Advertisement

“ರಣಭೂಮಿ’ಯಲ್ಲಿ ಶೀತಲ್‌ ಶೆಟ್ಟಿ ಖಳನಟಿ

10:05 AM Nov 04, 2019 | Lakshmi GovindaRaju |

ನಿರಂಜನ್‌ ಒಡೆಯರ್‌ ಹಾಗು ಕಾರುಣ್ಯರಾಮ್‌ ಅಭಿನಯದ “ರಣಭೂಮಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್‌ 8 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶೀತಲ್‌ಶೆಟ್ಟಿ ನಟಿಸಿದ್ದು, ಇದೇ ಮೊದಲ ಬಾರಿಗೆ ಅವರು ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಇದುವರೆಗೆ ನೆಗೆಟಿವ್‌ ಪಾತ್ರದಲ್ಲಿ ಮಿಂಚುತ್ತಿದ್ದ ನಟ “ಭಜರಂಗಿ’ ಲೋಕಿ ಅವರಿಲ್ಲಿ ಪಾಸಿಟಿವ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ.

Advertisement

“ಜೋಕಾಲಿ’ ಮೂಲಕ ನಿರ್ದೇಶಕರಾಗಿದ್ದ ಚಿರಂಜೀವಿ ದೀಪಕ್‌ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಂಜುನಾಥ್‌ ಪ್ರಭು ಹಾಗು ಹೇಮಂತ್‌ ದೇಶಹಳ್ಳಿ ಅವರ ಜೊತೆ ಸೇರಿ ನಿರ್ಮಾಣದಲ್ಲೂ ಚಿರಂಜೀವಿ ದೀಪಕ್‌ ಕೈ ಜೋಡಿಸಿದ್ದಾರೆ. “ರಣಭೂಮಿ’ ಅಂದಾಕ್ಷಣ, ಯುದ್ಧದ ನೆನಪಾಗುತ್ತೆ. ಇಲ್ಲಿ ಯಾವುದೇ ಯುದ್ಧ ಚಿತ್ರಣವಿಲ್ಲ. ಆದರೆ, ದ್ವೇಷ ಹೆಚ್ಚಾಗಿದ್ದು, ಮಾಸ್‌ ಪ್ರಿಯರಿಗೆ ಪಕ್ಕಾ ಆ್ಯಕ್ಷನ್‌ ಅಂಶಗಳು ಇಲ್ಲಿರಲಿವೆ.

ಶೀತಲ್‌ಶೆಟ್ಟಿ ಅವರು ಮೊದಲ ಸಲ ವಿಶೇಷ ಪಾತ್ರ ಎಂಬಂತೆ ನೆಗೆಟಿವ್‌ ರೋಲ್‌ ಮಾಡಿದ್ದಾರೆ. ಆ ಪಾತ್ರ, ನನಗೆ ಅದು ಬೇಕು ಅಂತ ಡಿಸೈಡ್‌ ಮಾಡಿದರೆ, ಏನಾದರೂ ಸರಿ, ಮಾಡಿ ಪಡೆದುಕೊಳ್ಳುವಂತಹ ಪಾತ್ರ. ಅದೊಂದು ಚಿತ್ರದ ಹೈಲೈಟ್‌. ಹಾಗೆಯೇ “ಭಜರಂಗಿ’ ಲೋಕಿ ಅವರೂ ಇಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಅವರದೂ ಒಂದು ವಿಶೇಷತೆ ಇಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಚಿರಂಜೀವಿ ದೀಪಕ್‌.

ಅಂದಹಾಗೆ, ಚಿತ್ರದಲ್ಲಿ ನಿರಂಜನ್‌ ಒಡೆಯರ್‌ ಹಾಗು ಕಾರುಣ್ಯರಾಮ್‌ ಇಬ್ಬರೂ ಸಾಫ್ಟ್ವೇರ್‌ ಕ್ಷೇತ್ರದವರಾಗಿದ್ದು, ಕೆಲ ಅನಿರೀಕ್ಷಿತ ಘಟನೆಗಳಿಗೆ ಅವರು ಸಿಲುಕುತ್ತಾರೆ. ಅದರಿಂದ ಅವರ ಹೊರಬರುತ್ತಾರೋ, ಇಲ್ಲವೋ ಅನ್ನೋದು ಕಥೆ. ಇಲ್ಲಿ ಸಸ್ಪೆನ್ಸ್‌ ಜೊತೆ ಥ್ರಿಲ್ಲರ್‌ ಕೂಡ ಇದೆ. ಹಾಗೆಯೇ ಹಾರರ್‌ ಕೂಡ ಚಿತ್ರದ ಇನ್ನೊಂದು ಅಂಶ. ಸಿನಿಮಾ ಮುಗಿಯುವ ಹೊತ್ತಿಗೆ, ಇದು ಹಾರರ್‌ ಸಿನಿಮಾನಾ ಎಂಬಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದ್ದು, ವಿಎಫೆಕ್ಟ್ ಇಡೀ ಚಿತ್ರವನ್ನು ಆವರಿಸಿಕೊಂಡಿದೆ.

ಇನ್ನು, ಚಿತ್ರದ ಶೀರ್ಷಿಕೆಗೆ “ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂಬ ಅಡಿಬರಹವಿದೆ. ಇಲ್ಲಿ ಹೋರಾಟದ ಹಾದಿ ಕುರಿತ ವಿಷಯವಿದೆ. ಬದುಕಿನ ಮೌಲ್ಯಗಳಿವೆ. ಚಿತ್ರವನ್ನು ಅಕ್ಷರ ಫಿಲಂಸ್‌ ವಿತರಣೆ ಮಾಡುತ್ತಿದ್ದು, ಚಿತ್ರಕ್ಕೆ ಪ್ರದೀಪ್‌ ವರ್ಮಾ ಸಂಗೀತ ನೀಡಿದ್ದಾರೆ. ನಾಗಾರ್ಜುನ್‌ ಛಾಯಾಗ್ರಹಣ ಮಾಡಿದ್ದಾರೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಒಂದು ಹಾಡಿದೆ.

Advertisement

ಉಳಿದಂತೆ “ಕೆಜಿಎಫ್’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ವಿಕ್ರಮ್‌, ಈ ಚಿತ್ರದಲ್ಲೊಂದು ಭರ್ಜರಿ ಫೈಟ್‌ ಮಾಡಿದ್ದಾರೆ. ಮಾನಸಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ತಯಾರಾಗಿರುವ “ರಣಭೂಮಿ’ಗೆ “ಕರ್ವ’ ಖ್ಯಾತಿಯ ವೆಂಕಿ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್‌ಭಟ್‌, ಡ್ಯಾನಿ ಕುಟ್ಟಪ್ಪ, ಮುನಿ ಸೇರಿದಂತೆ ಹಲವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next