Advertisement

ತೋಳವನ್ನು ನಂಬಿದ  ಕುರಿಗಾಹಿ!

07:30 AM Apr 12, 2018 | |

ರಾಚೇನಹಳ್ಳಿ ಎಂಬ ಊರಿನಲ್ಲಿ ಒಬ್ಬ ಕುರುಬನಿದ್ದ. ಅವನ ಬಳಿ ನೂರಾರು ಕುರಿಗಳಿದ್ದವು. ಹತ್ತಿರದ ಗುಡ್ಡದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕುರಿ ಮೇಯಿಸುವುದೇ ಅವನ ಕೆಲಸ. ಒಮ್ಮೆ ಅವನು ಕುರಿ ಕಾಯುತ್ತಿದ್ದಾಗ ತೋಳವೊಂದು ಅಲ್ಲಿಗೆ ಬಂತು. ಕುರಿಗಳು ಹೆದರಿ ದಿಕ್ಕಾಪಾಲಾಗಿ ಓಡತೊಡಗಿದವು. ಆದರೆ, ತೋಳ, ಕುರಿಗಳ ಮೇಲೆ ದಾಳಿ ಮಾಡದೆ ಸುಮ್ಮನೆ ನಿಂತುಕೊಂಡಿತು. ಹೆದರಿದ ಕುರಿಗಳನ್ನು ಹತ್ತಿರ ಕರೆದು- “ಅಣ್ಣಗಳಿರಾ, ಅಕ್ಕಗಳಿರಾ! ದುಷ್ಟ ತೋಳ ನಮ್ಮನ್ನು ಹಿಡಿದು ತಿನ್ನುತ್ತದೆ ಎಂದು ಹೆದರಿದಿರಾ? ನಾನು ನಿಮ್ಮನ್ನು ತಿನ್ನುವುದಿಲ್ಲ. ಹೊಟ್ಟೆಪಾಡಿಗಾಗಿ ಮೊದಲೆಲ್ಲ ಪ್ರಾಣಿಗಳನ್ನು ತಿಂದಿದ್ದು ನಿಜವೇ. ಆದರೆ, ಈಗ ಪ್ರಾಣಿ ಹಿಂಸೆ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದೇನೆ. ಈ ಪ್ರಶಾಂತ ಪರಿಸರದಲ್ಲಿ ತಪಸ್ಸು ಮಾಡಲು ಬಂದಿದ್ದೇನೆ. ನನ್ನನ್ನು ನಂಬಿ ಗೆಳೆತನ ಮಾಡಿ’ ಎಂದಿತು. ಕುರಿಗಳಿಗೆ ಆಶ್ಚರ್ಯವೋ ಆಶ್ಚರ್ಯ! ದೂರದಿಂದಲೇ ಇದನ್ನೆಲ್ಲಾ ಗಮನಿಸಿದ ಕುರುಬನಿಗೂ ಅಚ್ಚರಿಯಾಯ್ತು. ಆದರ ನಯವಾದ ಮಾತಿನಲ್ಲಿ ಕಪಟತನ ಕಾಣಿಸಲಿಲ್ಲ. ಯಜಮಾನನಿಗೆ ತೋಳ ತುಂಬಾ ಹಿಡಿಸಿತು. ತೋಳ ಕುರಿಗಳಿಗೆ ರಕ್ಷಣೆ ನೀಡುವುದನ್ನು ಕಂಡು ತೋಳವನ್ನು ಸಾಕಲು ನಿರ್ಧರಿಸಿದ. ತನ್ನ ಬಳಿಯಿದ್ದ ನಾಯಿಯನ್ನು ಓಡಿಸಿದ. ಪ್ರತಿದಿನ ತೋಳ ಕುರಿಗಳ ಹಿಂಡಿನೊಂದಿಗೆ ಹೋಗಿ ಸುರಕ್ಷಿತವಾಗಿ ಕರೆತರುತ್ತಿತ್ತು.

Advertisement

ಹೀಗಿರುವಾಗ ಒಂದು ದಿನ ಕುರುಬ ಎರಡು ವಾರ ಪಕ್ಕದ ಊರಿಗೆ ಹೋಗಬೇಕಾಯ್ತು. ಕುರಿ ಕಾಯಲು ಬೇರೆ ಜನರೇ ಬೇಡ. ಹೇಗೂ ತೋಳಣ್ಣ ಇದ್ದಾನಲ್ಲ ಎಂದು ಆ ಕೆಲಸವನ್ನು ತೋಳಕ್ಕೆ ವಹಿಸಿ ಕುರುಬ ನಿಶ್ಚಿಂತೆಯಿಂದ ಹೊರಟ. ಕುರಿಗಳಿಗೆ ದಿಗಿಲು ಹತ್ತಿತು. ಯಜಮಾನ ಅತ್ತ ಹೋಗುತ್ತಲೇ ತೋಳ ದಾಳಿ ಮಾಡಿದರೆ ಎಂಬ ಭಯ ಅವುಗಳನ್ನು ಕಾಡುತ್ತಲೇ ಇತ್ತು. ಅವುಗಳ ಭಯ ನಿಜವಾಯಿತು. ಅವನು ಹೋಗುವುದನ್ನೇ ಕಾಯುತ್ತಿದ್ದ ತೋಳ ತನ್ನ ನಿಜ ಬುದ್ಧಿಯನ್ನು ತೋರಿಸಿಯೇ ಬಿಟ್ಟಿತು. ಕುರಿಗಳನ್ನು ಕೂಡಿ ಹಾಕಿದ್ದ ಬೇಲಿಯ ಒಳಗೆ ನುಗ್ಗಿತು. ಕುರಿಗಳು ಕಿರುಚತೊಡಗಿದವು. ಅದೇ ಸಮಯಕ್ಕೆ ಹಿಂದೆ ಅಲ್ಲಿ ಕೆಲಸಕ್ಕಿದ್ದ ಜಾನಿ ನಾಯಿ ಚಂಗನೆ ಅದೆಲ್ಲಿಂದಲೋ ನೆಗೆದು ಬಂತು. “ನನಗೆ ಮೊದಲಿನಿಂದಲೂ ನಿನ್ನ ಮೇಲೆ ಅನುಮಾನ ಇದ್ದೇ ಇತ್ತು’ ಎನ್ನುತ ತೋಳದ ಮೈಮೇಲೆ ಬಿದ್ದಿತು ಜಾನಿ. ನಾಯಿಯ ಏಕಾಏಕಿ ದಾಳಿಯಿಂದ ಕಂಗೆಟ್ಟ ತೋಳ ಕುರಿಗಳನ್ನು ಅಲ್ಲಿಯೇ ಬಿಟ್ಟು ಕಾಲಿಗೆ ಬುದ್ಧಿ ಹೇಳಿತು. ಮಾರನೇ ದಿನ ಕುರಿಗಾಹಿ ವಾಪಸ್ಸಾದ. ಅಕ್ಕಪಕ್ಕದವರಿಂದ ಸುದ್ದಿ ತಿಳಿದು ಜಾನಿಯ ತಲೆಯನ್ನು ಪ್ರೀತಿಯಿಂದ ನೇವರಿಸಿದ.

ಬನ್ನೂರು ಕೆ. ರಾಜು

Advertisement

Udayavani is now on Telegram. Click here to join our channel and stay updated with the latest news.

Next