Advertisement

ಕೊನೆಗೂ ನನಸಾಯಿತು ‘ಮೇಷ್ಟ್ರು’ ಕನಸು : ಇಂದು ಶರಣು ಸಲಗರ ಶಾಸಕ

04:20 PM May 02, 2021 | Team Udayavani |

ಬೀದರ್ : ಜಿಲ್ಲಾ ಪಂಚಾಯಿತ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದ ಸಾಮಾನ್ಯ ಕಾರ್ಯಕರ್ತ ಶರಣು ಸಲಗರ ಈಗ ಶಾಸಕರಾಗಿ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶಿಸಿ ಗಮನ ಸೆಳೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದ್ದ ಶರಣು ಸಲಗರ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Advertisement

ಬಿಎಸ್‌ ಸಿ -ಬಿಎಡ್ ಪದವೀಧರರಾಗಿರುವ ಸಲಗರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ ನಡೆಸುತ್ತಿದ್ದರು. ಈ ಸಂದರ್ಭದಲ್ಲೇ ಜಿ.ಪಂ ಅಧ್ಯಕ್ಷರ ಆಪ್ತ ಸಹಾಯಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ಅವರಿಗೆ ರಾಜಕೀಯ ಕ್ಷೇತ್ರ ಸೆಳೆದಿತ್ತು. ಆಳಂದ ತಾಲೂಕಿನ ಚಿಂಚನಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ (2016) ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿದ್ದರು.

ನಂತರ ಕಲ್ಬುರ್ಗಿಯ ಗ್ರಾಮೀಣ ಮೀಸಲು ಕ್ಷೇತ್ರಕ್ಕೆ 2019 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರಣು ಸಲಗರಗೆ ಶಾಸಕರಾಗಿ ಆಯ್ಕೆಯಾಗುವ ಕನಸು ಹೊತ್ತು, ತಮ್ಮ ತವರು ಗ್ರಾಮ ಕಮಲಾಪೂರ ತಾಲೂಕಿನ ವಿ.ಕೆ ಸಲಗರಕ್ಕೆ ಹೊಂದಿಕೊಂಡಿರುವ ಬಸವಕಲ್ಯಾಣ ಕ್ಷೇತ್ರದ ಮುಖ ಮಾಡಿದರು. ಎರಡು ವರ್ಷಗಳ ಕಾಲ ಸದ್ದಿಲ್ಲದೇ ಸಾಮಾಜಿಕ ಕಾರ್ಯ ಆರಂಭಿಸಿದರು. ವಸತಿ ನಿಲಯದ ವಾಡ್‌ನ ಆಗಿದ್ದ ಅವರ ಪತ್ನಿ ಸಾವಿತ್ರಿ ಸಲಗರ ಬಸವಕಲ್ಯಾಣದ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇದೇ ವೇಳೆ ಅಪ್ಪಳಿಸಿದ ಹೆಮ್ಮಾರಿ ಕೋವಿಡ್-19 ಲಾಕ್‌ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿದವರ ಆರ್ಥಿಕ ನೆರವಿಗೆ ನಿಂತರು. ಚಿರಪರಿಚಿತನಾದರೂ ಪ್ರತಿ ಗ್ರಾಮಕ್ಕೆ ಸಂಚರಿಸಿ ಆತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಾ, ಆಹಾರದ ಕಿಟ್ ಹಂಚಿಕೆ, ಆರೋಗ್ಯ- ಶಿಕ್ಷಣಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಜನರ ವಿಶ್ವಾಸ ಗಳಿಸಿದ್ದರು.

2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಸಲಗರ ಅವರಿಗೆ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಆಕಸ್ಮಿಕವಾಗಿ ಎದುರಾಯಿತು. ಘಟನಾನುಘಟಿ ಆಕಾಂಕ್ಷಿಗಳ ನಡುವೆ ತೀವ್ರ ಪ್ರಯತ್ನ ನಡೆಸಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದ ಶರಣು, ಹೊರ ಜಿಲ್ಲೆಯವರು ಎಂಬ ವಿರೋಧದ ನಡುವೆಯೂ ಈಗ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಅವರನ್ನು ಮಣಿಸುವ ಮೂಲಕ ಶಾಸಕರಾಗಿ ಆಯ್ಕೆಯಾದದ್ದು ವಿಶೇಷ ಎನಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next