Advertisement

ತರೂರ್‌ ತಾಲಿಬಾನ್‌ ವಿವಾದ

06:00 AM Jul 19, 2018 | Team Udayavani |

ತಿರುವನಂತಪುರ/ನವದೆಹಲಿ: ಬಿಜೆಪಿ “ಹಿಂದೂ ಪಾಕಿಸ್ತಾನ’ ಸೃಷ್ಟಿಸಲು ಮುಂದಾಗುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕ ಮತ್ತೂಂದು ಎಡವಟ್ಟು ಮಾಡಿಕೊಂಡಿದ್ದಾರೆ. ತಿರುವನಂತಪುರದಲ್ಲಿರುವ ತಮ್ಮ ಕಚೇರಿಯನ್ನು ಬಿಜೆಪಿಯ ಯುವ ಮೋರ್ಚಾ ಧ್ವಂಸ ಮಾಡಿದ್ದಕ್ಕೆ ಬುಧವಾರ ಪ್ರತಿಕ್ರಿಯೆ ನೀಡಿದ ತರೂರ್‌ “ಹಿಂದೂವಾದವನ್ನು ತಾಲಿಬಾನೀಕರಣ ಆಗಿಸುವ ಪ್ರಕ್ರಿಯೆ ಶುರುವಾಗಿದೆಯೇ’? ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಮತ್ತು ಶಶಿ ತರೂರ್‌ ನಡುವೆ ವಾಗ್ವಾದ ನಡೆದಿದೆ.

Advertisement

ಮತ್ತೂಮ್ಮೆ ವಿವಾದಿತ ಹೇಳಿಕೆ: ತಮ್ಮನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಲಾಗುತ್ತಿದೆ ಎಂದು ತರೂರ್‌ ಅಲವತ್ತುಕೊಂಡಿದ್ದಾರೆ. “ನಾನು ಹಿಂದು ಅಲ್ಲ, ನಾನು ಭಾರತದಲ್ಲಿ ವಾಸಿಸಬಾರದು ಎಂದು ನಿರ್ಧರಿಸುವ ಅಧಿಕಾರ ವನ್ನು ಅವರಿಗೆ ಕೊಟ್ಟವರು ಯಾರು? ಬಿಜೆಪಿಯ ಹಿಂದು ರಾಷ್ಟ್ರ ಎಂಬ ಕಲ್ಪನೆಯೇ ಅಪಾಯಕಾರಿ. ಇದು ಈ ದೇಶವನ್ನೇ ನಾಶಗೊಳಿಸುತ್ತದೆ. ಹಿಂದು ವಾದವನ್ನು  ತಾಲಿಬಾನ್‌ ಆಗಿಸುವ ಪ್ರಕ್ರಿಯೆ ಶುರುವಾಗಿದೆಯೇ ? ಎಂದು ತರೂರ್‌ ಪ್ರಶ್ನಿಸಿದ್ದಾರೆ.

ಚಕಮಕಿ: ತಮ್ಮ ಕಚೇರಿ ಮೇಲಿನ ಮೇಲಿನ ದಾಳಿಗೆ ಸಂಬಂಧಿಸಿ ಲೋಕಸಭೆಯಲ್ಲಿ ಮಾತಾಡಿದ ಶಶಿ ತರೂರ್‌, ಇದು ದೇಶವಿರೋಧಿಗಳ ಕೃತ್ಯ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ತರೂರ್‌ ಕಚೇರಿಯ ಮೇಲೆ ನಡೆದ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ರಾಜ್ಯ ಸರ್ಕಾರದ್ದು. ಇದರಲ್ಲಿ ಕೇಂದ್ರ ಮಧ್ಯಪ್ರವೇಶಿಸಲಾಗದು ಎಂದಿದ್ದಾರೆ. ಅಷ್ಟೇ ಅಲ್ಲ, ದಾಳಿ ರಾಜ್ಯ ಸರ್ಕಾರ ಪ್ರೇರಿತವಾಗಿದ್ದು, ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಕೃತ್ಯ ಎಂದರು. ಈ ವೇಳೆ ಕಾಂಗ್ರೆಸ್‌ ಮುಖಂಡರು ಮತ್ತು ಅನಂತ್‌ ಕುಮಾರ್‌ ಮಧ್ಯೆ ತೀವ್ರ ವಾಗ್ಧಾಳಿ ನಡೆಯಿತು. ಅಲ್ಲದೆ ಪಕ್ಷಗಳ ಹೆಸರನ್ನು ಡೆಪ್ಯುಟಿ ಸ್ಪೀಕರ್‌ ತಂಬಿದೊರೈ ಕೈಬಿಟ್ಟರು.

ಈ ಮಧ್ಯೆ ತರೂರ್‌ ಹೇಳಿಕೆಯನ್ನು ವಿರೋಧಿಸಿದ ಕೇಂದ್ರ ಸಚಿವ ಅಶ್ವಿ‌ನಿ ಚೌಬೆ, ತರೂರ್‌ಗೆ  ಮರೆವಿನ ರೋಗ ಉಂಟಾಗಿದೆ. ಅವರು ಭಾರತೀಯನೇ ಅಥವಾ ತಾಲಿಬಾನ್‌ ವ್ಯಕ್ತಿಯೇ ಎಂದು ತರೂರ್‌ ಸ್ಪಷ್ಟಪಡಿಸಲಿ ಎಂದಿದ್ದಾರೆ.

ಕನ್ನಡ ಮಾತಾಡಿದ ರಾಜ್ಯಸಭೆ ಸಭಾಪತಿ
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಬುಧವಾರ ಮೇಲ್ಮನೆಯಲ್ಲಿ ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ಮಾತನಾಡಿದ್ದಾರೆ. ಕನ್ನಡ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೆಲ ವಾಕ್ಯಗಳನ್ನು ಓದಿದರು. ಇದರ ಜತೆಗೆ ಕೊಂಕಣಿ, ದೋಗ್ರಿ, ಕಾಶ್ಮೀರಿ, ಸಂತತಿ ಮತ್ತು ಸಿಂಧಿ ಭಾಷೆಗಳಲ್ಲಿಯೂ ರಾಜ್ಯಸಭೆ ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಬಗ್ಗೆ ಸಭಾಪತಿ  ವೆಂಕಯ್ಯ ನಾಯ್ಡು ಘೋಷಣೆ ಮಾಡಿದ್ದಾರೆ. ನಿಗದಿತ ಭಾಷೆಯಲ್ಲಿ ಮಾತನಾಡುವ ಮೊದಲು ಸದಸ್ಯರು ಸೂಚನೆ ನೀಡಬೇಕಾಗುತ್ತದೆ. ಇದೊಂದು ಸ್ವಾಗತಾರ್ಹ ಪ್ರಯತ್ನ ಎಂದು ಹೇಳಿದ ಬಿಜೆಪಿ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಸಂಸ್ಕೃತಕ್ಕೂ ಇದೇ ರೀತಿಯ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Advertisement

ತಾಲಿಬಾನ್‌ ಬಲವಂತ ಮಾಡುತ್ತದೆ. ಆದರೆ ನಾವು ಅವರನ್ನು ಬಲವಂತಪಡಿಸುತ್ತಿಲ್ಲ. ಸಲಹೆ ನೀಡುತ್ತಿದ್ದೇವೆ ಅಷ್ಟೇ. ಪಾಕಿಸ್ತಾನ ದಲ್ಲಿ ಅವರ ಗೆಳತಿ ಇದ್ದಾರೆ ಹಾಗೂ ಐಎಸ್‌ಐ ಇದೆ. ಅವರಿಗೆ ಪಾಕಿಸ್ತಾನವೇ ಆರಾಮದಾಯಕ ವಾಗಿರುತ್ತದೆ.
ಸುಬ್ರಮಣಿಯನ್‌ ಸ್ವಾಮಿ, ರಾಜ್ಯಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next