Advertisement

ಅಸ್ಪೃಶ್ಯರ ಮನವೊಲಿಕೆಗೆ ಶಾ ಕಸರತ್ತು

10:13 AM Feb 25, 2018 | |

ಕಲಬುರಗಿ: 2018ರ ಚುನಾವಣೆ ಆರಂಭಿಕ ಘಟ್ಟದ ಕಾವು ಏರತೊಡಗಿದೆ. ಅಂತೆಯೇ ಬಿಜೆಪಿ ಕೂಡ ತನ್ನ ವರಸೆಗಳನ್ನು ಬದಲಿಸಿಕೊಂಡಿದೆ. ಕೆ.ಎಸ್‌. ಈಶ್ವರಪ್ಪ ಅವರು ಹಿಂದುಳಿದವರನ್ನು ಓಲೈಸಿ ಹಿಂದೆ ಸರಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ದಲಿತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಅದರ ಬೆನ್ನು ಹತ್ತುತ್ತಲೇ ಈ ಭಾಗದ ಪ್ರಶ್ನಾತೀತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರ ಕೋಟೆಗೆ ಲಗ್ಗೆ ಇಡುವ ಲೆಕ್ಕಾಚಾರ ಹಾಕಿದ್ದಾರೆ.

Advertisement

ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ದಲಿತರು ಏನೆಲ್ಲ ಬಹಿರಂಗ ಹೇಳಿಕೆ ನೀಡಿದರೂ ಆಂತರ್ಯದಲ್ಲಿ ಖರ್ಗೆ ಅವರ ನಡೆಯನ್ನು ಬೆಂಬಲಿಸಿದ್ದಾರೆ. ಅದಕ್ಕೆ ಖರ್ಗೆ ಅವರ ರಾಜಕೀಯ ನಾಗಾಲೋಟವೇ ಸಾಕ್ಷಿ. ದಲಿತರೊಂದಿಗೆ ಹೆಚ್ಚು ಗುರುತಿಸಿಕೊಳ್ಳದೇ ಇದ್ದರೂ ಎಲ್ಲ ವರ್ಗಗಳ ಹಿತ ಕಾಯುತ್ತಿದ್ದರೂ ಮಲ್ಲಿಕಾರ್ಜುನ ಖರ್ಗೆ ಅವರು ದಲಿತರ ಪ್ರಮುಖ ಹಾಗೂ ಪ್ರಶ್ನಾತೀತ ನಾಯಕರ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಆದರೆ, ಕಲಬುರಗಿಯಲ್ಲಿ ಎಸ್‌ಸಿ ಸಮಾವೇಶ ಮಾಡುವ ಮೂಲಕ ಒಂದೆಡೆ ಬಿಜೆಪಿಯನ್ನು ಬಲಿಷ್ಠ ಮಾಡೋದು ಇನ್ನೊಂದೆಡೆ ಖರ್ಗೆ ಅವರ ಮತ ಬ್ಯಾಂಕ್‌ ಮೇಲೆ ದಾಳಿ ಮಾಡುವುದು ಎರಡು ಉದ್ದೇಶಗಳು ಸ್ಪಷ್ಟವಾಗತೊಡಗಿದೆ. ಆದರೆ, ಇಂತಹದೊಂದು ಪ್ರಯತ್ನಕ್ಕೆ ಬಿಜೆಪಿಯಲ್ಲಿನ ದಲಿತ ನಾಯಕರು ಒಲ್ಲದ ಮನಸ್ಸಿನಿಂದ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ. 

ವಾಸ್ತವದಲ್ಲಿ ಹೈಕದ 40 ವಿಧಾನಸಭಾ ಕ್ಷೇತ್ರಗಳಲ್ಲಿ 13 ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿವೆ. 2 ಬಲಗೈ, 7 ಎಡಗೈ ಮತ್ತು 2 ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ. ಒಟ್ಟು ಹೈಕದ ಆರು ಜಿಲ್ಲೆಗಳಲ್ಲಿ 1,12,86,343 ಜನಸಂಖ್ಯೆ ಇದೆ. ಇದರಲ್ಲಿ ಪುರುಷರು 57,24,589 ಮತ್ತು ಮಹಿಳೆಯರು 55,68,154 ಇದ್ದಾರೆ. ಇದರಲ್ಲಿ ಶೇ.22ರಷ್ಟು ದಲಿತರಿದ್ದಾರೆ ಎಂದು 2011ರ ಜನಗಣತಿ ದಾಖಲೆ ಹೇಳುತ್ತದೆ.

ಅಂದಾಜು 20ಲಕ್ಷಕ್ಕಿಂತ ಹೆಚ್ಚಿಗೆ ಇರುವ ದಲಿತರು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ಬಹುತೇಕ ನಿರ್ಣಾಯಕರೇ ಆಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಲ್ಲಿ 4ರಿಂದ 5 ಲಕ್ಷ ದಲಿತರಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಈ ಮತಗಳು ನಿರ್ಣಾಯಕವಾಗುತ್ತವೆ. ಇಂತಹ ದಟ್ಟ ಪರಿಸ್ಥಿತಿಯಲ್ಲಿ ದಲಿತರನ್ನು ಓಲೈಸುವ ತಂತ್ರಕ್ಕೆ ಅಮಿತ್‌ ಶಾ ಕೈ ಹಾಕಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಅದೂ ಅಲ್ಲದೆ, ಮೇಲ್ವರ್ಗದವರನ್ನು ಹೊರತು ಪಡಿಸಿ ಇದೇನು ದಲಿತರ ಕಡೆಗೆ ಬಿಜೆಪಿ ನಡೆಯುತ್ತಿದೆ. ಇದೇನು ತಂತ್ರವೋ ಅಥವಾ ನಿಜವೋ ಎನ್ನುವುದು ಈಗ ಕುತೂಹಲ ಹುಟ್ಟಿಸಿದೆ.

Advertisement

ಹೈದ್ರಾಬಾದ ಕರ್ನಾಟಕದಲ್ಲಿ ಬಳ್ಳಾರಿ ಮತ್ತು ಬೀದರ ಹೊರತು ಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಗಟ್ಟಿ ತಳವೂರಿದೆ. ಭದ್ರಕೋಟೆ ಎಂದೇ ಹೇಳಬೇಕು. ಇಂತಹ ಕೋಟೆ ಮೇಲೆ ಶಾ ಕಣ್ಣಿಟ್ಟಿರುವುದು ಸಹಜವಾದರೂ, ಅದಕ್ಕಾಗಿ ದಲಿತರನ್ನು ಬಳಕೆ ಮಾಡುತ್ತಿರುವುದು ಒಂದೆಡೆ ಸಾಮಾಜಿಕ ನ್ಯಾಯ ಮತ್ತು ಇನ್ನೊಂದೆಡೆ ಲೋಕಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರು ತಲುಪದಂತೆ ನೋಡಿಕೊಳ್ಳುವುದು ಆಗಿದೆ ಎಂದು ಸ್ವತಃ ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ.

ಎಡಗೈ ಮುಖಂಡರ ಕಡೆಗಣನೆ: ಹಾಗೆ ನೋಡಿದರೆ ಹೈದ್ರಾಬಾದ ಕರ್ನಾಟಕದ ಮೀಸಲು ಕ್ಷೇತ್ರಗಳಲ್ಲಿ ಬಲಗೈ ಮುಖಂಡರಿಗೆ ಸಹಜವಾಗಿ ಸ್ಪರ್ಧೆಗೆ ಅವಕಾಶ ಸಿಗುತ್ತದೆ. ಎಡಗೈ ಮುಖಂಡಿರಗೆ ಸ್ಪಲ್ಪ ಕಷ್ಟ ಸಾಧ್ಯ. ಅಲ್ಲದೆ, ನಿರ್ಲಕ್ಷ್ಯ ಮಾಡಲಾಗಿದೆ ಎಂದರೂ ತಪ್ಪಿಲ್ಲ. ಪ್ರಮುಖ ಪಕ್ಷಗಳ ಪೈಕಿ ಕಾಂಗ್ರೆಸ್‌ ಸ್ವಲ್ಪ ಸಾಮಾಜಿಕ ನ್ಯಾಯ ಪಾಲಿಸಿದೆ. ಬಿಜೆಪಿ ದಲಿತರು ಎಂದಾಗಲೆಲ್ಲ ಲಂಬಾಣಿಗರು, ಭೋವಿ ಜನಾಂಗಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದರಿಂದಾಗಿ ಎಡಗೈ ಮುಖಂಡರು ಸಹಜವಾಗಿ ಪ್ರತಿ ಚುನಾವಣೆಯಲ್ಲಿ ತಮ್ಮ ಹಕ್ಕಿಗಾಗಿ ಕೂಗು ಎಬ್ಬಿಸುತ್ತಲೇ ಇದ್ದಾರೆ. 2018ರ ಚುನಾವಣೆ ಹೊರತಾಗಿಲ್ಲ. ಇನ್ನೂ ಬಿಜೆಪಿ ಮತ್ತು ಜೆಡಿಎಸ್‌ಗೆ ಮೀಸಲು ಕ್ಷೇತ್ರ ಎಂದರೆ ಒಂದರ್ಥದಲ್ಲಿ ಅಲರ್ಜಿ ಎನ್ನುವಂತಾಗಿದೆ. ಲೆಕ್ಕಾಚಾರ ಮತ್ತು ಒತ್ತಡದ ಆಧಾರದಲ್ಲಿ ಟಿಕೆಟ್‌ಗಳನ್ನು ಕೇವಲ ಒಂದೋ ಅಥವಾ ಎರಡೋ ಜಾತಿಗೆ ಹೆಚ್ಚು ನೀಡಲಾಗುತ್ತಿದೆ.

ಆದರೆ, ನಿರ್ಲಕ್ಷ್ಯವನ್ನು ಬಳಕೆ ಮಾಡಿಕೊಳ್ಳಲು ಹವಣಿಸಿರುವ ಅಮಿತ್‌ ಶಾ ಅವರು ಮೀಸಲು ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ ಹಿಡಿತ ಸಡಿಲು ಮಾಡಲು ಸಮಾವೇಶ ಆಯೋಜಿಸಿ ತಂತ್ರ ಹೂಡಿದ್ದಾರೆ. ಇದು ಎಷ್ಟು ಕೆಲಸ ಮಾಡುತ್ತದೆ ಎನ್ನುವುದು ಫಲಿತಾಂಶ ಆಧರಿಸಿದೆ.

ಕಲಬುರಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2.06 ಲಕ್ಷ ಬಲಗೈ, 1.85 ಲಂಬಾಣಿ, 1.10 ಸಾವಿರ ಎಡಗೈ ಮತಗಳಿವೆ. ಯಾದಗಿರಿಯಲ್ಲಿ ಬಲಗೈ 50 ಸಾವಿರ, 88 ಲಂಬಾಣಿ ಮತ್ತು 1ಲಕ್ಷ ಬಲಗೈ ಮತದಾರರಿದ್ದಾರೆ. ಈ ಮತಗಳು ಹಂಚಿಕೆಯಾದರೆ ಖರ್ಗೆ ಅವರು ಲೋಕಸಭೆ ತಲುಪಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿ ಲೆಕ್ಕಾಚಾರ. ಕಳೆದ ಬಾರಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರು ಲಂಬಾಣಿ ಮತದಾರರ ಒಲೈಕೆ ಸಾಧ್ಯವಾದ ಹಿನ್ನೆಲೆಯಲ್ಲಿ ಗೆಲುವಿನ ರುಚಿ ಉಂಡಿದ್ದು ಇಲ್ಲಿ ಸ್ಮರಣೀಯ

ಬಿಜೆಪಿ ಗೆಲುವು ಖಚಿತ: ಪಾಟೀಲ
 ಸೇಡಂ:
ಭಾರತೀಯ ಜನತಾ ಪಕ್ಷದ ಚಾಣಕ್ಯ ಎಂದು ಗುರುತಿಸಿಕೊಂಂಡಿರುವ ಅಮಿತ ಶಾ ಅವರು ತೆರಳಿದ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೇಡಂ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ವಿಶ್ವಾಸ ವ್ಯಕ್ತಪಡಿಸಿದರು.
 
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಾ ಕೆಲಸ ಮಾಡಲಿದ್ದಾರೆ. ಈ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಕಮಲ ಅರಳಿಸುವ ಯೋಜನೆಗೆ ಸೇಡಂನಿಂದಲೇ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ನವಶಕ್ತಿ ಸಮಾವೇಶಕ್ಕೆ ಸೇಡಂ ಮತ್ತು ಚಿತ್ತಾಪುರದ ಒಟ್ಟು 505 ಬೂತ್‌ಗಳ 4545 ಜನ ಸಕ್ರಿಯ ಕಾರ್ಯಕರ್ತರು ಆಗಮಿಸಲಿದ್ದಾರೆ. ಅವರೊಂದಿಗೆ ಅಮಿತ್‌ ಶಾ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮ ಮತ್ತು ನೀತಿಗಳ ಕುರಿತು ಸುದೀರ್ಘ‌ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು. 

ಫೆ.25ರಂದುಯಾನಾಗುಂದಿ ಸುಕ್ಷೇತ್ರ ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನ ಪಡೆದು, ಅಲ್ಲಿ ಕೋಲಿ ಸಮಾಜದವರೊಂದಿಗೆ ಸಂವಾದ ನಡೆಸಲಿದ್ದಾರೆ. ಫೆ. 26ರಂದು ಮಧ್ಯಾಹ್ನ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ತಟದಲ್ಲಿ ನೆಲೆಸಿರುವ ಟೀಕಾಚಾರ್ಯರ ಮೂಲ ವೃಂದಾವನಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ನಂತರ ಕಲಬುರಗಿಗೆ ರಸ್ತೆ ಮಾರ್ಗವಾಗಿ ತೆರಳಿ ಮತ್ತೆ ಹೆಲಿಕಾಪ್ಟರ್‌ ಮೂಲಕ ಸೇಡಂಗೆ ಬಂದು ಮಾತೃಛಾಯಾ ಆವರಣದಲ್ಲಿ ನಡೆಯುವ ನವಶಕ್ತಿ ಸಮಾವೇಶಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು. 

ಪ್ರತಿ ಬೂತ್‌ನಿಂದ ಆಗಮಿಸುವ 9 ಜನರಿಗೆ ಪಾಸ್‌ ವಿತರಿಸಲಾಗಿದೆ. ಅವರಿಗಾಗಿ ವೇದಿಕೆಯಲ್ಲಿ ವಿಶೇಷ ಸ್ಥಳ ನಿಗದಿಮಾಡಲಾಗಿದೆ. ಇನ್ನುಳಿದಂತೆ ಕಾರ್ಯಕರ್ತರಿಗಾಗಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಒಟ್ಟು 10 ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಸೇರಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ನಾಗಪ್ಪ ಕೊಳ್ಳಿ, ನಗರಾಧ್ಯಕ್ಷ ಅನೀಲ ಐನಾಪುರ, ಸಮಾವೇಶ ಉಸ್ತುವಾರಿ ರಾಜಶೇಖರ ನಿಲಂಗಿ, ವಿಸ್ತಾರಕ ಸಾಗರ ಬಿರಾದಾರ, ರಾಜ್ಯ ಪರಿಷತ್‌ ಸದಸ್ಯ ವಿಶ್ವನಾಥರೆಡ್ಡಿ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಾಗರೆಡ್ಡಿ ದೇಶಮುಖ, ಪ್ರಮುಖರಾದ ಯಕ್ಬಾಲಖಾನ್‌, ಬಸವರಾಜ ರೆವಗೊಂಡ, ಮದುಸೂಧನರೆಡ್ಡಿ ಪಾಟೀಲ, ನಾಗೇಂದ್ರಪ್ಪ ದುಗನೂರ, ಶರಣರೆಡ್ಡಿ ಜಿಲ್ಲೆಡಪಲ್ಲಿ, ನಾಗಭೂಷಣರೆಡ್ಡಿ ಪಾಟೀಲ, ಜಗದೇವಪ್ಪ ನಾಚವಾರ, ಮಲ್ಲಿಕಾರ್ಜುನ ಕೊಡದೂರ, ಮಲ್ಲಿಕಾರ್ಜುನ ಪಾಟೀಲ ಭೂತಪೂರ, ಗೋವಿಂದ ಮುಡಗುಲ್‌, ರಾಘವೇಂದ್ರ ಮೆಕ್ಯಾನಿಕ್‌, ರವಿ ಭಂಟನಹಳ್ಳಿ, ಸಂಗಪ್ಪ ಕುಂಬಾರ, ಅನೀಲ ರನ್ನೇಟ್ಲಾ, ರೇವಣಸಿದ್ದ ಬಿರಾದರ, ಪರಮೇಶ್ವರ ಸುಲೇಪೇಟ ಇದ್ದರು. 

ಸೂರ್ಯಕಾಂತ ಎಂ. ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next