ನವದೆಹಲಿ: ಭಾರತದಲ್ಲಿ 59 ಚೀನಿ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ನಂತರ ದೇಸಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಶೇರ್ ಚಾಟ್ ಬರೋಬ್ಬರಿ 15 ಮಿಲಿಯನ್ ಡೌನ್ ಲೋಡ್ ಕಂಡಿದೆ. ಮಾತ್ರವಲ್ಲದೆ ಸರಾಸರಿ ಗಂಟೆಯೊಂದಕ್ಕೆ 5 ಲಕ್ಷ ಇನ್ ಸ್ಟಾಲ್ ಕಾಣುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಚೀನಾದ ಆ್ಯಪ್ ಗಳನ್ನು ನಿಷೇಧಿಸುವ ಕ್ರಮವನ್ನು ಬೆಂಬಲಿಸುವ 1 ಲಕ್ಷಕ್ಕೂ ಅಧಿಕ ಪೋಸ್ಟ್ ಗಳು ಶೇರ್ ಚಾಟ್ ನಲ್ಲಿ ಪೋಸ್ಟ್ ಆಗಿವೆ. ಮಾತ್ರವಲ್ಲದೆ 1 ಮಿಲಿಯನ್ ಬಳಕೆದಾರರು ಪೋಸ್ಟ್‌ಗಳನ್ನು ಇಷ್ಟಪಟ್ಟರೆ, ಅರ್ಧ ಮಿಲಿಯನ್ ಜನರು ಇದನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡಿದ್ದಾರೆ.
ಸದ್ಯ ಶೇರ್ ಚಾಟ್ ನಲ್ಲಿ 60 ಮಿಲಿಯನ್ ಸಕ್ರೀಯ ಬಳಕೆದಾರರಿದ್ದು, ಭಾರತದ 15 ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ. ಇಲ್ಲಿನ 1 ಬಿಲಿಯನ್ ಪೋಸ್ಟ್ ಗಳು ವಾಟ್ಸಾಪ್ ಗೆ ಶೇರ್ ಆಗುತ್ತವೆ. ಪ್ರತಿ ಬಳಕೆದಾರರು 25 ನಿಮಿಷಗಳ ಕಾಲ ತಮ್ಮನ್ನು ಈ ಆ್ಯಪ್ ನಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೊಸ ಅಂಕಿ ಅಂಶಗಳು ತಿಳಿಸಿವೆ. ಕಂಪೆನಿ ಪ್ರಕಾರ ಸದ್ಯ 150+ ಮಿಲಿಯನ್ ನೋಂದಾಯಿತ ಬಳಕೆದಾರರಿದ್ದಾರೆ.
ಶೇರ್ ಚಾಟ್ ಮಾತ್ರವಲ್ಲದೆ ಟಿಕ್ ಟಾಕ್ ಪರ್ಯಾಯ ಎಂದೇ ಗುರುತಿಸಿಕೊಂಡಿದ್ದ ಭಾರತದ ಚಿಂಗಾರಿ ಆ್ಯಪ್ ಗಂಟೆಯೊಂದಕ್ಕೆ 1,00,000 ಡೌನ್ ಲೋಡ್ ಕಂಡಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಬೆಂಗಳೂರು ಮೂಲದ ಡೆವಲಪರ್ ಗಳು ಅಭಿವೃದ್ಧಿಪಡಿಸಿದ ಸಂಪೂರ್ಣ ಸ್ವದೇಶಿ ಆ್ಯಪ್ ಚಿಂಗಾರಿಗೆ ಇದೀಗ ಸಿಕ್ಕಾಪಟ್ಟೆ ಬೇಡಿಕೆ ಕುದುರಿದೆ. ಇಷ್ಟು ದಿನ ತಾಳ್ಮೆಯಿಂದ ಕಾದಿದ್ದಕ್ಕೆ ಧನ್ಯವಾದ ಭಾರತ. ಈಗ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ವೇಗ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಈ ಆ್ಯಪ್ ನ ಸಹ ಸಂಸ್ಥಾಪಕ ಸುಮಿತ್ ಘೋಷ್ ತಿಳಿಸಿದ್ದಾರೆ.
ಇದೀಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ನಿಂದ ಹಲವು ಚೈನಾ ಆ್ಯಪ್ ಗಳು ಕಣ್ಮರೆಯಾಗಿವೆ. ಭಾರತದ ಬಳಕೆದಾರರು ಪರ್ಯಾಯ ಅಪ್ಲಿಕೇಶನ್ ಗಳ ಮೊರೆ ಹೋಗಿದ್ದಾರೆ.