗಳು ಇದೇ ಅಪಾಯಕಾರಿ ರಸ್ತೆ ದಾಟುತ್ತಾರೆ. ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವಿಭಾಗದ ಅಧಿಕಾರಿಗಳು ಅವೈಜ್ಞಾನಿಕ ರಸ್ತೆ ಕಾಮಗಾರಿ ಪುನಃ ಪರಿಶೀಲಿಸಬೇಕು.
ರವಿ ಗುಡಸಲಮನಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್ಮನ್‌, ಶಿಗ್ಗಾವಿ

ಶಿಗ್ಗಾವಿ ಪಟ್ಟಣ ವ್ಯಾಪ್ತಿಯಲ್ಲಿ ಹೊಸ ಫ್ಲೈ ಓವರ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಇಲಾಖೆಯಲ್ಲಿ ಹೊಸ ಪ್ರಸ್ತಾವನೆಯಿಲ್ಲ‌ . ಪಟ್ಟಣದ ಅರ್ಧ ಕಿಮೀ ದೂರದಲ್ಲಿ ಖುರ್ಷಾಪೂರ ಗ್ರಾಮದ ರಸ್ತೆಯ ತಿರುವಿಗೆ ಮೇಲ್ಸೇತುವೆ ನಿರ್ಮಾಣಕ್ಕೆ ಇಲಾಖೆಯ ಕ್ರಿಯಾಯೋಜನೆಯಿತ್ತು. ಅದನ್ನು ನಿರ್ಮಿಸಲು ಟೆಂಡರ್‌ ಪಡೆದ ಏಜೆನ್ಸಿಯ ತಕರಾರಿನ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಯಿತು. ಪುನಃ ಎರಡನೇ ಬಾರಿಗೆ ಪ್ರಾ ಧಿಕಾರದ ತಾಂತ್ರಿಕ ಇಲಾಖೆಯಿಂದ ಟೆಂಡರ್‌ ಕರೆಯಲಾಗುವುದು.
ಕಿರಣ, ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ, ಧಾರವಾಡ

ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸ್ಥಳೀಯ ಶಾಸಕರು ಒತ್ತಾಯಿಸಿ ಮಂಜೂರಾತಿ ಪಡೆದಿಲ್ಲ. ಕೇಂದ್ರದಲ್ಲಿ ಅವರದೇ ಪಕ್ಷದ ಸಚಿವರು ಇದ್ದಾಗಲೂ ಹೆದ್ದಾರಿ ಅಭಿವೃದ್ಧಿ, ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ. ಸಾಕಷ್ಟು ಬಾರಿ ಇಲ್ಲಿನ ನಾಗರಿಕರು ರಸ್ತೆ ಅವಘಡ, ಪ್ರಾಣ ಹಾನಿಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದರೂ ಕೇವಲ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿದ್ದವರಿಗೆ ಹೆದ್ದಾರಿ ಅಭಿವೃದ್ಧಿಗೆ ಕ್ರಮ ವಹಿಸುವುದು ದೊಡ್ಡ ವಿಚಾರವೇ ಅಲ್ಲ.
ಮಂಜುನಾಥ ವಿ. ಮಣ್ಣನ್ನವರ,ಕಾಂಗ್ರೆಸ್‌ ವಕ್ತಾರ

*ಬಸವರಾಜ ಹೊನ್ನಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next