Advertisement
ಚಳಿಗಾಲದಲ್ಲಿ ಮೂರು ಹೊತ್ತೂ ಉಣ್ಣೆಯ ಬಟ್ಟೆ ತೊಡಲು ಸಾಧ್ಯವಿಲ್ಲ. ಸ್ವೆಟರ್, ಜಾಕೆಟ್, ಕೋಟು ಅಥವಾ ಜರ್ಕಿನ್ ಎಲ್ಲಾ ತರಹದ ಉಡುಪಿನ ಜೊತೆ ಚೆನ್ನಾಗಿ ಕಾಣಿಸುವುದೂ ಇಲ್ಲ! ಹಾಗೆಂದು ಚಳಿಗಾಲದಲ್ಲಿ ನಡುಗುತ್ತಾ ಇರಲು ಸಾಧ್ಯವೇ? ಕೋಟು, ಜಾಕೆಟ್, ಜರ್ಕಿನ್‌ಗಳು ಪಾಶ್ಚಾತ್ಯ ಉಡುಗೆಗಳ ಜೊತೆ ಚೆನ್ನಾಗಿ ಕಾಣಿಸುತ್ತವೆ. ಆದರೆ ಸಾಂಪ್ರದಾಯಿಕ ಅಂದರೆ, ಇಂಡಿಯನ್ ಬಟ್ಟೆಗಳ ಜೊತೆ ಅಷ್ಟಕ್ಕಷ್ಟೆ. ಅದೇ ಸ್ವೆಟರ್ ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಎರಡೂ ಉಡುಗೆಗಳ ಜೊತೆ ಚೆನ್ನಾಗೇ ಕಾಣಿಸುತ್ತದೆ. ಆದರೆ ಸ್ವೆಟರ್‌ನಲ್ಲಿ ಜಿಪ್ ಅಥವಾ ಬಟನ್(ಗುಂಡಿ)ಗಳು ಇಲ್ಲದ ಕಾರಣ, ಅವುಗಳನ್ನು ತಲೆ ಮತ್ತು ತೋಳುಗಳ ಮೂಲಕವೇ ಧರಿಸಬೇಕು. ಪ್ರತೀ ಬಾರಿ ಹಾಕುವುದು-ತೆಗೆಯುವುದು ಕಷ್ಟಕರವಾಗಿರುವುದರಿಂದ ಸ್ವೆಟರ್‌ಗಳನ್ನು ಪಾಶ್ಚಾತ್ಯ ಉಡುಗೆಯ ಜೊತೆ ಅಂಗಿಯಂತೆ ಲಂಗ, ಪ್ಯಾಂಟ್ ಅಥವಾ ಶಾರ್ಟ್ಸ್ ಜೊತೆಯೇ ಮಹಿಳೆಯರು ತೊಡಲು ಇಷ್ಟ ಪಡುತ್ತಾರೆ. ಆದ್ದರಿಂದ ಇವೆಲ್ಲಕ್ಕೆ ಇರುವ ಒಳ್ಳೆಯ ಉಪಾಯ ಶಾಲು ಧರಿಸುವುದು. ಪಾಶ್ಚಾತ್ಯ ಮತ್ತು ಸಂಪ್ರದಾಯಿಕ ಎರಡು ಉಡುಗೆಗಳ ಜೊತೆ ತೊಡಬಲ್ಲ ಈ ಧಿರಿಸು, ಹೊದ್ದುಕೊಳ್ಳಲು ತುಂಬಾ ಸರಳ! ಬ್ಯಾಗಿನಲ್ಲಿ ಕೊಂಡೊಯ್ಯಲೂ ಸುಲಭ!.
Related Articles
ಪರ್ಶಿಯನ್ ಭಾಷೆಯಲ್ಲಿ, ಉಣ್ಣೆಯಿಂದ ಮಾಡಿದ್ದು ಎಂಬುದಕ್ಕೆ ಪಸ್ಮಿàನಾ ಎನ್ನುತ್ತಾರೆ. ಹಾಗಾಗಿ ಇದು ಪಶ್ಮೀನಾ ಶಾಲಾಯಿತು. ಅದೇ ಯುರೋಪಿಯನ್ ದೇಶಗಳಲ್ಲಿ ಈ ಪಶ್ಮೀನಾ ಶಾಲನ್ನು ಕಾಶ್ಮೀರ್ ಎಂದು ಕರೆಯಲಾಗುತ್ತದೆ!. ಏಕೆಂದರೆ ಇಂಥಾ ಶಾಲನ್ನು ಅವರು ಮೊದಲಿಗೆ ಕಾಶ್ಮೀರದಲ್ಲೇ ನೋಡಿದ್ದು. ಈ ಶಾಲುಗಳ ಉಲ್ಲೇಖ 3ನೇ ಶತಮಾನ ಹಾಗೂ ಕ್ರಿಸ್ತಶಕ 11ನೇ ಶತಮಾನದ ಆಫ್ಘಾನ್ ಪುಸ್ತಕಗಳಲ್ಲಿ ಇವೆ! ರಾಜಮನೆತನದವರು ಈ ಶಾಲುಗಳನ್ನು ತೊಡುತ್ತಿದ್ದರು. ಭಾರತ, ಬಹಳಷ್ಟು ರಾಷ್ಟ್ರಗಳಲ್ಲಿ ಪಶ್ಮೀನಾ ಶಾಲು ಸ್ಟೇಟಸ್ ಸಿಂಬಲ್!
Advertisement
ಸಾಂಪ್ರದಾಯಿಕ ಪಶ್ಮೀನಾ ಶಾಲು(70*200ಸೆ.ಮೀ) ತಯಾರಿಸಲು ಹೆಚ್ಚು-ಕಡಿಮೆ 180 ಗಂಟೆಗಳು ಬೇಕಾಗುತ್ತದೆ. ಆದ್ದರಿಂದಲೇ ಪಶ್ಮೀನಾ ಶಾಲಿನ ಬೆಲೆ ದುಬಾರಿ. ಅದೆಷ್ಟೋ ಮಾರಾಟಗಾರರು ಈ ಪಶ್ಮೀನಾ ಶಾಲಿನ ಹೆಸರಿನಲ್ಲಿ ಸಿಂತೆಟಿಕ್ ಫ್ಯಾಬ್ರಿಕ್‌ನಿಂದ ಮಾಡಿದ ಶಾಲನ್ನು ಕಡಿಮೆ ದರಕ್ಕೆ ಮಾರುತ್ತಾರೆ. ಹಾಗಾಗಿ ಕೊಂಡುಕೊಳ್ಳುವಾಗ ಎಚ್ಚರವಿರಲಿ. ಈ ಚಳಿಗಾಲದಲ್ಲಿ ಮತ್ತದೇ ಹಳೆ ಬೋರಿಂಗ್ ಸ್ವೆಟರ್ ಧರಿಸುವ ಬದಲು ಬಗೆಬಗೆಯ ಬಣ್ಣದ, ವಿನ್ಯಾಸದ ಪಶ್ಮೀನಾ ಶಾಲು ತೊಟ್ಟು ನೋಡಿ. ಅದೆಷ್ಟು ಆರಾಮದಾಯಕ ಎಂದರೆ ಮತ್ತೆಂದೂ ಸ್ವೆಟರ್ ತೊಡಲು ಇಷ್ಟ ಪಡಲಾರಿರಿ!.
ಅದಿತಿಮಾನಸ. ಕಿ.ಎಸ್