ಮುಂಬೈ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯ ನಾಗಾಲೋಟ ಶುಕ್ರವಾರ(ಸೆಪ್ಟೆಂಬರ್ 24)ವೂ ಮುಂದುವರಿದಿದ್ದು, ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 350 ಅಂಕಗಳ ಏರಿಕೆಯೊಂದಿಗೆ ಇದೇ ಮೊದಲ ಬಾರಿಗೆ 60,000 ಅಂಕ ದಾಟುವ ಮೂಲಕ ಐತಿಹಾಸಿಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಇದನ್ನೂ ಓದಿ:ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೆ ಇಂದಿಗೆ 14 ವರ್ಷ: ಇಲ್ಲಿದೆ ಹೈಲೈಟ್ಸ್
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 359.29 ಅಂಕಗಳ ಏರಿಕೆಯೊಂದಿಗೆ 60,244.65 ಅಂಕಗಳ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 100.40 ಅಂಕಗಳ ಏರಿಕೆಯೊಂದಿಗೆ ದಾಖಲೆಯ 17,923.35 ಅಂಕಗಳ ಗಡಿ ಮುಟ್ಟಿದೆ.
ಬರೋಬ್ಬರಿ 31 ವರ್ಷಗಳ ಕಾಲಾವಧಿಯಲ್ಲಿ ಸೆನ್ಸೆಕ್ಸ್ ಒಂದು ಸಾವಿರದಿಂದ ಐತಿಹಾಸಿಕ 60,000 ಅಂಕಗಳ ಮಟ್ಟಕ್ಕೆ ತಲುಪಿದಂತಾಗಿದೆ. 1990ರ ಜುಲೈ 25ರಂದು ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1000 ಅಂಕಗಳ ಮಟ್ಟಕ್ಕೆ ಏರಿಕೆಯಾಗಿತ್ತು. ಆ ನಂತರ 2015ರ ಮಾರ್ಚ್ 4ರಂದು ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಐತಿಹಾಸಿಕ 30,000 ಅಂಕಗಳ ಮಟ್ಟಕ್ಕೆ ತಲುಪಿತ್ತು.
ಇದೀಗ ಆರು ವರ್ಷಗಳ ಅಂತರದಲ್ಲಿ ಸೆನ್ಸೆಕ್ಸ್ 30,000 ದಿಂದ ದಾಖಲೆಯ 60,000 ಸಾವಿರಕ್ಕೆ ತಲುಪಿದಂತಾಗಿದೆ. ಸೆನ್ಸೆಕ್ಸ್, ನಿಫ್ಟಿ ದಾಖಲೆ ಏರಿಕೆಯಿಂದ ಇನ್ಫೋಸಿಸ್, ಎಲ್ ಆ್ಯಂಡ್ ಟಿ, ಎಚ್ ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್, ಟಿಸಿಎಸ್, ಟೆಕ್ ಮಹೀಂದ್ರ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿದೆ.
ಎನ್ ಟಿಪಿಸಿ, ಎಚ್ ಯುಎಲ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್ ಷೇರುಗಳು ನಷ್ಟ ಕಂಡಿದೆ. ಬಾಂಬೆ ಷೇರುಪೇಟೆಯಲ್ಲಿನ ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ಲಾಭ ತಂದಿರುವುದಾಗಿ ವರದಿ ತಿಳಿಸಿದೆ.