2024 ವರ್ಷದ ಅಂತ್ಯದಲ್ಲಿ ತೆರೆಕಂಡು ತುಳುನಾಡು ಭಾಗದಲ್ಲಿ ಸಂಚಲನ ಉಂಟು ಮಾಡಿದ ತುಳು ಚಿತ್ರ ʼದಸ್ಕತ್ʼ (Daskath Movie) ಇದೀಗ ಬೆಂಗಳೂರಿನಲ್ಲಿಯೂ ಪ್ರದರ್ಶನ ಕಾಣುತ್ತಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ನಿರ್ದೇಶನದ ʼದಸ್ಕತ್ʼ ಸಿನಿಮಾ ಇದೀಗ 25 ದಿನದ ಸಂಭ್ರಮದಲ್ಲಿದೆ.
ಇದೇ ಸಂದರ್ಭದಲ್ಲಿ ಚಿತ್ರತಂಡವು ದೊಡ್ಡ ಸುದ್ದಿಯನ್ನು ಹಂಚಿಕೊಂಡಿದೆ. ಅದುವೆ ಕನ್ನಡದಲ್ಲಿ ಚಿತ್ರ ತೆರೆ ಕಾಣುವ ಬಗ್ಗೆ. ತುಳುವಿನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ʼದಸ್ಕತ್ʼ ಚಿತ್ರವು ಇದೀಗ ಡಬ್ ಆಗಿ ಕನ್ನಡದಲ್ಲಿ ರಿಲೀಸ್ ಆಗಲಿದೆ.
ನಿರ್ಮಾಪಕ ಜಗದೀಶ್.ಎನ್ ಅವರು ಸಿನಿಮಾ ನೋಡಿ ಹಕ್ಕು ಪಡೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ರೈಟ್ಸ್ ಪಡೆದಿದ್ದು, ಸದ್ಯ ಕನ್ನಡದಲ್ಲಿ ರಿಲೀಸ್ ಆಗಲಿದೆ. ಡಬ್ಬಿಂಗ್ ಕೆಲಸಗಳು ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ಅನೀಶ್.
ಇದನ್ನೂ ಓದಿ:Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್
ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವರವರ ನಿರ್ಮಾಣದ ದಸ್ಕತ್ ತುಳು ಚಲನಚಿತ್ರದ ರಚನೆ ಮತ್ತು ನಿರ್ದೇಶನವನ್ನು ಅನೀಶ್ ಪೂಜಾರಿ ವೇಣೂರು ಮಾಡಿದ್ದಾರೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ ಕಾರ್ಯ ನಿರ್ವಹಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ, ಗಣೇಶ್ ನೀರ್ಚಾಲ್ ಸಂಕಲನ ಚಿತ್ರಕ್ಕಿದೆ. ಅಲ್ಲದೇ ಚಿತ್ರಕ್ಕೆ ಸಮರ್ಥನ್ ಎಸ್.ರಾವ್ ಅವರ ಸಂಗೀತವಿದೆ.
ʼದಸ್ಕತ್ʼ ಚಿತ್ರದಲ್ಲಿ ನಾಯಕಿಯಾಗಿ ನೀನಾದೇ ನಾ ಧಾರಾವಾಹಿ ಖ್ಯಾತಿಯ ಭವ್ಯ ಪೂಜಾರಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ ದೀಕ್ಷಿತ್ ಕೆ ಅಂಡಿಂಜೆ, ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ, ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್ ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ, ಚೇತನ್ ಪಿಲಾರ್ ಸೇರಿ ಅನೇಕ ಕಲಾವಿದರು ನಟಿಸಿದ್ದಾರೆ.