ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ಷೇರುವಹಿವಾಟಿನ ನಡುವೆಯೂ ಬ್ಯಾಂಕಿಂಗ್ ಮತ್ತು ಫೈನಾಶ್ಶಿಯಲ್ ಷೇರುಗಳ ಮಾರಾಟದಲ್ಲಿ ಕುಸಿತ ಕಂಡ ಪರಿಣಾಮ ಸೋಮವಾರ (ಫೆ.07) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1024 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಜೀವಬೆದರಿಕೆ: ಒವೈಸಿ ಕೇಂದ್ರದ ಝಡ್ ಶ್ರೇಣಿ ಭದ್ರತೆ ಪಡೆದುಕೊಳ್ಳಬೇಕು: ಅಮಿತ್ ಶಾ ಮನವಿ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,023.63 ಅಂಕಗಳಷ್ಟು ಇಳಿಕೆಯಾಗಿದ್ದು, 57,621.19 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 302.70ಅಂಕ ಕುಸಿತವಾಗಿದ್ದು, 17,213.60 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಎಲ್ ಆ್ಯಂಡ್ ಟಿ, ಎಚ್ ಡಿಎಫ್ ಸಿ, ಬಜಾಜ್ ಫಿನ್ ಸರ್ವ್ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಪವರ್ ಗ್ರಿಡ್, ಎನ್ ಟಿಪಿಸಿ, ಟಾಟಾ ಸ್ಟೀಲ್, ಎಸ್ ಬಿಐ ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ.
ಟೋಕಿಯೋ ಮತ್ತು ಸಿಯೋಲ್ ಷೇರುಮಾರುಕಟ್ಟೆ ಸೆನ್ಸೆಕ್ಸ್ ಕುಸಿತ ಕಂಡಿದ್ದು, ಹಾಂಗ್ ಕಾಂಗ್ ಮತ್ತು ಶಾಂಘೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯಲ್ಲಿರುವುದಾಗಿ ವರದಿ ತಿಳಿಸಿದೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಾಹ್ನ 1,300ಕ್ಕೂ ಅಧಿಕ ಅಂಕಗಳಷ್ಟು ಇಳಿಕೆ ಕಂಡಿತ್ತು.