ಮುಂಬಯಿ: ಯುರೋಪಿಯನ್ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟು ಹಾಗು ವಿದೇಶಿ ಬಂಡವಾಳದ ಒಳಹರಿವಿನ ಪರಿಣಾಮ ಗುರುವಾರ (ಸೆಪ್ಟೆಂಬರ್ 16) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಇದೇ ಮೊದಲ ಬಾರಿಗೆ 59 ಸಾವಿರದ ಗಡಿ ದಾಟುವ ಮೂಲಕ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ. ಸೆನ್ಸೆಕ್ಸ್ ಏರಿಕೆಯಿಂದ ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ಲಾಭವಾದಂತಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರ್ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಹೂವು
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 417.96 ಅಂಕ ಏರಿಕೆಯೊಂದಿಗೆ ದಾಖಲೆಯ 59,141.16 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಏತನ್ಮಧ್ಯೆ ಷೇರುಪೇಟೆಯ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 59,204.29ರ ಗಡಿ ತಲುಪಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 110.05 ಅಂಕ ಏರಿಕೆಯೊಂದಿಗೆ 17,629.50 ಅಂಕಗಳ ಹೊಸ ದಾಖಲೆಯ ಮಟ್ಟ ತಲುಪಿದೆ. ಮಧ್ಯಂತರ ವಹಿವಾಟಿನ ವೇಳೆ ನಿಫ್ಟಿ 17,644.60 ಅಂಕಗಳ ಮಟ್ಟಕ್ಕೆ ಏರಿಕೆಯಾಗಿತ್ತು.
ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆಯಿಂದ ಇಂಡಸ್ ಇಂಡ್ ಬ್ಯಾಂಕ್, ಐಟಿಸಿ, ಎಸ್ ಬಿಐ, ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಶೇ.7ಕ್ಕಿಂತಲೂ ಅಧಿಕ ಲಾಭಗಳಿಸಿದೆ.
ಟಿಸಿಎಸ್, ಟೆಕ್ ಮಹೀಂದ್ರ, ಟಾಟಾ ಸ್ಟೀಲ್, ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್ ಮತ್ತು ಡಾ.ರೆಡ್ಡೀಸ್ ಷೇರುಗಳು ನಷ್ಟ ಕಂಡಿದೆ. ಶಾಂಘೈ, ಸಿಯೋಲ್, ಟೋಕಿಯೋ ಹಾಗೂ ಹಾಂಗ್ ಕಾಂಗ್ ಷೇರು ಮಾರುಕಟ್ಟೆ ವಹಿವಾಟು ನಷ್ಟದಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.