Advertisement

JDS ಸಭೆಗೆ ಶರಣಗೌಡ ಕುಂದಕೂರು ಗೈರು; ಗೊಂದಲ ಪರಿಹರಿಸುತ್ತೇನೆ ಎಂದ ಎಚ್‌ಡಿಕೆ

10:04 PM Nov 08, 2023 | Team Udayavani |

ಬೆಂಗಳೂರು: ಹಾಸನದಲ್ಲಿ ನಡೆದ ಜೆಡಿಎಸ್‌ ಶಾಸಕರ ಸಭೆಗೆ ಗೈರಾಗುವ ಮೂಲಕ ಶಾಸಕ ಶರಣಗೌಡ ಕಂದಕೂರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ ಜತೆಗಿನ ಮೈತ್ರಿ ಸಂಬಂಧ ಎಚ್‌.ಡಿ.ಕುಮಾರಸ್ವಾಮಿ ಜತೆಗೆ ಮುನಿಸಿಕೊಂಡಿರುವ ಅವರು ಈಗ ಸಭೆಯಿಂದಲೂ ದೂರ ಉಳಿದಿದ್ದಾರೆ.

Advertisement

ನನಗೆ ಸಮಿತಿ ಸಭೆ ಇತ್ತು. ಹೀಗಾಗಿ ಸಭೆಯಲ್ಲಿ ಭಾಗಿಯಾಗಿಲ್ಲ. ಮೂರ್ನಾಲ್ಕು ಕಮಿಟಿ ಸಭೆಗೆ ಗೈರಾಗಿ¨ªೆ. ಹೀಗಾಗಿ ಹಾಸನಕ್ಕೆ ಹೋಗಿಲ್ಲ. ನಾನು ಗೈರಾಗುವ ಕುರಿತು ಕುಮಾರಸ್ವಾಮಿ ಗಮನಕ್ಕೆ ತಂದಿಲ್ಲ ಎಂದು ಕುಂದಕೂರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಭೆಗೆ ಬರುವಂತೆ ನನಗೂ ಆಹ್ವಾನ ಇತ್ತು. ಕೆಲವು ವಿಷಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಅಸಮಾಧಾನ ಇದ್ದರೂ ಹೇಳುವುದಿಲ್ಲ. ನಿಖೀಲ್‌ ಹಾಗೂ ನಾನು ಭೇಟಿ ಆದಾಗ ಕೆಲವು ವಿಚಾರಗಳನ್ನು ಚರ್ಚಿಸಿದ್ದೇವೆ. ಮೈತ್ರಿಗೆ ಸಂಬಂಧಪಟ್ಟಂತೆ ಈ ಹಿಂದೆ ನೀಡಿದ ಹೇಳಿಕೆಗೆ ನಾನು ಬದ್ಧನಿದ್ದೇನೆ. ಹಾಸನಾಂಬೆ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ಖಂಡಿತವಾಗಲೂ ನನಗೆ ಅಸಮಾಧಾನ ಇದೆ. ಹಾಗೆಂದು ಕಾಂಗ್ರೆಸ್‌ನವರು ನನ್ನನ್ನು ಸಂಪರ್ಕಿಸಿಲ್ಲ. ಅವರಿಗೆ 135 ಸ್ಥಾನ ಇದೆ. ಹೀಗಾಗಿ ಅವರಿಗೆ ನನ್ನ ಅಗತ್ಯ ಇಲ್ಲ. ನಾನು ಶಾಸಕನಾಗಿ ಸಿಎಂ ಹಾಗೂ ನಾಯಕರ ಜತೆ ಅಭಿವೃದ್ಧಿ ಕುರಿತು ಮಾತನಾಡಿದ್ದೇನೆ ಎಂದು ತಿಳಿಸಿದರು.

ಶರಣಗೌಡ ಮನೆ ಮಗ
ಈ ನಡುವೆ ಹಾಸನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಶರಣಗೌಡ ನಮ್ಮ ಮನೆಯ ಮಗ. ಅವರು ಸ್ವಲ್ಪ ಗೊಂದಲದಲ್ಲಿದ್ದಾರೆ. ಅವರ ಗೊಂದಲ ಪರಿಹಾರ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.

Advertisement

ಜೆಡಿಎಸ್‌ ಶಾಸಕರ ಒಗ್ಗಟ್ಟು ಪ್ರದರ್ಶನ
ಹಾಸನ: ಹಲವು ರಾಜಕೀಯ ಸವಾಲುಗಳ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಹಾಸನಾಂಬೆ ಸನ್ನಿಧಿಯಲ್ಲಿ ಬುಧವಾರ ಶಾಸಕರ ಒಗ್ಗಟ್ಟು ಪ್ರದರ್ಶಿಸುವ ಮೂಲಕ ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್‌ಗೆ ರವಾನಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿಯಿಂದ ಪಕ್ಷದ ಕೆಲವು ಶಾಸಕರಲ್ಲಿ ಉಂಟಾಗಿರುವ ಅಸಮಾಧಾನ ಮತ್ತು ಕಾಂಗ್ರೆಸ್‌ನಿಂದ ಆಪರೇಷನ್‌ ಹಸ್ತದ ಭೀತಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆದ ಎಚ್‌.ಡಿ.ಕುಮಾರಸ್ವಾಮಿ, ಮಂಗಳವಾರ ರಾತ್ರಿ ಹಾಸನದ ಹೊರ ವಲಯದ ರೆಸಾರ್ಟೊಂದರಲ್ಲಿ ಶಾಸಕರ ಸಭೆ ನಡೆಸುವ ಮೂಲಕ ಬಿಜೆಪಿ ಜೊತೆ ಜೆಡಿಎಸ್‌ನ ಮೈತ್ರಿಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಜತೆಗೆ ಕಾಂಗ್ರೆಸ್‌ ನಡೆಸುವ ಆಪರೇಷನ್‌ ಹಸ್ತದ ಬಲೆಗೆ ಬೀಳದಂತೆ ಎಚ್ಚರದಿಂದಿರಬೇಕು. ಒಂದು ವೇಳೆ ಕಾಂಗ್ರೆಸ್‌ಗೆ ಹೋದರೂ ಈಗಿನ ಸಂದರ್ಭದಲ್ಲಿ ಎದುರಾಗಬಹುದಾದ ದುಷ್ಪರಿಣಾಮಗಳ ಬಗ್ಗೆಯೂ ವಿವರಿಸಿದ್ದಾರೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ ಕುಮಾರಸ್ವಾಮಿ ಅವರು ಜೆಡಿಎಸ್‌ನ 16 ಶಾಸಕರೊಂದಿಗೆ ಹಾಸನಾಂಬೆ ದೇಗುಲಕ್ಕೆ ಬಂದು ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ಗುಪ್ತಚರ ಮಾಹಿತಿ ಪ್ರಕಾರ ಬಿಜೆಪಿ ಜತೆ ಕಾಂಗ್ರೆಸ್‌ನ 45 ಶಾಸಕರು ಸಂಪರ್ಕದಲ್ಲಿದ್ದಾರೆ. ಅದನ್ನು ತಡೆಯಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಜೆಡಿಎಸ್‌ ಶಾಸಕರಿಗೆ ಮಾನಸಿಕ ಒತ್ತಡ ಹೇರಿ ಕಾಂಗ್ರೆಸ್‌ಗೆ ಸೆಳೆಯುವ ಕೀಳು ರಾಜಕೀಯ ಮಾಡುತ್ತಿದ್ದಾರೆ. 136 ಸ್ಥಾನ ಇದ್ದರೂ ಆಪರೇಷನ್‌ ಮಾಡಲು ಹೊರಟಿರುವ ಕಾಂಗ್ರೆಸ್‌ನವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಲು ಹೊರಟಿದ್ದಾರೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next