Advertisement

ಶೇರ್‌ ಫೇರ್‌ ಇನ್ನೂ ಅಸ್ಪಷ್ಟ!

12:06 PM Jan 17, 2018 | Team Udayavani |

ಬೆಂಗಳೂರು: ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಿರುವ ಸಾರಿಗೆ ಇಲಾಖೆ, ಅಧಿಸೂಚನೆ ಹೊರಡಿಸಿದೆ. ಆದರೆ, ಆ್ಯಪ್‌ ಆಧಾರಿತ ಶೇರ್‌ ಟ್ಯಾಕ್ಸಿಗಳ ದರ (ಫೇರ್‌) ನಿಗದಿಗೆ ಸಂಬಂಧಿಸಿದಂತೆ ಸ್ವತಃ ಇಲಾಖೆಯಲ್ಲೇ ಗೊಂದಲ ಇದೆ.

Advertisement

ಪ್ರಸ್ತುತ ಹೊರಡಿಸಿರುವ ಅಧಿಸೂಚನೆ ಪ್ರಕಾರ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಸೇರಿದಂತೆ ವಿವಿಧ ಮಾದರಿಯ ಟ್ಯಾಕ್ಸಿ ಸೇವೆಗೆ ದರ ನಿಗದಿಪಡಿಸಲಾಗಿದೆ. ಆದರೆ, ನಗರದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಶೇರ್‌ ಟ್ಯಾಕ್ಸಿ (ಶೇರ್‌ ರೈಡ್‌) ಸೇವೆಯ ದರದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಈ ಕುರಿತು ಸಾರಿಗೆ ಇಲಾಖೆ ಬಳಿಯೂ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಇಲಾಖೆ ನಿರ್ಧರಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ, “ಓಲಾ ಶೇರ್‌, ಉಬರ್‌ ಶೇರ್‌ ರೀತಿಯ ಕ್ಯಾಬ್‌ ಶೇರ್‌ ಮಾಡುವ ಸೇವೆಗಳಿಗೆ ದರ ನಿಗದಿ ಮಾಡುವ ಕುರಿತು ನಮಗೂ ಸ್ಪಷ್ಟತೆ ಇಲ್ಲ. ಆದ್ದರಿಂದ ಈ ಸಂಬಂಧ ಸ್ಪಷ್ಟನೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಶೇರ್‌ ಟ್ಯಾಕ್ಸಿಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಹಾಗೊಂದು ವೇಳೆ ಈ ಮಾದರಿಯ ಸೇವೆಗೆ ದರ ನಿಗದಿಪಡಿಸಿದರೆ, ಶೇರ್‌ ಟ್ಯಾಕ್ಸಿ ಅಧಿಕೃತವಾಗುತ್ತದೆ. ಅಲ್ಲದೆ, ಒಂದು ಟ್ಯಾಕ್ಸಿಯಲ್ಲಿ ಬೇರೆ ಬೇರೆ ಕಡೆಯಿಂದ ನಾಲ್ವರು ಪ್ರಯಾಣಿಸುತ್ತಾರೆ ಹಾಗೂ ವಿವಿಧ ಸ್ಥಳಗಳಲ್ಲಿ ಇಳಿಯತ್ತಾರೆ. ಅವರೆಲ್ಲರಿಗೂ ದರ ನಿಗದಿ ಹೇಗೆ ಇನ್ನೂ ಸ್ಪಷ್ಟತೆ ಇಲ್ಲ. ಇದೆಲ್ಲದರ ಹಿನ್ನೆಲೆಯಲ್ಲಿ ಪತ್ರ ಬರೆಯಲಾಗುತ್ತಿದೆ ಎಂದರು.

ವಾಹನ ತೆರಿಗೆ ವಿನಾಯಿತಿ: ರಾಜ್ಯದಲ್ಲಿ ಈವರೆಗೆ ಒಟ್ಟಾರೆ 11,836 ಬ್ಯಾಟರಿ ಚಾಲಿತ ವಾಹನಗಳ ನೋಂದಣಿಯಾಗಿದ್ದು, ಈ ಪೈಕಿ ಅರ್ಧದಷ್ಟು ವಾಹನಗಳು ಬೆಂಗಳೂರಿನಲ್ಲೇ ಇವೆ ಎಂದು ಆಯುಕ್ತ ಬಿ. ದಯಾನಂದ ಹೇಳಿದರು. ಎಲೆಕ್ಟ್ರಿಕ್‌ ವಾಹನಗಳನ್ನು ಪ್ರೋತ್ರಾಹಿಸುವ ನಿಟ್ಟಿನಲ್ಲಿ ಸರ್ಕಾರ “ಕರ್ನಾಟಕ ಎಲೆಕ್ಟ್ರಿಕ್‌ ವೇಹಿಕಲ್‌ ಆಂಡ್‌ ಎನರ್ಜಿ ಸ್ಟೋರೇಜ್‌ ಪಾಲಿಸಿ-2017′ ರೂಪಿಸಿದ್ದು, ಇದರಡಿ ಎಲೆಕ್ಟ್ರಿಕ್‌ ವಾಹನಗಳಿಗೆ ಮೋಟಾರು ವಾಹನ ತೆರಿಗೆ ವಿನಾಯ್ತಿ ನೀಡಲಾಗಿದೆ. ನಗರದಲ್ಲಿ 6,246 ವಾಹನಗಳಿವೆ ಎಂದು ವಿವರಿಸಿದರು.

Advertisement

ಗಡುವಿನ ನಂತರ ಕಾರ್ಯಾಚರಣೆ: ಅದೇ ರೀತಿ ಆಟೋ ಚಾಲಕರೂ ಓಲಾ ರೀತಿಯ ಅಗ್ರಿಗೇಟರ್‌ಗಳೊಂದಿಗೆ ಲಿಂಕ್‌ ಮಾಡಿಕೊಂಡಿದ್ದಾರೆ. ಆದರೆ, ಅವರ್ಯಾರೂ ಅಗ್ರಿಗೇಟರ್‌ ಕಾಯ್ದೆಗೆ ಒಳಪಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಆಟೋಗಳನ್ನೂ ಕಾಯ್ದೆಗೆ ಒಳಪಡಿಸಲಾಗುವುದು ಎಂದ ಅವರು, ದರ ನಿಗದಿ ಅಧಿಸೂಚನೆ ಪಾಲನೆಗಾಗಿ ಅಗ್ರಿಗೇಟರ್‌ ಸಂಸ್ಥೆಗಳು ಮೂರು ದಿನ ಕಾಲಾವಕಾಶ ಕೋರಿವೆ. ಹೀಗಾಗಿ ಮೂರು ದಿನ ಗಡುವಿನ ನಂತರ ಕಾರ್ಯಾಚರಣೆ ನಡೆಸಲಾಗುವುದು ಎಂದು ಆಯುಕ್ತ ಬಿ. ದಯಾನಂದ ತಿಳಿಸಿದರು.

ಓಮ್ನಿ ಆ್ಯಂಬುಲೆನ್ಸ್‌ ನಿರ್ಬಂಧ: ಏ.1ರ ನಂತರ ರಾಜ್ಯದಲ್ಲಿ ಓಮ್ನಿ ಆ್ಯಂಬುಲನ್ಸ್‌ಗಳ ಕಾರ್ಯಾಚರಣೆಗೆ ನಿರ್ಬಂಧ ವಿಧಿಸಲಾಗುವುದು. ನ್ಯಾಯಾಲಯದ ಸೂಚನೆ ಮೇರೆಗೆ ಮಾರ್ಚ್‌ ಅಂತ್ಯದವರೆಗೆ ಈ ಓಮ್ನಿ ಆ್ಯಂಬುಲನ್ಸ್‌ಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಫೆ.1ರಿಂದ ಅಟೋಮೆಟಿಕ್‌ ಎಫ್ಸಿ: ನೆಲಮಂಗಲದಲ್ಲಿ ವಾಹನಗಳ ಅಟೋಮೆಟಿಕ್‌ ಅರ್ಹತಾ ಪತ್ರ (ಎಫ್ಸಿ) ವಿತರಣೆ ಕೇಂದ್ರ ಆರಂಭಿಸಿದ್ದು, ಈಗಾಗಲೇ 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಈ ಕೇಂದ್ರದಲ್ಲಿ ಅರ್ಹತಾ ಪತ್ರ ನೀಡಲಾಗುತ್ತಿದೆ. ಫೆ.1ರಿಂದ ಆ್ಯಂಬುಲನ್ಸ್‌ಗಳಿಗೂ ಇಲ್ಲಿ ಎಫ್ಸಿ ನೀಡಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.

102 ಕೋಟಿ ರೂ.ದಂಡ ಸಂಗ್ರಹ: ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 14.98 ಲಕ್ಷ ವಾಹನಗಳ ತಪಾಸಣೆ ನಡೆಸಿದ್ದು, 22,107 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪಾಸಣೆ ನಂತರ 1.89 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು, 22,107 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ದಂಡ ಮತ್ತು ತೆರಿಗೆ ರೂಪದಲ್ಲಿ 102.79 ಕೋಟಿ ರೂ. ಸಂಗ್ರಹಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ, 15 ಕೋಟಿ ರೂ. ಹೆಚ್ಚು ತೆರಿಗೆ ಮತ್ತು ದಂಡ ವಸೂಲಿಯಾಗಿದೆ. ವಶಪಡಿಸಿಕೊಂಡ ವಾಹನಗಳಲ್ಲಿ 3,157 ಭಾರಿ ಸರಕು ಸಾಗಣೆ ವಾಹನಗಳಾಗಿದ್ದು, 6.41 ಕೋಟಿ ದಂಡವನ್ನು ಸ್ಥಳದಲ್ಲೇ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next