Advertisement

ಬಿಜೆಪಿ ವಿಸ್ತಾರಕರಿಗೆ ಹೆಚ್ಚಿನಜವಾಬ್ದಾರಿ ವಹಿಸಿದ “ಶಾ’

08:45 AM Aug 14, 2017 | Team Udayavani |

ಬೆಂಗಳೂರು: ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಲು ಬಿಜೆಪಿ ಹಮ್ಮಿಕೊಂಡಿರುವ ವಿಸ್ತಾರಕ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ, ವಿಸ್ತಾರಕರು ಮನೆ ಮನೆ ತಲುಪಿ ಕೇಂದ್ರ ಸರ್ಕಾರದ ಸಾಧನೆ ಮತ್ತು ರಾಜ್ಯ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಹೀಗಾಗಿ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕಾಗಿದ್ದು, ಪ್ರಸ್ತುತ ಒಂದು ಕ್ಷೇತ್ರದಲ್ಲಿ ಸಂಘಟನೆ ಬಗ್ಗೆ ಗಮನಹರಿಸುತ್ತಿರುವ ವಿಸ್ತಾರಕರು ಎರಡು ವಿಧಾನಸಭಾ ಕ್ಷೇತ್ರಗಳ ಹೊಣೆ ಹೊರಲು ಸಿದ್ಧರಾಗಬೇಕು ಎಂದು ಹೇಳಿದರು.

Advertisement

ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮ ಶತಮಾನ ವರ್ಷ ನಿಮಿತ್ತ ಕನಿಷ್ಠ 1 ವರ್ಷ ವಿಸ್ತಾರಕರಾಗಿ ಕಾರ್ಯ ನಿರ್ವಹಿಸುತ್ತಿರುವ 82 “ಶತಾಬ್ದಿ ವಿಸ್ತಾರಕ’ರೊಂದಿಗೆ ತುಮಕೂರು ರಸ್ತೆಯಲ್ಲಿರುವ ಜಿಂದಾಲ್‌ ಪ್ರಕೃತಿ ಕೇಂದ್ರದ ಆವರಣದಲ್ಲಿ ಸಭೆ ನಡೆಸಿದ ಅವರು, ಕಳೆದ ಆರು ತಿಂಗಳಿನಿಂದ ಶತಾಬ್ದಿ ವಿಸ್ತಾರಕರು ಕೆಲಸ ಮಾಡುತ್ತಿದ್ದೀರಿ. ಜುಲೈನಲ್ಲಿ ಇದನ್ನೊಂದು ಆಂದೋಲನದ ರೀತಿ ನಡೆಸಿ ಬಹುತೇಕ ಬೂತ್‌ಗಳನ್ನು ತಲುಪಿದ್ದೀರಿ. ಇದಕ್ಕೆ ಉತ್ತಮ ಬೆಂಬಲವೂ ಸಿಕ್ಕಿದೆ ಎಂದು ಹೇಳಿದ ಅವರು, ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಹೊಸ ಪ್ರಯತ್ನಗಳೇನಾದರೂ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ವಿಸ್ತಾರಕರು ತಾವು ಕಳೆದ ಆರು ತಿಂಗಳಿನಿಂದ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಒಟ್ಟಾರೆ ಚಿತ್ರಣವನ್ನು ಶಾ ಅವರ ಮುಂದೆ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ಬೂತ್‌ ಕಮಿಟಿಗಳಲ್ಲಿರುವ ಎಲ್ಲ ಸದಸ್ಯರನ್ನು ಸಕ್ರಿಯಗೊಳಿಸಿ ಅವರೊಂದಿಗೆ ಕೆಲಸ ಮಾಡಬೇಕೆಂದು ಹೇಳಿದರು ಎಂದು ತಿಳಿದು ಬಂದಿದೆ.

ಭವನ ನಿರ್ಮಾಣ ಸಮಿತಿ ಸಭೆ: ನಂತರ, ರಾಜ್ಯ ಭವನ ನಿರ್ಮಾಣ ಸಮಿತಿಯೊಂದಿಗೆ ಚರ್ಚಿಸಿದ ಶಾ, ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷಕ್ಕೆ ಸ್ವಂತ ಕಟ್ಟಡ ನಿರ್ಮಾಣ ಕುರಿತಂತೆ ಆಗಿರುವ ಪ್ರಗತಿ ಬಗ್ಗೆ ಮಾಹಿತಿ  ಪಡೆದುಕೊಂಡರು. ಪ್ರಸ್ತುತ ರಾಜ್ಯದ 10 ಕಂದಾಯ ಜಿಲ್ಲೆಗಳಲ್ಲಷ್ಟೆ ಸ್ವಂತ ಕಟ್ಟಡದಲ್ಲಿ ಕಚೇರಿಗಳಿವೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆ 19 ಜಿಲ್ಲೆಗಳು ಸ್ವಂತ ಕಟ್ಟಡ ಹೊಂದಲಿವೆ ಎಂದು ಸಮಿತಿ ಸದಸ್ಯರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next