Advertisement

ಗ್ಲಾಮರ್‌ ಇಲ್ಲದ ಗ್ರಾಮರ್‌ ಇರೋ ಪಾತ್ರ ಬೇಕು

01:17 PM Sep 06, 2018 | Team Udayavani |

ಸುದ್ದಿ ವಾಚಕಿಯಾಗಿ ಗಮನಸೆಳೆದಿದ್ದ ಶೀತಲ್‌ ಶೆಟ್ಟಿ, ಆ ಕೆಲಸಕ್ಕೆ ಗುಡ್‌ಬೈ ಹೇಳಿ ಗಾಂಧಿನಗರದ ಅಂಗಳಕ್ಕೆ ಜಿಗಿದಿದ್ದೇ ತಡ, ಸದ್ದಿಲ್ಲದೆಯೇ ಒಂದರ ಮೇಲೊಂದು ಸಿನಿಮಾ ಮಾಡುತ್ತಲೇ ಬಂದಿದ್ದಾರೆ. ಈವರೆಗೆ ಪತ್ರಕರ್ತೆಯಾಗಿ, ಡಾಕ್ಟರ್‌ ಆಗಿ, ತನಿಖಾಧಿಕಾರಿಯಾಗಿ, ಅಕ್ಕನಾಗಿ, ಗೆಳತಿಯಾಗಿ ಸಾಕಷ್ಟು ಪಾತ್ರ ನಿರ್ವಹಿಸಿರುವ ಶೀತಲ್‌ ಶೆಟ್ಟಿ, ಇದೇ ಮೊದಲ ಸಲ “ಪತಿಬೇಕು ಡಾಟ್‌ಕಾಮ್‌’ ಚಿತ್ರದಲ್ಲಿ ದಿಟ್ಟ ಹೆಣ್ಣಿನ ಪಾತ್ರ ಮಾಡಿದ್ದಾರೆ. ಅದೊಂದು ರೀತಿಯ ರೆಬೆಲ್‌ ಪಾತ್ರ ಎಂಬುದು ಶೀತಲ್‌ ಶೆಟ್ಟಿ ಮಾತು. ಅಂದಹಾಗೆ, “ಪತಿಬೇಕು ಡಾಟ್‌ಕಾಮ್‌’ ಈ ವಾರ ತೆರೆಗೆ ಬರುತ್ತಿದೆ. ಆ ಕುರಿತು “ಉದಯವಾಣಿ’ ಜೊತೆ ಶೀತಲ್‌ ಹೇಳಿದ್ದಿಷ್ಟು.

Advertisement

“ಇದು ಸಂಪೂರ್ಣ ಹೆಣ್ಣಿನ ಮೇಲೆ ಸಾಗುವ ಸಿನಿಮಾ. ಹಾಸ್ಯದ ಜೊತೆಗೆ ಆಕೆಯ ನೋವು, ನಲಿವು, ಸಮಸ್ಯೆ ಇತ್ಯಾದಿ ವಿಷಯಗಳು ಇಲ್ಲಿ ಅಡಕವಾಗಿವೆ. ಇದರ ಜೊತೆಯಲ್ಲೇ ಮದುವೆ ವಿಷಯ ಸಿನಿಮಾದ ಹೈಲೆಟ್‌ಗಳಲ್ಲೊಂದು. ನಿರ್ದೇಶಕ ರಾಕೇಶ್‌ ಅವರ ಯೋಚನೆ ಮತ್ತು ಕಲ್ಪನೆ ಸದಾ ಕಾಲಕ್ಕೂ ಇರುವಂತಿದೆ. ಹಾಗಾಗಿ “ಪತಿಬೇಕು ಡಾಟ್‌ಕಾಮ್‌’ ಎಲ್ಲಾ ಕಾಲಕ್ಕೂ ಸಲ್ಲುವ ಚಿತ್ರ ಎಂಬುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ಶೀತಲ್‌ ಶೆಟ್ಟಿ.

ಇಲ್ಲಿ ಮದುವೆ ಆಗದ ಸುಮಾರು 30 ವರ್ಷದ ಆಸುಪಾಸಿನ ಹುಡುಗಿ ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾಳೆ, ಅವಳಿಗಿನ್ನೂ ಮದುವೆ ಆಗಿಲ್ಲ ಅಂತ ತಿಳಿದಾಗ ಸಮಾಜ ಏನೆಲ್ಲಾ ಯೋಚನೆ ಮಾಡುತ್ತೆ, ಹೇಗೆಲ್ಲಾ ಆಕೆಯನ್ನು ನೋಡುತ್ತೆ ಎಂಬುದು ಕಥೆಯಂತೆ. “ಈ ಪಾತ್ರದಲ್ಲಿ ಸಾಕಷ್ಟು ಏರಿಳಿತಗಳಿವೆ. ಹಿಂದಿನ ಚಿತ್ರಗಳ ಪಾತ್ರಗಳಿಗೆ ಹೋಲಿಸಿದರೆ, ಇದೊಂದು ಹೊಸದಾದ ಪಾತ್ರ. ಮೊದಲ ಸಲ, ಇಂಥದ್ದೊಂದು ಪಾತ್ರ ಮಾಡಿದ್ದೇನೆ. ಈಗಿನ ಎಲ್ಲಾ ಪೋಷಕರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಏನೆಲ್ಲಾ ಯೋಚಿಸುತ್ತಾರೆ, ಮದ್ವೆಗೆ ಬಂದ ಹುಡುಗಿ ಹೇಗೆಲ್ಲಾ ಕನಸು ಕಾಣುತ್ತಾಳೆ, ಅವಳಿಗೆ ಮದ್ವೆ ಆಗಿಲ್ಲ ಅಂತ ಅಂದಾಗ ಆಕೆಯೊಳಗಿನ ತಳಮಳ ಹೇಗೆಲ್ಲಾ ಇರುತ್ತೆ ಎಂಬುದನ್ನೇ ಒಂದು ಹಾಸ್ಯದ ಮೂಲಕ ಗಂಭೀರ ವಿಷಯ ಹೇಳಲಾಗಿದೆ. ಚಿತ್ರದಲ್ಲಿ ಆಕೆಯ ಅಪ್ಪ, ಅಮ್ಮ ಅದಾಗಲೇ ಸುಮಾರು 65 ಹುಡುಗರನ್ನು ನೋಡಿದ್ದಾರೆ. ಆದರೆ, ಅವರೆಲ್ಲರೂ ಆಕೆಯನ್ನು ರಿಜೆಕ್ಟ್ ಮಾಡಿದ್ದಾರೆ. ಕಾರಣ ಏನೆಂಬುದೇ ಸಸ್ಪೆನ್ಸ್‌. ಇಲ್ಲೂ ವರದಕ್ಷಿಣೆ ಪಿಡುಗು ವಿಷಯವಿದೆ. ಮಿಡ್ಲ್ಕ್ಲಾಸ್‌ ಜನರ ಸಂಕಟವಿದೆ. ಅದನ್ನೆಲ್ಲಾ ನೋಡುವ ಹುಡುಗಿ ತಾನು ಮದ್ವೆ ಆಗಬೇಕಾ ಅಂತ ಕೊಂಚ ಧಿಮಾಕು ಮಾಡ್ತಾಳೆ. ಎಲ್ಲದ್ದಕ್ಕೂ ತಲೆತಗ್ಗಿಸಿದರೆ ಹೇಗೆ ಎಂದು ಯೋಚಿಸಿ ರೆಬೆಲ್‌ ಆಗ್ತಾಳೆ. ಆಮೇಲೆ ಏನಾಗುತ್ತೆ ಎಂಬುದೇ ಕಥೆ’ ಎಂದು ವಿವರ ಕೊಡುತ್ತಾರೆ ಶೀತಲ್‌.

ಶೀತಲ್‌ ಶೆಟ್ಟಿ  ಗ್ರಾಮರ್‌ ಇರುವಂತಹ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರೇ ಹೇಳುವಂತೆ, “ಗ್ಲಾಮರ್‌ ಅಂದರೇನು ಎಂಬ ಐಡಿಯಾ ನನಗಿಲ್ಲ. ನನ್ನೊಳಗೊಂದು ವ್ಯಕ್ತಿತ್ವ ಇದೆ. ಅದು ಪವರ್‌ಫ‌ುಲ್‌ ಲೇಡಿ ಅನ್ನೋದು. ಅಂತಹ ಸ್ಟ್ರಾಂಗ್‌ ಲೇಡಿ ಪಾತ್ರ ನನಗಿಷ್ಟ. ಬರೀ, ಹುಡುಗಿಯಲ್ಲಿ ಸೊಂಟ, ಬಾಡಿ ಚೆನ್ನಾಗಿದೆಯಷ್ಟೇ ಅಲ್ಲ, ಅದರಾಚೆಗೂ ಹುಡುಗಿಯಲ್ಲಿ ಅದ್ಭುತ ವಿಚಾರಗಳಿವೆ. ಅಂತಹ ವಿಚಾರವನ್ನು ಹೊರಗೆ ತೆಗೆಯಬಹುದಾದ ಕಥೆ ಮತ್ತು ಪಾತ್ರ ಇದ್ದರೆ ಮಾಡ್ತೀನಿ. ಸದ್ಯಕ್ಕೆ “ಚೇಸ್‌’ ರಿಲೀಸ್‌ಗೆ ರೆಡಿಯಾಗುತ್ತಿದೆ. ಹೊಸಬರ “ಅಭಿಜ್ಞಾನ’ ಚಿತ್ರ ಕೂಡ ನಾಯಕಿ ಪ್ರಧಾನ ಸಿನಿಮಾ, “96′ ಚಿತ್ರದಲ್ಲೂ ನಾನೇ ಹೈಲೆಟ್‌. ಅದರಲ್ಲಿ ಸ್ಟ್ರಾಂಗ್‌ ವುಮೆನ್‌ ಪಾತ್ರವಿದೆ. “ಪತಿಬೇಕು ಡಾಟ್‌ ಕಾಮ್‌’ಚಿತ್ರ ನಿರೀಕ್ಷೆ ಹೆಚ್ಚಿಸಿದೆ’ ಎನ್ನುತ್ತಾರೆ ಶೀತಲ್‌.
 

Advertisement

Udayavani is now on Telegram. Click here to join our channel and stay updated with the latest news.

Next