ಮುಂಬೈ: ಬಾಂಬೆ ಷೇರುಪೇಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಇದರಿಂದ ಷೇರು ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಗುರುವಾರ (ಅಕ್ಟೋಬರ್ 26) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 900.91ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:Goa; ಕರಾವಳಿಯಲ್ಲಿ ದಸರಾ ರಜೆ ವೇಳೆ ವಿದೇಶಿ ಮಹಿಳೆ ಸೇರಿ 27 ಜನರ ರಕ್ಷಣೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 900.91 ಅಂಕಗಳಷ್ಟು ಕುಸಿತ ಕಾಣುವ ಮೂಲಕ 63,148.15 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ನಿಫ್ಟಿ 264.90 ಅಂಕ ಕುಸಿತ ಕಂಡಿದ್ದು, 18,857.30 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಸುಮಾರು 1,943 ಷೇರುಗಳು ನಷ್ಟ ಅನುಭವಿಸಿದ್ದು, 101 ಷೇರುಗಳ ಬೆಲೆ ಯಥಾಸ್ಥಿತಿಯಲ್ಲಿದ್ದು, ಸೆನ್ಸೆಕ್ಸ್ ಕುಸಿತದಿಂದ ಒಂದೇ ದಿನದಲ್ಲಿ ಹೂಡಿಕೆದಾರರು 3 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿರುವುದಾಗಿ ವರದಿ ತಿಳಿಸಿದೆ.
ಸೆನ್ಸೆಕ್ಸ್ ಕುಸಿತದಿಂದ ಮಹೀಂದ್ರಾ & ಮಹೀಂದ್ರಾ, ಬಜಾಜ್ ಫೈನಾನ್ಸ್, ಏಷಿಯನ್ ಪೇಂಟ್ಸ್, ಯುಪಿಎಲ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ನಷ್ಟ ಕಂಡಿದೆ.
ಆಕ್ಸಿಸ್ ಬ್ಯಾಂಕ್, ಎಚ್ ಸಿಎಲ್ ಟೆಕ್ನಾಲಜೀಸ್, ಅದಾನಿ ಪೋರ್ಟ್ಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಐಟಿಸಿ ಷೇರುಗಳು ಲಾಭಗಳಿಸಿದೆ. ಸೆನ್ಸೆಕ್ಸ್ ಇಳಿಕೆಯಿಂದ ಮೆಟಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಭಾರೀ ನಷ್ಟ ಅನುಭವಿಸಿದೆ.